ಪುತ್ತೂರು: ತನ್ನ ಖಾತೆಗೆ ತಪ್ಪಿ ಬಂದ 36 ಸಾವಿರ ರೂಪಾಯಿಯನ್ನು ಕೂಡಲೇ ವಾಪಸ್ ಕಳುಹಿಸುವ ಮೂಲಕ ಶಿಕ್ಷಕರೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ಫೆ.6ರಂದು ನಡೆದಿದೆ.
ಹಿರೇಬಂಡಾಡಿ ಸ.ಉ.ಹಿ.ಪ್ರಾ.ಶಾಲೆಯ ಶಿಕ್ಷಕ ಶಿವಪ್ಪ ರಾಥೋಡ್ ಅವರ ಖಾತೆಗೆ ರೂ.36,೦೦೦ ಜಮೆಯಾಗಿತ್ತು, ಬಳಿಕ ಬ್ಯಾಂಕ್ವೊಂದರ ಮ್ಯಾನೇಜರ್ ಕರೆ ಮಾಡಿ ಫಾತಿಮತ್ ಬುಶ್ರಾ ಎಂಬವರ 36,೦೦೦ ರೂ ನಿಮ್ಮ ಖಾತೆಗೆ ಜಮೆ ಆಗಿದೆ, ಅದನ್ನು ವಾಪಸ್ ತೆಗೆಯಬೇಕಾದರೆ ನಿಮ್ಮ ಅನುಮತಿ ಬೇಕು ಎಂದು ಕೇಳಿಕೊಂಡಿದ್ದಾರೆ. ಶಿಕ್ಷಕ ಶಿವಪ್ಪ ರಾಥೋಡ್ ಅವರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ 36 ಸಾವಿರ ರೂ ಜಮೆ ಆಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಮನವಿಗೆ ಸ್ಪಂಧಿಸಿದ ರಾಥೋಡ್ ಕೂಡಲೇ ತಮ್ಮ ಅನುಮತಿ ನೀಡಿದ್ದಾರೆ.
ಬಳಿಕ ಬ್ಯಾಂಕ್ನವರು ಆ ಹಣವನ್ನು ವಾಪಸ್ ಪಡೆದು ನೈಜ ಖಾತೆದಾರರಿಗೆ ವರ್ಗಾಯಿಸಿದ್ದಾರೆ. ಶಿಕ್ಷಕ ಶಿವಪ್ಪ ರಾಥೋಡ್ ಅವರಿಗೆ ಬ್ಯಾಂಕ್ ಮ್ಯಾನೇಜರ್ ಅಭಿನಂದನೆ ಸಲ್ಲಿಸಿದ್ದು ಶಿಕ್ಷಕನ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕುಂಬ್ರ ಕೆಪಿಎಸ್ ಸ್ಕೂಲ್ನಲ್ಲಿ ಶಿಕ್ಷಕರಾಗಿದ್ದ ಶಿವಪ್ಪ ರಾಥೋಡ್ ಅವರು ಇತ್ತೀಚೆಗಷ್ಟೇ ಹಿರೇಬಂಡಾಡಿ ಶಾಲೆಗೆ ವರ್ಗಾವಣೆಗೊಂಡಿದ್ದರು.
ನೂರಾರು ವಿಶೇಷ ಚೇತನರಿಗೆ ಗೂಗಲ್ ಮೀಟ್ ಮೂಲಕ ಸಹಾಯ ಮಾಡುತ್ತಾ ಬಂದಿರುವ ಶಿವಪ್ಪ ರಾಥೋಡ್ ಅವರು ಈ ಹಿಂದೆ ಕುಂಬ್ರದಲ್ಲಿ ಕೆಲವು ಮಾನವೀಯ ಕಾರ್ಯಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದರು.