ರಾಮಕುಂಜ: ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಸೆಡ್ಡು ಹೊಡೆದು ಬಿಜೆಪಿಯ ಇನ್ನೊಂದು ಬಣ ಸ್ಪರ್ಧಿಸಿದ್ದರಿಂದ ಕುತೂಹಲಕ್ಕೆ ಕಾರಣವಾಗಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ೧೨ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆ ನಡೆದಿದ್ದರೂ ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಫಲಿತಾಂಶಕ್ಕಾಗಿ ಇನ್ನೂ ಒಂದಷ್ಟು ದಿನ ಕಾಯಬೇಕಾಗಿದೆ.
೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಎಲ್ಲಾ ೧೨ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಂಘದ ಮಾಜಿ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಅವರ ನೇತೃತ್ವದಲ್ಲಿ ಬಿಜೆಪಿಯ ಇನ್ನೊಂದು ಬಣ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗ ರಚಿಸಿಕೊಂಡು ೧೧ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರಂಭದಲ್ಲಿ ಕಾಂಗ್ರೆಸ್ ಬೆಂಬಲಿತರೂ ೧೨ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದು ಬಳಿಕದ ಬೆಳವಣಿಗೆಯಲ್ಲಿ ೧೧ ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದು ಒಬ್ಬರು ಮಾತ್ರ ಕಣದಲ್ಲಿ ಉಳಿದಿದ್ದರು. ಅಂತಿಮವಾಗಿ ೧೨ ಸ್ಥಾನಗಳಿಗೆ ಸಹಕಾರ ಭಾರತಿಯ ೧೨, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ೧೧ ಹಾಗೂ ಕಾಂಗ್ರೆಸ್ ಬೆಂಬಲತ ಒಬ್ಬರು ಸೇರಿ ಒಟ್ಟು ೨೪ ಮಂದಿ ಕಣದಲ್ಲಿ ಉಳಿದಿದ್ದರು.
ಚುನಾವಣೆ:
ಮಾ.೨ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯ ತನಕ ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆಯಿತು. ಸಾಲಗಾರ ಕ್ಷೇತ್ರದಲ್ಲಿ ೨೦೫೯ ಮತದಾರರಿದ್ದು ಈ ಪೈಕಿ ೧೮೦೮ ಮತದಾರರು ಮತಚಲಾವಣೆ ಮಾಡಿದ್ದು ಶೇ.೮೮ ಮತದಾನ ಆಗಿದೆ. ನಾಲ್ಕು ಬೂತ್ಗಳಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅದೇ ರೀತಿ ಸಾಲಗಾರರಲ್ಲದ ಕ್ಷೇತ್ರದ ೧ ಸ್ಥಾನಕ್ಕೆ ಚುನಾವಣೆ ನಡೆಯಿತು. ಇಲ್ಲಿ ೪೧೨ ಮತದಾರರಿದ್ದು ಈ ಪೈಕಿ ೩೦೦ ಮತದಾರರು ಮತ ಚಲಾವಣೆ ಮಾಡಿದ್ದು ಶೇ.೭೫ ಮತದಾನವಾಗಿದೆ. ಈ ಮಧ್ಯೆ ಮತದಾನದಿಂದ ಅನರ್ಹಗೊಂಡಿದ್ದ ೪೨೩ ಮಂದಿ ಸಂಘದ ಸದಸ್ಯರಿಗೂ ಮತದಾನಕ್ಕೆ ಹೈಕೋರ್ಟ್ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವರಿಗೆ ಮತದಾನಕ್ಕೆ ಪ್ರತ್ಯೇಕ ಬೂತ್ ಮಾಡಲಾಗಿತ್ತು. ಸಂಜೆ ೪ ಗಂಟೆ ವೇಳೆಗೆ ಎಲ್ಲಾ ಬೂತ್ಗಳಲ್ಲಿ ಮತದಾನ ಮುಕ್ತಾಯಗೊಂಡಿದ್ದು ಬಳಿಕ ಮತ ಎಣಿಕೆ ನಡೆದಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ತಾವು ಪಡೆದ ಮತಗಳ ವಿವರ ಲಭಿಸಿದರೂ ಸಂಭ್ರಮಿಸುವಂತಿಲ್ಲ. ಇನ್ನು ಏನಿದ್ದರೂ ಹೈಕೋರ್ಟ್ ತೀರ್ಪು ಬರುವ ತನಕ ಕಾಯುವುದು ಅನಿವಾರ್ಯವಾಗಿದೆ.
ರಮೇಶ್ ಭಟ್ ಬಣ ಮೇಲುಗೈ:
ಅನರ್ಹ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಿದ್ದರೂ ಈ ಮತ ಮುಂದೆ ಪರಿಗಣನೆಗೆ ಬಾರದೇ ಇದ್ದಲ್ಲಿ ಮಾಜಿ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಲಿದೆ. ಈ ತಂಡ ತಾವು ಸ್ಪರ್ಧಿಸಿದ್ದ ೧೧ ಸ್ಥಾನಗಳ ಪೈಕಿ ೧೦ ಸ್ಥಾನಗಳಲ್ಲಿ ಭರ್ಜರಿ ಜಯಗಳಿಸಲಿದೆ. ಈ ರೀತಿಯಾದಲ್ಲಿ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದಿಂದ ಸ್ಪರ್ಧಿಸಿದ್ದ ಕೇಶವ ಗೌಡ ಎ., ದಯಾನಂದ ರೈ, ರಮೇಶ ಯು., ಉದಯ ಸಾಲಿಯಾನ್, ರತ್ನಾ ಬಿ.ಕೆ., ವಿಜಯ ಎಸ್.ಅಂಬಾ, ಪದ್ಮಪ್ಪ ಗೌಡ ಕೆದುಂಬಾಡಿ, ಕುಂಞ ಮುಗೇರ, ಅಶೋಕ ಪೆರಾಬೆ, ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕೇಶ ಕಮ್ಮಿತ್ತಿಲು ಹಾಗೂ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಅಶೋಕ ಗೋಕುಲನಗರ, ಗಾಯತ್ರಿ ಅವರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಸಹಕಾರ ಭಾರತಿಗೂ ಅವಕಾಶ:
ಅನರ್ಹ ಸದಸ್ಯರಿಗೂ ಮತದಾನಕ್ಕೆ ಅವಕಾಶ ನೀಡಿದ್ದ ಹೈಕೋರ್ಟ್ ಮುಂದೆ ಈ ಮತವನ್ನೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಆದೇಶ ನೀಡಿದಲ್ಲಿ ಸಹಕಾರ ಭಾರತಿ ಮೇಲುಗೈ ಸಾಧಿಸಲಿದೆ. ಈ ರೀತಿಯಾದಲ್ಲಿ ಸಹಕಾರ ಭಾರತಿ ೮ ಸ್ಥಾನ ಹಾಗೂ ರಮೇಶ ಭಟ್ ಉಪ್ಪಂಗಳ ಸಹಕಾರಿ ಬಳಗ ೪ ಸ್ಥಾನಗಳಲ್ಲಿ ಜಯಗಳಿಸಲಿದೆ. ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಅಶೋಕ ಗೋಕುಲನಗರ, ಜನಾರ್ದನ ಪೂಜಾರಿ ಕದ್ರ, ಗಾಯತ್ರಿ, ಸುಂದರಿ, ಜಯಕರ ಪೂಜಾರಿ, ದಯಾನಂದ ಎನ್., ಮಾಧವ ಮೇರ, ನಿರಂಜನ ಎನ್., ಹಾಗೂ ರಮೇಶ ಭಟ್ ಉಪ್ಪಂಗಳ ಸಹಕಾರಿ ಬಳಗದ ಕೇಶವ ಗೌಡ, ದಯಾನಂದ ರೈ, ರಮೇಶ ಯು., ಸಾಲಗಾರರಲ್ಲದ ಕ್ಷೇತ್ರದಿಂದ ರ್ಸ್ಪರ್ಧಿಸಿದ್ದ ಲೋಕೇಶ ಕಮ್ಮಿತ್ತಿಲು ಅವರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಹೈಕೋರ್ಟ್ ತೀರ್ಪು ಯಾವ ರೀತಿ ಬಂದರೂ ಸಹಕಾರ ಭಾರತಿಯ ಅಶೋಕ ಗೋಕುಲನಗರ, ಗಾಯತ್ರಿ ಹಾಗೂ ರಮೇಶ ಭಟ್ ಉಪ್ಪಂಗಳ ಸಹಕಾರಿ ಬಳಗದ ಕೇಶವ ಗೌಡ, ದಯಾನಂದ ರೈ, ರಮೇಶ ಯು., ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕೇಶ ಕಮ್ಮಿತ್ತಿಲು ಆಯ್ಕೆಯಾಗುವುದು ಖಚಿತವಾಗಿದೆ. ಒಟ್ಟಿನಲ್ಲಿ ಎಲ್ಲವೂ ಹೈಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ.