ಫೆ.8: ಬನ್ನೂರಿನಲ್ಲಿ 20ನೇ ವರ್ಷದ ಸಾಮೂಹಿಕ ಶನಿಪೂಜೆ, ಸ್ಫೂರ್ತಿ ಯುವ ಸಂಸ್ಥೆಗಳ 35ನೇ ವಾರ್ಷಿಕೋತ್ಸವ

0

ಪುತ್ತೂರು:ಬನ್ನೂರು ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಸ್ಪೂರ್ತಿ ಯುವಕ-ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ ಹಾಗೂ ಸ್ಫೂರ್ತಿ ಬಾಲಸಭಾ ಇದರ 35ನೇ ವಾರ್ಷಿಕೋತ್ಸವವು ಫೆ.8ರಂದು ನಡೆಯಲಿದೆ ಎಂದು ಸ್ಫೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್ ಹೇಳಿದರು.


ಫೆ.5ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿಹೋಮ, ಶ್ರೀ ಶನೀಶ್ವರ ದೇವರ ಪೂಜೆ ಆರಂಭ, ಮಧ್ಯಾಹ್ನ ಶ್ರೀದೇವರಿಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯಲ್ಲಿ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಮರೀಲ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಶ್ರೀ ಶನೀಶ್ವರ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಶ್ರೀದೇವಿ ಯಕ್ಷಗಾನ ಕಲಾ ಸಂಘ ಬನ್ನೂರು ಇವರಿಂದ ದಕ್ಷಯಜ್ಞ ಭಾರ್ಗವ ವಿಜಯ ಎಂಬ ಯಕ್ಷಗಾನ ನಡೆಯಲಿದೆ.


ಸಂಜೆ ವಾರ್ಷಿಕೋತ್ಸವ:
ಸಂಜೆ ನಡೆಯುವ ಸ್ಪೂರ್ತಿ ಯುವಕ-ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ ಹಾಗೂ ಸ್ಫೂರ್ತಿ ಬಾಲಸಭಾ ಇದರ 35ನೇ ವಾರ್ಷಿಕೋತ್ಸವದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ವೀಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಅಧ್ಯಕ್ಷತೆ ವಹಿಸಲಿದ್ದಾರೆ. ಕಟ್ಟೆಮಾರು ಶ್ರೀ ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರು ದೀಪ ಪ್ರಜ್ವಲಿಸಲಿದ್ದಾರೆ. ವಿಧಾನ ಸಭಾ ಸಭಾಪತಿ ಯು.ಟಿ ಖಾದರ್, ಶಾಸಕ ಅಶೋಕ್ ಕುಮಾರ್ ರೈ, ನಗರ ಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಸದಸ್ಯೆ ಗೌರಿ ಬನ್ನೂರು, ನಗರ ಠಾಣಾ ನಿರೀಕ್ಷಕ ಜಾನ್ಸನ್ ಡಿ’ಸೋಜ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ವರ್ಷದ ಸ್ಫೂರ್ತಿ ಶ್ರೀ ಪ್ರಶಸ್ತಿಯನ್ನು ಶಿವನಗರ ಶಿವಮಣಿ ಕಲಾ ಸಂಘದ ಸಂಚಾಲಕ ಕೆ.ಎಸ್ ಮನುಕುಮಾರ್‌ಗೆ ನೀಡಿ ಗೌರವಿಸಲಾಗುವುದು. ನಿವೃತ್ತ ಸೈನಿಕ ಅಶೋಕ, ರಾಜ್ಯೋತ್ಸವ ಪುರಸ್ಕೃತ ಶೇಖರ ಭಂಡಾರಿ, ಖ್ಯಾತ ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿಯವರನ್ನು ಸನ್ಮಾನಿಸಲಾಗುವುದು. ಮೆಸ್ಕಾಂ ಪವರ್‌ಮೆನ್‌ಗಳಾದ ಸಂತೋಷ್, ಪೂವಪ್ಪ, ಜಗದೀಶ ಹಾಗೂ ಶೇಖರ್‌ರವರನ್ನು ಗೌರವಿಸಲಾಗುವುದು. ಬನ್ನೂರು ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್ ಹಾಗೂ ಹಿತೇಶ್‌ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮದ ಬಳಿಕ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯಿಸುವ ‘ಮಾರ್ನೆಮಿ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ, ಕಾರ್ಯದರ್ಶಿ ನಿತಿನ್ ಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಶರತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here