ರಾಮಕುಂಜ: ಇತ್ತೀಚೆಗೆ ನಾಗಾಲ್ಯಾಂಡ್‌ನಲ್ಲಿ ನಿಧನರಾದ ’ಟೈಮ್ಸ್ ಆಫ್ ಕುಡ್ಲ’ ತುಳು ವಾರಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್ ಬಂಡಿಮಾರ್ (41ವ.) ರವರಿಗೆ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ರಾಮಕುಂಜದಲ್ಲಿ ನಡೆದ ಕಸಾಪ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಲಾಯಿತು.
ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಸೇಸಪ್ಪ ರೈ ಅವರು ನುಡಿನಮನ ಸಲ್ಲಿಸಿ, ತುಳು ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸುತ್ತಿದ್ದ ಶಶಿ ಆರ್.ಬಂಡಿಮಾರ್ ಅವರು 15 ವರ್ಷಗಳಿಂದ ತುಳು ಪತ್ರಿಕೆ ನಡೆಸುತ್ತಿದ್ದರು. ತುಳು ಭಾಷೆ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅವರ ಶ್ರಮ ಅನನ್ಯವಾದದ್ದು. ಎಲೆಮರೆಯ ಕಾಯಿಯಂತೆ ತುಳು ಸಾಹಿತ್ಯಕ್ಕೆ ತನ್ನದೇ ಕೊಡುಗೆ, ತುಳು ಸಂಘ ಸಂಸ್ಥೆಗಳಿಗೆ ಸಹಕಾರದೊಂದಿಗೆ ತುಳುವಿಗಾಗಿ ತನು ಮನವನ್ನು ಸಮರ್ಪಿಸಿದ್ದ ಓರ್ವ ತುಳು ರತ್ನವನ್ನು ಈ ಮಣ್ಣು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು.
ಸಭೆಯಲ್ಲಿ ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಕಡಬ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ, ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ಸದಸ್ಯರಾದ ವೆಂಕಟರಮಣ ನೆಲ್ಯಾಡಿ, ಗ್ರೇಸಿ ಪಿಂಟೋ ಕಡಬ, ಪುಷ್ಪಾವತಿ, ಶಿಕ್ಷಕ ಹರೀಶ್ ಆಚಾರ್ಯ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.