ಪುತ್ತೂರು: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮಂಗಳೂರು ಶಾಖೆಯಿಂದ ಸಿಎಸ್‌ಆರ್ ನಿಧಿಯಿಂದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ’ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ 462 ಕಾಲೇಜು ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು ಸಹಜ. ಆದರೆ ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ, ಯೋಜನೆಯ ಫಲಾನುಭವಿಗಳು ಈ ಹಣವನ್ನು ತಮ್ಮ ಖಾತೆಯಲ್ಲಿ ಕ್ರೋಢೀಕರಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಿ ಕೊಳ್ಳುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಹೇಳಿದರು.
ಪ್ರೊಬೆಶನರಿ ಜಿಲ್ಲಾಧಿಕಾರಿ (ಐಎಎಸ್) ಶ್ರವಣ್ ಕುಮಾರ್ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ಗುರಿ ಇದ್ದರೆ ಭವಿಷ್ಯ ಉತ್ತಮವಾಗಿರುತ್ತದೆ. ನಾನು ನನ್ನ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವಿದ್ಯಾರ್ಥಿ ವೇತನದ ಮೂಲಕವೇ ಶಿಕ್ಷಣ ಪಡೆದಿದ್ದೇನೆ. ಸಮಾಜದಲ್ಲಿ ನಾವೊಂದು ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಭವಿಷ್ಯದ ಬಗ್ಗೆ ಗುರಿ ಹೊಂದಬೇಕು ಎಂದರು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮಂಗಳೂರು ವಿಭಾಗ ಮುಖ್ಯಸ್ಥ ಶರತ್ ಚಂದ್ರನ್ ಮಾತನಾಡಿ, ಸಂಸ್ಥೆಯು ಪ್ರತಿವರ್ಷ ತನ್ನ ಲಾಭಾಂಶದ ಶೇ.5ರಷ್ಟನ್ನು ಸಿಎಸ್‌ಆರ್ ನಿಧಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 5501 ವಿದ್ಯಾರ್ಥಿಗಳಿಗೆ 4.74 ಕೋಟಿ ರೂಪಾಯಿ ನೀಡಲಾಗಿದೆ. ಸಂಸ್ಥೆಯ ಹಸಿವು ಮುಕ್ತ ಯೋಜನೆಯಡಿ ಮಂಗಳೂರು ನಗರದಲ್ಲಿ ಪ್ರತಿನಿತ್ಯ 500 ಮಂದಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ವಿವಿಧ ಕಡೆ ಮಹಿಳಾ ವೃದ್ಧಾಶ್ರಮ ಹಾಗೂ ಶಾಲೆ ಬಿಟ್ಟವರಿಗೆ ಮೈಕ್ರೋ
ಲೆಂಡಿಂಗ್ ಕೇಂದ್ರಗಳನ್ನು 12 ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಸಂಸ್ಥೆಯು ಇದುವರೆಗೆ ದೇಶದಲ್ಲಿ ತನ್ನ ಸಿಎಸ್‌ಆರ್ ನಿಧಿಯಡಿ ವಿವಿಧ ಕಾರ್ಯಕ್ರಮಗಳಿಗೆ 282 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಿದ್ದು, ಕರ್ನಾಟಕದಲ್ಲಿ 40.88 ಕೋಟಿ ರೂಪಾಯಿಗಳನ್ನು ಒದಗಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಭಾನುಮತಿ, ಮನಪಾ ಸದಸ್ಯ ಅಬ್ದುಲ್ ರವೂಫ್, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ನಿರ್ದೇಶಕ ಕರುಣಾಕರನ್ ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.