ನೆಲ್ಯಾಡಿ: ಮುಗೇರಡ್ಕ ಜಾತ್ರೆಗೆಂದು ಬಂದಿದ್ದ ವೇಳೆ ನಾಪತ್ತೆಯಾದ ಬೈಕ್ ಮಂಗಳೂರು ಕಂಕನಾಡಿ ಪೊಲೀಸರು ವಶಪಡಿಸಿಕೊಂಡಿರುವ ವಿಚಾರ ತಿಳಿದ ಬಳಿಕ ಬೈಕ್ ಕಳವುಗೊಂಡಿರುವ ಬಗ್ಗೆ ಬೈಕ್ ಮಾಲಕರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ನಾಗೇಶ ಪೂಜಾರಿ ಎಂಬವರು 21.01.2025ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ನಡೆಯುತ್ತಿದ್ದ ಜಾತ್ರೆಗೆಂದು ಕೆಎ 21, ಡಬ್ಲ್ಯು8368 ನೋಂದಣಿ ನಂಬ್ರದ ಬೈಕ್ನಲ್ಲಿ ಸವಾರನಾಗಿ ಸಂಜೀವರವರು ಸಹಸವಾರನಾಗಿ ಬಂದಿದ್ದು, ಮುಗೇರಡ್ಕದಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿ ಜಾತ್ರೆಯಲ್ಲಿ ಸುತ್ತಾಡಿ ಸಂಜೆ 4 ಗಂಟೆಗೆ ಪಾರ್ಕಿಂಗ್ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಇಲ್ಲದೇ ಇದ್ದು ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಗೆಳೆಯರು ಅಥವಾ ಪರಿಚಯಸ್ಥರು ಯಾರಾದರೂ ತೆಗೆದುಕೊಂಡು ಹೋಗಿರಬಹುದೆಂದು ಹೋದವರು ಎಲ್ಲಾ ಕಡೆ ಹುಡುಕಾಡಿದರೂ ಈ ತನಕ ಪತ್ತೆಯಾಗಿರಲಿಲ್ಲ. ಬೈಕ್ನ ದಾಖಲೆ ಪತ್ರಗಳು ಬೈಕ್ನ ಬಾಕ್ಸ್ನಲ್ಲಿಯೇ ಇಟ್ಟಿದ್ದು ಕಳವಾದ ಬೈಕ್ನ ಮೌಲ್ಯ 40,000 ರೂ.ಆಗಿರಬಹುದು ಎಂದು ಅಂದಾಜಿಸಲಾಗಿತ್ತು.
ಈ ಮಧ್ಯೆ ಇತ್ತೀಚೆಗೆ ಬೈಕ್ಗಳನ್ನು ಕಳವು ಮಾಡಿದ ಕಳ್ಳರನ್ನು ಮತ್ತು ಬೈಕ್ಗಳನ್ನು ಮಂಗಳೂರಿನ ಕಂಕನಾಡಿ ಪೊಲೀಸರು ದಸ್ತಗಿರಿ ಮಾಡಿ ಬೈಕ್ ವಶಕ್ಕೆ ಪಡೆದುಕೊಂಡಿರುವ ವಿಚಾರ ಸಾಮಾಜಿಕ ಜಾಲತಾಣ ಮತ್ತು ದಿನಪತ್ರಿಕೆಯಲ್ಲಿ ಬಂದಿರುವುದನ್ನು ನೋಡಿದ ನಾಗೇಶ ಪೂಜಾರಿ ಅವರು ಕಂಕನಾಡಿ ಪೊಲೀಸ್ ಠಾಣೆಗೆ ಹೋಗಿ ನೋಡಿದಾಗ ಕಳವಾಗಿದ್ದ ತನ್ನ ಬೈಕನ್ನು ಕಳ್ಳರಿಂದ ವಶಪಡಿಸಿ ಪೊಲೀಸ್ ಠಾಣಾ ವಠಾರದಲ್ಲಿ ನಿಲ್ಲಿಸಿರುವುದನ್ನು ನೋಡಿದ್ದು, ಬೈಕನ್ನು ಕಳ್ಳರು ಕಳವು ಮಾಡಿದ ವಿಚಾರ ತಿಳಿದುಬಂದಿದೆ ಎಂದು ನಾಗೇಶ ಪೂಜಾರಿ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.