ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ರಾ.ಪಂ ಅಧ್ಯಕ್ಷ/ಉಪಾಧ್ಯಕ್ಷರಿಗೆ ಅಗೌರವ ಆರೋಪ- ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ, ಖಂಡನಾ ನಿರ್ಣಯ

0


ಪುತ್ತೂರು: ಗ್ರಾ.ಪಂ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವಮಾನ ಮಾಡಲಾಗಿದೆ ಎನ್ನುವ ಆರೋಪ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ್ದು ಬಳಿಕ ಖಂಡನಾ ನಿರ್ಣಯ ಮಾಡಿದ ಘಟನೆ ನಡೆದಿದೆ. ಸಭೆ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಅವರ ಅಧ್ಯಕ್ಷತೆಯಲ್ಲಿ ಫೆ.೧೯ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಗಾಳಿಮುಖದಲ್ಲಿ ಗ್ರಾ.ಪಂಗೆ ಸೇರಿದ ಅಂಗಡಿ ಕೋಣೆಯೊಂದನ್ನು ಇತ್ತೀಚೆಗೆ ಏಲಂ ಮಾಡಲು ನಿರ್ಧರಿಸಿದ್ದು ಅದಕ್ಕಿಂತ ಕೆಲವೇ ದಿನಗಳ ಮೊದಲು, ಈ ಹಿಂದೆ ಅದರಲ್ಲಿ ಅಂಗಡಿ ಮಾಡಿಕೊಂಡಿದ್ದ ವ್ಯಕ್ತಿ ಕಟ್ಟಡದ ಶೀಟ್ ಹಾಗೂ ಮುಂಭಾಗದ ಇಂಟರ್‌ಲಾಕ್‌ನ್ನು ಗ್ರಾ.ಪಂ ಗಮನಕ್ಕೆ ತಾರದೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ವತಿಯಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರು ನೀಡಿದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈಶ್ವರಮಂಗಲ ಪೊಲೀಸ್ ಹೊರಠಾಣೆಯ ಎಎಸ್ಸೈ ಚಂದ್ರಶೇಖರ್ ಅವರನ್ನು ಸಭೆಗೆ ಕರೆಸಿ ವಿಷಯದ ಬಗ್ಗೆ ಸದಸ್ಯರು ಮನವರಿಕೆ ಮಾಡಿದರು. ಎಎಸ್ಸೈ ಚಂದ್ರಶೇಖರ್ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಉಪಾಧ್ಯಕ್ಷ ರಾಮ ಮೇನಾಲ ಮಾತನಾಡಿ ಗಾಳಿಮುಖದ ವಿಷಯದಲ್ಲಿ ಮೊದಲು ನಾವು ದೂರು ಕೊಟ್ಟರೂ, ಯಾರ ಮೇಲೆ ದೂರು ಇದೆಯೋ ಆ ವ್ಯಕ್ತಿಯನ್ನು ಮೊದಲು ಠಾಣೆಗೆ ಮೊದಲು ಕರೆಸಿ ಮಾತನಾಡಿದ್ದಾರೆ, ನಾವು ಠಾಣೆಗೆ ಹೋಗಿ ಮಹಿಳಾ ಎಸ್ಸೈಯವರಲ್ಲಿ ಸೌಜನ್ಯದಿಂದ ಮಾತನಾಡಿದರೂ ಅವರು ಉಡಾಫೆಯಿಂದ ಮಾತನಾಡಿ ಅಗೌರವ ತೋರಿದ್ದಾರೆ, ನನಗಂತೂ ಮನಸ್ಸಿಗೆ ಬಹಳ ಬೇಸರ ಮತ್ತು ನೋವು ತಂದಿದೆ, ಇದು ನಮಗೆ ಮಾತ್ರವಲ್ಲ ಎಲ್ಲ ಸದಸ್ಯರಿಗೆ ಮತ್ತು ಗ್ರಾಮದ ಜನತೆಗೆ ಮಾಡಿದ ಅಗೌರವ ಎಂದು ಅವರು ಹೇಳಿದರು. ಅಧ್ಯಕ್ಷೆ ಫೌಝಿಯಾ ಮಾತನಾಡಿ ಪೊಲೀಸ್ ಠಾಣೆಗೆ ನಾವು ಹೋದಾಗ ಅಲ್ಲಿನ ಮಹಿಳಾ ಎಸ್ಸೈಯವರು ನಮಗೆ ಗೌರವ ನೀಡದೇ ನಮ್ಮನ್ನು ಕೇವಲವಾಗಿ ನಡೆಸಿಕೊಂಡಿದ್ದಾರೆ. ಜನಪ್ರತಿನಿಧಿಗಳಾದ ನಮಗೇ ಈ ರೀತಿಯ ಅನುಭವ ಆದರೆ ಜನ ಸಾಮಾನ್ಯರ ಪಾಡೇನು ಎಂದು ಕೇಳಿದರು.


ಸದಸ್ಯ ಇಬ್ರಾಹಿಂ ಪಳ್ಳತ್ತೂರು ಮಾತನಾಡಿ ಠಾಣೆಯಲ್ಲಿ ಎಸ್.ಐ ಇದ್ದಾರಾ ಎಂದು ನಾನು ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದೆ. ಸಂಜೆ ನಾಲ್ಕು ಗಂಟೆಗೆ ಬರುವಂತೆ ಹೇಳಿದ್ದರು, ಬಳಿಕ ನನಗೆ ಠಾಣೆಯಿಂದ ಕರೆ ಮಾಡಿ ಏಕವಚನದಲ್ಲಿ ಅಗೌರವದಿಂದ ಮಾತನಾಡಿದ್ದಾರೆ, ಇದು ಯಾವ ನ್ಯಾಯ? ಇಂತಹ ಅವ್ಯವಸ್ಥೆಗಳನ್ನು ನೋಡಿಯೂ ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು. ಸದಸ್ಯ ಚಂದ್ರಹಾಸ ಮಾತನಾಡಿ ಗ್ರಾ.ಪಂ ಅಧ್ಯಕ್ಷರಿಗೆ, ಸದಸ್ಯರಿಗೆ ಅಗೌರವ ತೋರುವುದು ಖಂಡನೀಯ, ಏಕವಚನದಲ್ಲಿ ಸದಸ್ಯರಲ್ಲಿ ಮಾತನಾಡುವುದೆಂದರೆ ಅದಕ್ಕೇನು ಅರ್ಥ, ಸರಕಾರಿ ಅಧಿಕಾರಿಗಳು ನಮ್ಮ ತೆರಿಗೆ ಹಣದಲ್ಲಿ ಸಂಬಲ ಪಡೆಯುವವರು, ಅವರು ಕಾನೂನಿನಡಿಯಲ್ಲಿ ನ್ಯಾಯ ಸಮ್ಮತವಾಗಿ ಕೆಲಸ ಮಾಡಬೇಕು, ಸಂಪ್ಯ ಠಾಣೆಯಲ್ಲಿ ಆಗಿರುವ ಅಗೌರವ, ಅವಮಾನಗಳ ಬಗ್ಗೆ ಜಿಲ್ಲಾ ಎಸ್.ಪಿ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಮಾಡುವ ಎಂದು ಹೇಳಿದರು.


ಸದಸ್ಯ ಶಂಸುದ್ದೀನ್ ಮಾತನಾಡಿ ಪೊಲೀಸ್ ಠಾಣೆಗೆ ಗ್ರಾ.ಪಂ ಅಧ್ಯಕ್ಷರು ಹೋದಾಗ ಅವರಿಗೆ ಗೌರವ ಕೊಡಬೇಕು, ಜವಾಬ್ದಾರಿ ಇರುವ ಕಾರಣಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹೋಗಿದ್ದಾರೆ, ಆಗ ಅಗೌರವ ತೋರುವುದೆಂದರೆ ಯಾರೂ ಒಪ್ಪಲು ಸಾಧ್ಯವಿಲ್ಲ, ಈ ಬಗ್ಗೆ ಖಂಡನಾ ನಿರ್ಣಯ ಮಾಡಬೇಕು ಎಂದು ಹೇಳಿದರು. ಇದೇ ವಿಚಾರದಲ್ಲಿ ಸುಮಾರು ಹೊತ್ತು ಚರ್ಚೆ ನಡೆಯಿತು. ಎಸ್.ಐ ಆಗಲೀ, ಜನಪ್ರತಿನಿಧಿ ಆಗಲಿ, ಜನಸಾಮಾನ್ಯನೇ ಆಗಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇದೆ, ನಮಗೆ ಆಗಿರುವ ಅಗೌರವದ ಅನುಭವ ಇನ್ಯಾರಿಗೂ ಆಗಬಾರದು, ಹಾಗಾಗಿ ಮಹಿಳಾ ಎಸ್ಸೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಪಟ್ಟವರಿಗೆ ದೂರು ನೀಡುವುದೆಂದು ಸದಸ್ಯರು ಹೇಳಿದರು. ಕೊನೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಮಹಿಳಾ ಎಸ್ಸೈ ಅವರ ನಡೆಯನ್ನು ಖಂಡಿಸಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ತ್ಯಾಜ್ಯ ಸಾಗಿಸಿದವರ ಮೇಲೆ ಕ್ರಮ ಯಾಕಿಲ್ಲ:
ಸದಸ್ಯ ಚಂದ್ರಹಾಸ ಮಾತನಾಡಿ ಇತ್ತೀಚೆಗೆ ವಾಹನವೊಂದರಲ್ಲಿ ತ್ಯಾಜ್ಯ ಸಾಗಿಸುತ್ತಿದ್ದವರನ್ನು ನಾವು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಪೊಲೀಸರು ಸ್ಥಳಕ್ಕೆ ಬಂದಿದ್ದರೂ ಕೂಡಾ ಅವರಿಗೆ ದಂಡ ವಿಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಈಶ್ವರಮಂಗಲ ಪೊಲೀಸ್ ಹೊರಠಾಣಾ ಎಎಸ್ಸೈ ಚಂದ್ರಶೇಖರ್ ಉತ್ತರಿಸಿ ನಾವು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದೇವೆ, ಗ್ರಾ.ಪಂ ಪಿಡಿಓ ಅವರು ದಂಡ ಹಾಕಿದ್ದಾರೆ ಎಂದು ಹೇಳಿದರು. ಪೊಲೀಸರು ದಂಡ ವಿಧಿಸುವ ಕಾರ್ಯ ಮಾಡಬೇಕಿತ್ತು ಎಂದು ಚಂದ್ರಹಾಸ ಹೇಳಿದರು.

ಚರಂಡಿಯಲ್ಲಿ ತ್ಯಾಜ್ಯರಾಶಿ:
ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ ಈಶ್ವರಮಂಗಲದ ರಸ್ತೆ ಬದಿಯ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ಮಳೆ ಬಂದರೆ ಸಮಸ್ಯೆಯಾದೀತು. ಗ್ರಾ.ಪಂ ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಹೇಳಿದರು

ಬೈಕಲ್ಲಿ ತ್ರಿಬಲ್ ರೈಡ್:
ಈಶ್ವರಮಂಗಲ ಪರಿಸರದಲ್ಲಿ ಶಾಲಾ ಮಕ್ಕಳು ಹೆಲ್ಮೆಟ್ ಧರಿಸದೇ ಮತ್ತು ತ್ರಿಬಲ್ ರೈಡ್ ಮಾಡಿಕೊಂಡು ಬೈಕ್ ಓಡಿಸುತ್ತಾರೆ, ಈ ಬಗ್ಗೆ ಪೊಲೀಸರು ನಿಗಾ ವಹಿಸಿ ಅವರಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕೆಂದು ಚಂದ್ರಹಾಸ ಆಗ್ರಹಿಸಿದರು.

ಈಶ್ವರಮಂಗಲವನ್ನು ಕ್ಲೀನ್ ಸಿಟಿ ಮಾಡಬೇಕು:
ಸದಸ್ಯ ಶ್ರೀರಾಂ ಪಕ್ಕಳ ಮಾತನಾಡಿ ಈಶ್ವರಮಂಗಲ ಪೇಟೆಯನ್ನು ಕ್ಲೀನ್ ಸಿಟಿ ಮಾಡುವ ಬಗ್ಗೆ ಗ್ರಾ.ಪಂ ಪಣ ತೊಡಬೇಕು, ಅದಕ್ಕಾಗಿ ಕ್ರಿಯಾ ಯೋಜನೆಯಲ್ಲಿ ಹಣ ಇಟ್ಟು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಈಶ್ವರಮಂಗಲ ಪೇಟೆ ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು ಈ ಭಾಗದ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ, ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಈಶ್ವರಮಂಗಲವನ್ನು ಕ್ಲೀನ್ ಸಿಟಿ ಮಾಡಬೇಕು ಎಂದು ಹೇಳಿದರು. ಸದಸ್ಯರು ಧ್ವನಿಗೂಡಿಸಿದರು.

ಗ್ರಾಮ ಸಹಾಯಕರ ವಾಪಸ್ ನೇಮಕಾತಿ ಬೇಡ:
ಈ ಹಿಂದೆ ನೆ.ಮುಡ್ನೂರಲ್ಲಿ ಗ್ರಾಮ ಸಹಾಯಕರಾಗಿದ್ದು ರಘುನಾಥ ಪಾಟಾಳಿ ಅವರು ಬೇರೆಡೆಗೆ ವರ್ಗಾವಣೆಗೊಂಡಿದ್ದು ಇದೀಗ ಮತ್ತೆ ಅವರನ್ನು ನೆ.ಮುಡ್ನೂರು ಗ್ರಾಮಕ್ಕೆ ಕರೆಸುವ ಬಗ್ಗೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿರುವ ವಿಚಾರ ಗಮನಕ್ಕೆ ಬಂದಿದೆ, ಈಗ ಇರುವ ಗ್ರಾಮ ಸಹಾಯಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ರಘುನಾಥ ಪಾಟಾಳಿಯವರನ್ನು ಯಾವುದೇ ಕಾರಣಕ್ಕೂ ನಮ್ಮ ಗ್ರಾಮಕ್ಕೆ ವಾಪಸ್ ನೇಮಕ ಮಾಡಬಾರದು, ಮಾಡಿದ್ದಲ್ಲಿ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸದಸ್ಯರು ಒಕ್ಕೊರಳಿನಿಂದ ಹೇಳಿದರು.

ಪಿಡಿಓ ವಿದ್ಯಾಧರ ಸಭೆ ನಿರ್ವಹಿಸಿದರು. ಕುಮಾರನಾಥ, ವೆಂಕಪ್ಪ ನಾಯ್ಕ, ರಿಯಾಜ್, ವತ್ಸಲ, ಪ್ರಫುಲ್ಲ, ಲಲಿತಾ ಶೆಟ್ಟಿ, ಲಲಿತಾ ಸುಧಾಕರ, ಇಂದಿರಾ, ಶಶಿಕಲಾ ಉಪಸ್ಥಿತರಿದ್ದರು. ಸಿಬ್ಬಂದಿ ಶೀನಪ್ಪ ನಾಯ್ಕ ಸ್ವಾಗತಿಸಿದರು. ಸಿಬ್ಬಂದಿಗಳಾದ ಅಬ್ದುಲ್ ರಹಿಮಾನ್, ಚಂದ್ರಶೇಖರ ಸಹಕರಿಸಿದರು.

LEAVE A REPLY

Please enter your comment!
Please enter your name here