ನಾರ್ಶ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣ – ಮತ್ತೋರ್ವ ಆರೋಪಿಯ ಬಂಧನ

0

ವಿಟ್ಲ: ವಿಟ್ಲದ ಬೋಳಂತೂರಿನ ಸಿಂಗಾರಿ ಬೀಡಿ ಮಾಲೀಕರ ಮನೆ ಮೇಲೆ ನಕಲಿ ಇಡಿ ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿ ಲಕ್ಷಾಂತರ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಕೇರಳದ ಕಣ್ಣೂರು ನಿವಾಸಿ ಅಬ್ದುಲ್ ನಾಸೀರ್ (52 ವ.) ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ದರೋಡೆ ಪ್ರಕರಣದಲ್ಲಿ ಸದ್ಯಕ್ಕೆ ಬಂಧಿತನಾಗಿರುವ ಕಣ್ಣೂರು ಮೂಲದ ಅಬ್ದುಲ್ ನಾಸೀರ್, ಸ್ಥಳೀಯ ಆರೋಪಿ ಸಿರಾಜುದ್ದೀನ್ ಹಾಗೂ ಪ್ರಧಾನ ಸೂತ್ರಧಾರಿ ಎಎಸ್‌ಐ ಮಧ್ಯೆ ಸಂಪರ್ಕ ಸೇತುವಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಂಗಾರಿ ಬೀಡಿ ಸಂಸ್ಥೆಯಲ್ಲಿ ಬೀಡಿ ಪ್ಯಾಕಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಸಿರಾಜುದ್ದೀನ್ ತನ್ನ ಮಾಲಕನ ಮೇಲಿನ ಮನಸ್ತಾಪದಿಂದ ಕೆಲಸ ತ್ಯಜಿಸಿದ್ದ.

ಜತೆಗೆ ಮಾಲಕನ ವಿರುದ್ಧ ಸೇಡು ತೀರಿಸಲು ಇ.ಡಿ.ಗೆ ದೂರು ನೀಡುವುದಾಗಿ ಹೇಳುತ್ತಿದ್ದ. ಸಿರಾಜುದ್ದೀನ್‌ನ ಸೇಡಿನ ವಿಚಾರವನ್ನು ಎಎಸ್‌ಐಗೆ ತಿಳಿಸಿ ಇಂತಹ ನಕಲಿ ಇಡಿ ದಾಳಿ ಸಂಘಟಿಸಲು ನಾಸೀರ್ ಪ್ರಮುಖ ಪಾತ್ರ ವಹಿಸಿದ್ದ ಎನ್ನುವುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗುತ್ತಿದೆ.

ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸರು ತ್ರಿಶೂರು ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಶಫೀರ್ ಬಾಬು, ಬಿ.ಸಿ.ರೋಡು ಪರ್ಲಿಯಾ ನಿವಾಸಿ ಮಹಮ್ಮದ್ ಇಕ್ಬಾಲ್‌, ಕೊಲ್ನಾಡು ನಿವಾಸಿ ಸಿರಾಜುದ್ದೀನ್ ನಾರ್ಶ, ಮಂಗಳೂರು ಪಡೀಲು ನಿವಾಸಿ ಮಹಮ್ಮದ್ ಅನ್ಸಾರ್, ಕೇರಳದ ಕೊಟ್ಟಾಯಂ ನಿವಾಸಿಗಳಾದ ಅನಿಲ್ ಫೆರ್ನಾಂಡೀಸ್, ಸಚಿನ್ ಟಿ.ಎಸ್. ಹಾಗೂ ಶಬಿನ್ ಎಸ್. ರನ್ನು ಈ ಹಿಂದೆಯೇ ತನಿಖಾ ತಂಡ ಬಂಧಿಸಿದೆ.

LEAVE A REPLY

Please enter your comment!
Please enter your name here