ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹೊರಗುತ್ತಿಗೆ ನೌಕರರಿಗೆ 3 ತಿಂಗಳಿಂದ ವೇತನವಿಲ್ಲ- ಸಂಕಷ್ಟದಲ್ಲಿ ರೈತನ ಮಿತ್ರರ ಬದುಕು

0

ಉಪ್ಪಿನಂಗಡಿ: ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಬರುವ ಸರಕಾರಿ ಪಶು ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಈ ಇಲಾಖೆಯ ಅಧೀನ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ಬಾರದೇ ಇದ್ದು, ಸಿಬ್ಬಂದಿಯು ಸಂಕಷ್ಟದಿಂದ ಬದುಕು ಸಾಗಿಸುವ ಪರಿಸ್ಥಿತಿ ಎದುರಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 60ರಷ್ಟು ಮಂದಿ ಹೊರಗುತ್ತಿಗೆ ಆಧಾರದಲ್ಲಿ “ಡಿ” ದರ್ಜೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ 1200ಕ್ಕೂ ಅಧಿಕ ಮಂದಿ ಸಿಬ್ಬಂದಿಗಳಿದ್ದಾರೆ. ಇವರು ಯಾರಿಗೂ ಕಳೆದ ನವೆಂಬರ್ ತಿಂಗಳಿನಿಂದ ವೇತನ ಬಾರದಿರುವುದರಿಂದ ದಿನದ ಬದುಕಿನ ನಿರ್ವಹಣೆಗಾಗಿ ಇನ್ನೊಬ್ಬರಲ್ಲಿ ಸಾಲಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ಹೊರಗುತ್ತಿಗೆ ನೌಕರರಾಗಿರುವ ಇವರು ಏಜೆನ್ಸಿ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೋರ್ವರಿಗೆ ಮಾಸಿಕ 13,172.24 ರೂಪಾಯಿ ಮಾಸಿಕ ವೇತನ ನಿಗದಿಯಾಗಿದೆ. ಆದರೆ 2024ರ ಅಕ್ಟೋಬರ್ ತಿಂಗಳ ವೇತನವು ಇವರ ಖಾತೆಗೆ ಜಮೆಯಾಗಿದ್ದು ಕೂಡಾ 2025ರ ಜನವರಿ ತಿಂಗಳಲ್ಲಿ. ಇನ್ನು 2024ರ ನವೆಂಬರ್, ಡಿಸೆಂಬರ್ ಹಾಗೂ 2025 ಜನವರಿಯ ವೇತನಕ್ಕಾಗಿ ಇವರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ ಎಂದು ದೂರಿದ್ದಾರೆ.


ರೈತರ ಆಪತ್ಫಾಂದವರು:
ಹೊರಗುತ್ತಿಗೆ ನೌಕರರಾದ ಇವರನ್ನು ಸರಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಕುಕ್ಕುಟ ಸಂವರ್ಧನಾ ಕ್ಷೇತ್ರ, ಹಂದಿ ಸಂವರ್ಧನಾ ಕ್ಷೇತ್ರ, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಸೇರಿದಂತೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಇವರುಗಳು ಕಚೇರಿಯ ಸ್ವಚ್ಚತೆಯಿಂದ ಹಿಡಿದು ಇತರೆ ಕೆಲಸಗಳನ್ನು ಮಾಡುವುದರೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ, ಚರ್ಮ ಗಂಟು ರೋಗ, ನಾಯಿಗಳಿಗೆ ರ‍್ಯಾಬೀಸ್ ಚುಚ್ಚುಮದ್ದು ಕೊಡಲು ಫೀಲ್ಡ್ ವರ್ಕ್ ಮಾಡಬೇಕಾಗುತ್ತದೆ. ಆಡುಗಳಿಗೆ ಪಿ.ಪಿ.ಆರ್. ಲಸಿಕೆ, ಕುಕ್ಕುಟಗಳು ಸೇರಿದಂತೆ ಇತರೆ ಸಾಕು ಪ್ರಾಣಿಗಳಿಗೆ ಔಷಧಿಗಳನ್ನು ನೀಡುವುದನ್ನು ಮಾಡಬೇಕಾಗುತ್ತದೆ. ಪಶು ವೈದ್ಯರೊಂದಿಗೆ ಸಹಾಯಕರಾಗಿಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಇವರು ರೈತರ ಆಪತ್ಫಾಂದವರು. ರೈತರ ನೆಮ್ಮದಿಯ ಬದುಕಿಗೆ ಕಾರಣವಾಗಿರುವ ಇವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗದಿರುವುದರಿಂದ ಕುಟುಂಬ ನಿರ್ವಹಣೆಯೇ ಕಷ್ಟಕರವಾಗುವಂತಾಗಿದೆ.


3 ತಿಂಗಳ ತನಕದ ಜವಾಬ್ದಾರಿ ಗುತ್ತಿಗೆ ಸಂಸ್ಥೆಗೆ?:
ಸರಕಾರದಿಂದ ವೇತನ ಬಿಡುಗಡೆಯಾಗದಿದ್ದರೂ, 3 ತಿಂಗಳ ತನಕದ ಸಂಬಳವನ್ನು ಪ್ರತಿ ತಿಂಗಳು ನೌಕರರಿಗೆ ಒಪ್ಪಂದದ ಪ್ರಕಾರ ಏಜೆನ್ಸಿ ಸಂಸ್ಥೆಯು ಪಾವತಿಸಬೇಕಾಗುತ್ತದೆ. ಆದರೆ ಇಲ್ಲಿ ಆ ರೀತಿಯಾಗುತ್ತಿಲ್ಲ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ನೌಕರರು ಯಾವುದೇ ಸಂಘಟನೆಯನ್ನು ಕಟ್ಟಿಕೊಂಡಿಲ್ಲ. ಸಂಘಟನಾತ್ಮಕವಾಗಿ ಒಗ್ಗೂಡಿಲ್ಲ ಕೂಡ. ಆದ್ದರಿಂದ ತಮಗೆ ಅನ್ಯಾಯವಾದಾಗ ಹೋರಾಟಕ್ಕೂ ಇಳಿಯುವುದಿಲ್ಲ. ಇದೆಲ್ಲಾ ಏಜೆನ್ಸಿ ಸಂಸ್ಥೆಗಳಿಗೆ ವರದಾನವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಸರಕಾರದಿಂದ ಸಕಾಲಕ್ಕೆ ವೇತನ ಬಿಡುಗಡೆಯಾದರೂ ಏಜೆನ್ಸಿ ಸಂಸ್ಥೆಗಳು ಅವುಗಳನ್ನು ತಮ್ಮ ವಶದಲ್ಲಿಯೇ ಹಿಡಿದಿಟ್ಟುಕೊಂಡು ಬ್ಯಾಂಕ್‌ಗಳಲ್ಲಿ ಬಡ್ಡಿಯ ಲಾಭ ಪಡೆಯುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ರೈತರ ಮಿತ್ರರೆನಿಸಿಕೊಂಡಿರುವ ಇವರಿಗೆ ಕಾಲಕಾಲಕ್ಕೆ ಸರಿಯಾಗಿ ವೇತನ ಬಿಡುಗಡೆಯಾಗಬೇಕಿದೆ. ಅವರಿಗೂ ಸ್ವಾಭಿಮಾನಿ ಬದುಕಿಗೆ ಸರಕಾರ ಹಾಗೂ ಏಜೆನ್ಸಿ ಸಂಸ್ಥೆಗಳು ಅನುವು ಮಾಡಿಕೊಡಬೇಕಾಗಿದೆ ಎಂಬ ಆಗ್ರಹ ವ್ಯಕ್ತವಾಗಿದೆ.

ನಾಳೆಯೇ ಸಂಸ್ಥೆ ಖಾತೆಗೆ ಜಮೆ ಮಾಡಲಾಗುವುದು:
ಗುತ್ತಿಗೆ ಪಡೆದ ಸಂಸ್ಥೆಯವರು ಸರಕಾರದಿಂದ ಹಣ ಬಿಡುಗಡೆ ಮಾಡಿಸಬೇಕು. ಅವರಿಂದಾಗಿ ವಿಳಂಬ ಆಗಿದೆ. ಇದೀಗ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಆಗಿದೆ. ನಾಳೆಯೇ ಗುತ್ತಿಗೆ ಸಂಸ್ಥೆಗೆ ವೇತನದ ಮೊತ್ತವನ್ನು ಬಿಡುಗಡೆ ಮಾಡಲಾಗುವುದು.
-ಡಾ. ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ದ.ಕ. ಜಿಲ್ಲೆ.

ವಾರದ ಒಳಗಾಗಿ ಸಮಸ್ಯೆಯನ್ನು ಸರಿಪಡಿಸಲಾಗುವುದು.
ವೇತನದ ಬಜೆಟ್ ಬಿಡುಗಡೆ ಆಗಿದ್ದು, ಟ್ರೆಜರಿಗೆ ಬಂದಿದೆ. ವಾರದ ಒಳಗಾಗಿ ಎಲ್ಲರಿಗೂ ವೇತನ ನೀಡಲು ವ್ಯವಸ್ಥೆ ಮಾಡಲಾಗುವುದು.
-ಸಿದ್ದಪ್ಪ, ಮಾತಾ ಟೆಕ್ನೋಲಜೀಸ್, (ಏಜೆನ್ಸಿ ಸಂಸ್ಥೆ)

LEAVE A REPLY

Please enter your comment!
Please enter your name here