ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ತರಗತಿ ಕೊಠಡಿಯ ಹಂಚಿನ ಮೇಲ್ಚಾವಣಿ ಭಾನುವಾರ ಸಂಜೆ ಕುಸಿದು ಬಿದ್ದಿದೆ. ರಜಾ ದಿನವಾಗಿದ್ದರಿಂದ ಸಂಭವನೀಯ ಅಪಾಯ ತಪ್ಪಿದೆ.
ಪ್ರಾಂಶುಪಾಲರ ಕೊಠಡಿಯ ಬದಿಗೆ ಇರುವ ಈ ಕಟ್ಟಡ ಹಳೆಯ ಕಾಲದ್ದಾಗಿದ್ದು, ಇದರ ಮೇಲ್ಚಾವಣಿ ನಾದುರಸ್ತಿಯಲ್ಲಿತ್ತು. ಈಗ ಕುಸಿದು ಬಿದ್ದ ಮೇಲ್ಚಾವಣಿಯ ಕೊಠಡಿಯಲ್ಲಿ ಪಿ.ಟಿ.ರೂಂ ಇದ್ದರೆ, ಮತ್ತೊಂದು ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವು. ಅದರ ಮುಂಭಾಗದ ಜಗಲಿಯ ಮೇಲ್ಚಾವಣಿ ಈಗ ಕುಸಿದು ಬಿದ್ದಿದೆ. ಇದೇ ಕಟ್ಟಡದಲ್ಲಿ ಉದ್ದಕ್ಕೆ ಕೊಠಡಿಗಳಿದ್ದು ಅಲ್ಲಿ ತರಗತಿಗಳು ನಡೆಯುತ್ತಿವೆ. ಮುಂದಕ್ಕೆ ಅದರ ಮೇಲ್ಚಾವಣಿ ಕುಸಿಯುವ ಭೀತಿ ಮೂಡಿದೆ. ರಜಾ ದಿನವಾದ ಭಾನುವಾರ ಈ ಘಟನೆ ನಡೆದಿರುವುದರಿಂದ ಸಂಭವನೀಯ ಅಪಾಯ ತಪ್ಪಿದಂತಾಗಿದೆ.