ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯಿಂದ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮದ ವೀಕ್ಷಣಾ ಮಂಟಪದ ಉದ್ಘಾಟನೆ

0

ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಗತಿಪರ ಕೃಷಿಕರು ಹಾಗೂ ಉದ್ಯಮಿಗಳಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮದ ನೆನಪಿನ ಕೊಡುಗೆಯ ವೀಕ್ಷಣಾ ಮಂಟಪದ ಉದ್ಘಾಟನೆಯು ಫೆ.20 ರಂದು ಬಿರುಮಲೆ ಬೆಟ್ಟ ಗಾಂಧಿ ಮಂಟಪದ ಎದುರು ನಡೆಯಿತು.


ನನ್ನ 90ನೇ ಹುಟ್ಟುಹಬ್ಬಕ್ಕೆ ಈ ಮಂಟಪ ಜನತೆಗೆ ಅರ್ಪಣೆ-ಅರಿಯಡ್ಕ ಚಿಕ್ಕಪ್ಪ ನಾೖಕ್‌:
ಪ್ರಗತಿಪರ ಕೃಷಿಕರು ಹಾಗೂ ಉದ್ಯಮಿಗಳಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರು ವೀಕ್ಷಣಾ ಮಂಟಪವನ್ನು ರಿಬ್ಬನ್ ಕತ್ತರಿಸುವ ಹಾಗೂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಬಿರುಮಲೆ ಬೆಟ್ಟದ ಅಭಿವೃದ್ಧಿಯಾದರೆ ಪುತ್ತೂರಿನ ಹಾಗೂ ಆಸುಪಾಸಿನ ಜನತೆಗೆ ಆಕರ್ಷಣೀಯ ತಾಣವಾಗುವುದರಲ್ಲಿ ಸಂದೇಹವಿಲ್ಲ. ನನ್ನ 90ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಬಿರುಮಲೆ ಬೆಟ್ಟದಲ್ಲಿ ವೀಕ್ಷಕ ಮಂಟಪವನ್ನು ಪುತ್ತೂರಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇನೆ. ಪುತ್ತೂರಿನ ಆಸುಪಾಸು ಭಾಗದ ಜನರು ಬಿರುಮಲೆ ಬೆಟ್ಟವನ್ನು ಮತ್ತಷ್ಟು ಆಸ್ವಾದಿಸುವಂತಾಗಬೇಕಾದರೆ ಜನರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.


ನಗರಸಭೆಯೂ ಬಿರುಮಲೆ ಬೆಟ್ಟದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತದೆ-ಲೀಲಾವತಿ ಅಣ್ಣು ನಾಯ್ಕ:
ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕರವರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮದ ಸವಿನೆನಪಿಗೆ ಈ ವೀಕ್ಷಣಾ ಮಂಟಪವನ್ನು ಅರ್ಪಿಸಿರುವುದಕ್ಕೆ ಅಭಿನಂದಿಸುತ್ತೇನೆ. ನಗರಸಭೆಯೂ ಬಿರುಮಲೆ ಬೆಟ್ಟದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತದೆ ಮಾತ್ರವಲ್ಲ ಊರಿನ ಸಹೃದಯಿ ಬಂಧುಗಳು ಕೂಡ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.


ವೀಕ್ಷಕ ಮಂಟಪ ಬಿರುಮಲೆಯ ಅಭಿವೃದ್ಧಿಗೆ ಮುಕುಟಪ್ರಾಯವಾಗಿದೆ-ಶಶಿಕುಮಾರ್ ರೈ ಬಾಲ್ಯೊಟ್ಟು:
ದ.ಕ.ಜಿ.ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಹಾಗೂ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಪ್ರಗತಿಪರ ಕೃಷಿಕ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರು ನಿರ್ಮಿಸಿದ ವೀಕ್ಷಕ ಮಂಟಪ ಬಿರುಮಲೆಯ ಅಭಿವೃದ್ಧಿಗೆ ಮುಕುಟ ಪ್ರಾಯವೆನಿಸುವಲ್ಲಿ ಬಿರುಮಲೆ ಬೆಟ್ಟದ ಅಭಿವೃದ್ಧಿ ಸಮಿತಿಯು ಕಾರ್ಯೋನ್ಮುಖವಾಗಿದೆ. ಅವರಿಂದ ಈ ಬಿರುಮಲೆ ಬೆಟ್ಟದ ಅಭಿವೃದ್ಧಿಯನ್ನು ನಾವು ನಿರೀಕ್ಷಿಸಬಹುದಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಉಳಿಸುವಲ್ಲಿ ಶ್ರಮಿಸಿದ ತಹಶೀಲ್ದಾರ್ ಕೋಚಣ್ಣ ರೈಯವರ ಪ್ರತಿಮೆಯನ್ನು ಈ ಭಾಗದಲ್ಲಿ ನಿರ್ಮಿಸಬೇಕಾಗಿದೆ, ಅದರ ಖರ್ಚನ್ನು ಬೇಕಾದರೆ ಸಾರ್ವಜನಿಕರು ಭರಿಸುತ್ತೇವೆ ಮಾತ್ರವಲ್ಲ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನೂರನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನೇ ಅಧ್ಯಕ್ಷನಾಗುವ ಯೋಗ ಸಿಗಲಿ ಎಂದರು.


ಬಿರುಮಲೆ ಬೆಟ್ಟದ ಅಭಿವೃದ್ಧಿಯ ಕನಸು ಕಂಡವರು ಕೋಚಣ್ಣ ರೈಯವರು-ಮಲ್ಲಿಕಾ ಪ್ರಸಾದ್:
ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ, ಬಿರುಮಲೆ ಬೆಟ್ಟದ ಅಭಿವೃದ್ಧಿಯ ಕನಸು ಕಂಡವರು ದಿವಂಗತ ತಹಶೀಲ್ದಾರ್ ಕೋಚಣ್ಣ ರೈಯವರು. ಬಿರುಮಲೆ ಬೆಟ್ಟದ ಅಭಿವೃದ್ಧಿಯ ಹಿಂದೆ ಅವರ ಪರಿಶ್ರಮ ಬಹಳ ಇದೆ. ಇದೀಗ ಅವರ ಕನಸು ನನಸಾಗಬೇಕಾದರೆ ಈ ಬಿರುಮಲೆ ಬೆಟ್ಟದ ಅಭಿವೃದ್ಧಿಯಲ್ಲಿ ನಾವೆಲ್ಲಾ ಕೈಜೋಡಿಸೋಣ ಎಂದರು.


ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಉದ್ಯಮಿ ಶಿವರಾಂ ಆಳ್ವ, ಕೃಷ್ಣಕುಮಾರ್ ರೈ ಪಿ.ಡಿ, ನಾರಾಯಣ ರೈ ಕುಕ್ಕುವಳ್ಳಿ, ದಂಬೆಕಾನ ಸದಾಶಿವ ರೈ, ಚಿಲ್ಮೆತ್ತಾರು ಸಂತೋಷ್ ಭಂಡಾರಿ, ಮಧು ನರಿಯೂರು, ಡಾ.ಅಶೋಕ್ ಪಡಿವಾಳ್, ಪ್ರಜ್ಞಾ ಆಶ್ರಮದ ಅಣ್ಣಪ್ಪ, ಸದಾಶಿವ ರೈ ಬೆಳ್ಳಿಪ್ಪಾಡಿ, ಲಕ್ಷ್ಮೀನಾರಾಯಣ ಶೆಟ್ಟಿ, ಮಲ್ಲಿಕಾ ಜೆ.ರೈ, ಮೋಹನ್ ರೈ, ಡಾ.ರವೀಂದ್ರ ಕಜೆ, ಹೆರಾಲ್ಡ್ ಮಾಡ್ತಾ, ಸೂರ್ಯನಾಥ ಆಳ್ವ ಸಹಿತ ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಸದಸ್ಯರು, ಪ್ರಗತಿಪರ ಕೃಷಿಕ ಅರಿಯಡ್ಕ ಚಿಕ್ಕಪ್ಪ ನಾಕ್‌ರವರ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು. ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ನಿಕಟಪೂರ್ವ ಕಾರ್ಯದರ್ಶಿ ಎಂ.ಎಸ್ ಅಮ್ಮಣ್ಣಾಯ ಪ್ರಾರ್ಥಿಸಿದರು. ಅಧ್ಯಕ್ಷ ಎ.ಜೆ ರೈ ಸ್ವಾಗತಿಸಿ, ಕಾರ್ಯದರ್ಶಿ ನಿತಿನ್ ಪಕ್ಕಳ ವಂದಿಸಿದರು. ಪ್ರೊ|ಝೇವಿಯರ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಕೋರ್ಟ್ ಆದೇಶ ಬಂದ್ಮೇಲೆ ಕೋಚಣ್ಣ ರೈಯವರ ಪ್ರತಿಮೆ ಸ್ಥಾಪನೆ..
ಬಿರುಮಲೆ ಬೆಟ್ಟದ ಪಾರ್ಕ್, ಜಿಮ್ ವ್ಯವಸ್ಥೆ, ಒಂದು ಕಿ.ಮೀ ವಾಕಿಂಗ್ ವೃತ್ತದ ಅಭಿವೃದ್ಧಿ ವ್ಯವಸ್ಥೆಗೆ ರೂ.80 ಲಕ್ಷದ ಪ್ರಸ್ತಾವನೆಯು ಸರಕಾರದಿಂದ ಅನುಮೋದಿಸಲ್ಪಟ್ಟಿದೆ. ರೂ.15 ಲಕ್ಷ ಶೌಚಾಲಯ ನಿರ್ಮಾಣ ಆಗಿದ್ದು ಹಾಗೂ ಅದರ ನಿರ್ವಹಣೆ ಕೆಲವೇ ದಿನಗಳಲ್ಲಿ ಹಸ್ತಾಂತರ ಆಗಲಿದೆ. ಎತ್ತರದ ಧ್ವಜಸ್ತಂಭ ರೂ.50 ಲಕ್ಷ ಬಜೆಟಿನಲ್ಲಿ ನಿರ್ಮಾಣವಾಗಲಿದ್ದು ಇದರ ಅನುಮೋದನೆ ಆಗಿದೆ. ಈ ಭಾಗದಲ್ಲಿ ಅಭಿವೃದ್ಧಿಯ ಹರಿಕಾರ ದಿ.ಕೋಚಣ್ಣ ರೈಯವರ ಪ್ರತಿಮೆಯನ್ನು ಸ್ಥಾಪಿಸಲು 2015ರಲ್ಲಿ ಅನುಮೋದನೆಗೊಂಡಿದ್ದರೂ ಈ ಬಗ್ಗೆ ಆಕ್ಷೇಪಣೆಯಿದ್ದರಿಂದ ಅದು ಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ.
-ಮಧು ಎಸ್.ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ

ಕೇಕ್ ಕತ್ತರಿಸುವಿಕೆ/ಸನ್ಮಾನ..
ಫೆ.20 ರಂದು 92ನೇ ವರ್ಷದ ಹುಟ್ಟುಹಬ್ಬಕ್ಕೆ ಕಾಲಿರಿಸುತ್ತಿರುವ ಪ್ರಗತಿಪರ ಕೃಷಿಕ, ವೀಕ್ಷಣಾ ಮಂಟಪದ ಕೊಡುಗೆಯ ಹರಿಕಾರ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರು ತಮ್ಮ ಕುಟುಂಬದವರು ಏರ್ಪಡಿಸಿದ ಸಿಹಿಯ ಪ್ರತೀಕವಾದ ಕೇಕ್ ಅನ್ನು ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮವನ್ನು ಎಲ್ಲರೊಡನೆ ಹಂಚಿಕೊಂಡರು. ಜೊತೆಗೆ ವೀಕ್ಷಣಾ ಮಂಟಪವನ್ನು ನಿರ್ಮಿಸಲು ಕೈಜೋಡಿಸಿದ ಇಂಜಿನಿಯರ್ ಸಂತೋಷ್ ಶೆಟ್ಟಿ ಸಾಜರವರನ್ನು ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ವತಿಯಿಂದ ಸನ್ಮಾನಿಸಲಾಯಿತು.

ಬಿರುಮಲೆ ಬೆಟ್ಟ ವಿಹಾರ ಧಾಮವಾಗಲಿದೆ..
92ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮದ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿನ ಉಳಿಕೆ ಹಣದಲ್ಲಿ ಬಿರುಮಲೆ ಬೆಟ್ಟದಲ್ಲಿ ಅವರ ಹೆಸರಿನಲ್ಲಿ ವೀಕ್ಷಣಾ ಮಂಟಪವನ್ನು ನಿರ್ಮಿಸುವುದೆಂದು ತೀರ್ಮಾನಿಸಿದ್ದೆವು. ಅದರಂತೆ ಇಂದು ರೂ.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ವೀಕ್ಷಣಾ ಮಂಟಪ ಲೋಕಾರ್ಪಣೆಗೊಂಡಿದೆ. ಈ ಯೋಜನೆಯಲ್ಲಿ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರೂ ಕೈಜೋಡಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಈ ಬಿರುಮಲೆ ಬೆಟ್ಟದಲ್ಲಿ ಪುತ್ತೂರಿನ ವಿಹಂಗಮ ನೋಟವನ್ನು ಕಾಣಲು ಸಾಧ್ಯ. ಶಾಸಕ ಅಶೋಕ್ ರೈಯವರ ನೇತೃತ್ವದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಡಿಜಿಟಲ್ ಡಿಸ್‌ಪ್ಲೇ, ರೂ.80 ಲಕ್ಷ ನಗರಸಭಾ ಅನುದಾನದಲ್ಲಿ ಪಾರ್ಕ್ ಉನ್ನತೀಕರಣ, ರೂ.70 ಲಕ್ಷ ವೆಚ್ಚದಲ್ಲಿ ಎತ್ತರದ ಧ್ವಜಸ್ತಂಭ ನಿರ್ಮಾಣವಾಗಲಿದ್ದು ಬಿರುಮಲೆ ಬೆಟ್ಟವು ವಿಹಾರಧಾಮವಾಗಲಿದೆ.
-ಎ.ಜಗಜ್ಜೀವನ್‌ದಾಸ್ ರೈ, ಅಧ್ಯಕ್ಷರು, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ

LEAVE A REPLY

Please enter your comment!
Please enter your name here