ಪುತ್ತೂರು: ಅಳಿಕೆ ಗ್ರಾಮ ಮುಳಿಯ ಎಂಬಲ್ಲಿ ಅಪ್ರಾಪ್ತನಿಗೆ ದಂಪತಿ, ಮತ್ತೋರ್ವ ಸೇರಿ ಹಲ್ಲೆ ನಡೆಸಿದ್ದಾರೆಂಬ ಆರೋಪ ವ್ಯಕ್ತವಾಗಿದ್ದು, ಬಾಲಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಳಿಕೆ ಗ್ರಾಮದ ಮುಳಿಯ ಪೂವಪ್ಪ ನಲಿಕೆ- ಕಲ್ಯಾಣಿ ಅವರ ಪುತ್ರ ಲಿತೇಶ್ (12ವ) ಗಾಯಾಳು. ‘ಲಿತೇಶ್ ಕನ್ಯಾನ ಬಳಿ ಜಾತ್ರೆಗೆಂದು ಹೋದಾಗ ಕನ್ಯಾನ ಬಳಿ ನಾರಾಯಣ ನಾಯ್ಕ ದಂಪತಿ ಮತ್ತು ಅಪರಿಚಿತರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ಚಿಕ್ಕಮ್ಮ ವಿಮಲ ಅವರು ಆರೋಪಿಸಿದ್ದಾರೆ. ಘಟನೆ ಕುರಿತು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರ ಕಾಡು, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಲೋಕೇಶ್ ತೆಂಕಿಲ ಸಹಿತ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.