ಪುತ್ತೂರು: ದಕ್ಷಿಣ ಕನ್ನಡದ ಪುತ್ತೂರು, ಮಂಗಳೂರು, ಬೆಳ್ತಂಗಡಿ ಹಾಗೂ ಉಡುಪಿ ಜಿಲ್ಲೆಯ ಹೆಸರಾಂತ ನೃತ್ಯ ಗುರುಗಳ ಸಂಘವಾದ ಕರಾವಳಿ ನೃತ್ಯ ಕಲಾ ಪರಿಷತ್ತು ಫೆ.13ರಂದು ಉಭಯ ಜಿಲ್ಲೆಗಳಲ್ಲಿ ಮಹತ್ವದ ಸಮಾಲೋಚನಾ ಸಭೆಯನ್ನು ಕೈಗೊಂಡಿತು. ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಈ ಸಭೆಗೆ ಸಂಗೀತ, ನೃತ್ಯ ಹಾಗೂ ತಾಳವಾದ್ಯದ ಎಲ್ಲಾ ಶಿಕ್ಷಕರು ಪಾಲ್ಗೊಂಡು ಪರಿಷತ್ತಿನ ಅಹವಾಲುಗಳನ್ನು ಆಲಿಸಿದರು.

ಪರಿಷತ್ತಿನ ಪರವಾಗಿ ವಿದ್ವಾನ್ ಚಂದ್ರಶೇಖರ ನಾವಡ ಹಾಗೂ ವಿದ್ವಾನ್ ಯು ಕೆ ಪ್ರವೀಣ್ ಮಾತನಾಡಿ, ಪ್ರಸ್ತುತ ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ನಡೆಸುತ್ತಿರುವ ಸಂಗೀತ ನೃತ್ಯ ಪರೀಕ್ಷೆಯಲ್ಲಿ ಇರುವ ಗೊಂದಲ ಹಾಗೂ ಅಸಹಜತೆಯನ್ನು ಉಲ್ಲೇಖ ಮಾಡಿದರು. ಕಳೆದ ವರ್ಷ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆದಂತಹ ಗೊಂದಲಗಳು, ಶಿಕ್ಷಕರಿಗೆ ಇನ್ನೂ ಬಿಡುಗಡೆಯಾಗದ ಸಂಭಾವನೆಗಳು, ನಿಖರವಾದ ಮಾಹಿತಿ ಇಲ್ಲದಿರುವಿಕೆ ಹೀಗೆ ಹತ್ತು ಹಲವು ಗೊಂದಲದ ಗೂಡಾಗಿರುವ ಯುನಿವರ್ಸಿಟಿಯ ಕಾರ್ಯವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಹೀಗೇ ಮುಂದುವರೆದಲ್ಲಿ ಈ ಬಾರಿ ಯಾವ ಶಿಕ್ಷಕನೂ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲಾಗದು ಎಂದು ಒಮ್ಮತದಿಂದ ನಿರ್ಧರಿಸಿದರು.
ಯುನಿವರ್ಸಿಟಿ ಸರಿಯಾದ ಮಾಹಿತಿಯನ್ನು ನೀಡದೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿರಿಯ ನೃತ್ಯ ಗುರು ವಿದುಷಿ ನಯನ ವಿ ರೈ, ವಿದ್ವಾನ್ ಸುದರ್ಶನ್ ಭಟ್, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಶಾಲಿನಿ ಆತ್ಮ ಭೂಷಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದು, ಅಭಿಪ್ರಾಯ ತಿಳಿಸಿದರು.