ಪುತ್ತೂರು: ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸುವುದು ಹಾಗೂ ಅಡಿಕೆಯ ಸಂಭಾವ್ಯ ಪ್ರಯೋಜನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಕೊಡುಗೆ ನೀಡುವ ಉದ್ಧೇಶದಿಂದ ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ, ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗು ಶಾಸಕ ಅಶೋಕ್ ಕುಮಾರ್ ರೈರವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಣ್ಚಪ್ಪಾಡಿ ತಿಳಿಸಿದ್ದಾರೆ.
ದ.ಕ. ಜಿಲ್ಲೆ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಇಂಜಿನಿಯರಿಂಗ್ ಶಿಕ್ಷಣ ಲಭ್ಯವಿದೆ. ಆದರೆ ಈ ಭಾಗದಲ್ಲಿ ಯಾವುದೇ ಸರಕಾರಿ ಆಯುರ್ವೇದ ಕಾಲೇಜು ಇರುವುದಿಲ್ಲ. ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ದ.ಕ.ಜಿಲ್ಲೆಯಲ್ಲಿ ಜನಪ್ರಿಯವಾಗಿದೆ. ಪಾರ್ಶ್ವವಾಯು, ಅಸ್ತಮಾ, ಸಂಧಿವಾತ, ಕಾಮಾಲೆ ಹಾಗೂ ಆಧುನಿಕ ಜೀವನಶೈಲಿ ರೋಗಗಳಾದ ಮಧುಮೇಹ ಇತ್ಯಾದಿ ಕಾಯಿಲೆಗಳಿಗೆ ಹೆಚ್ಚಿನ ರೋಗಿಗಳು ಆಯುರ್ವೇದದ ಮೊರೆಹೋಗಿದ್ದಾರೆ. ಈ ಜಿಲ್ಲೆಯಿಂದ ಆಯುರ್ವೇದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಹೆಚ್ಚಿದ್ದು ಸರಕಾರಿ ಕಾಲೇಜಿನ ಅಲಭ್ಯತೆಯಿಂದ ರಾಜ್ಯ ಹಾಗೂ ದೇಶದ ವಿವಿಧೆಡೆ ಕಲಿಯುತ್ತಿದ್ದಾರೆ.
ಇದರ ಜೊತೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಿಕೆಯು ಇಂದು ಪ್ರಧಾನ ಬೆಳೆಯಾಗುತ್ತಿದೆ. ಪಾರಂಪರಿಕ ಕೃಷಿಯಾದ ಅಡಿಕೆಯನ್ನೇ ನಂಬಿ ಕೃಷಿಕರು ಬದುಕುತ್ತಿದ್ದಾರೆ. ಅಡಿಕೆಯನ್ನು ವಿವಿಧ ಆಯುರ್ವೇದ ಔಷಧಗಳಿಗೂ ಉಪಯೋಗ ಮಾಡಬಹುದು ಎಂದು ಹಲವು ಸಂಶೋಧನೆಗಳಿಂದ ದೃಢವಾಗಿದೆ. ಈಗಾಗಲೇ ಕೃಷಿಕ ಸಂಶೋಧಕ ಬದನಾಜೆ ಶಂಕರ ಭಟ್ಟರು ಅಡಿಕೆಯ ವಿವಿಧ ಔಷಧೀಯ ಗುಣಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಒಂದರ ಸ್ಥಾಪನೆಯು ಸರ್ಕಾರಿ ಮಟ್ಟದಲ್ಲಿ ಅವಶ್ಯವಾಗಿದೆ. ಇದರಿಂದ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ತುಂಬಾ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಅಡಿಕೆಯ ಸಂಭಾವ್ಯ ಪ್ರಯೋಜನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಕೊಡುಗೆ ನೀಡಿದಂತಾಗುತ್ತದೆ.
ಅಡಿಕೆಯ ಆಳವಾದ ಔಷಧೀಯ ಗುಣಗಳ ಬಗ್ಗೆಯೂ ಅಧ್ಯಯನ ನಡೆಸಲು ಉನ್ನತ ಸಂಶೋಧಕರು ಕೂಡಾ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಬಹುದು. ಈ ಕಾರಣದಿಂದ ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ, ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.