





ನೆಲ್ಯಾಡಿ: ಸ್ಕೂಟರ್ ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನೂಜಿಬಾಳ್ತಿಲ ಗ್ರಾಮದ ನಿಡ್ಡೋ ನಿವಾಸಿ ರಾಮಚಂದ್ರ ಗೌಡ(65ವ.)ರವರು ಚಿಕಿತ್ಸೆ ಫಲಕಾರಿಯಾಗದೇ ಮಾ.೫ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ರಾಮಚಂದ್ರ ಗೌಡ ಅವರು ಮಾ.4ರಂದು ಸಂಜೆ 6.45ರ ವೇಳೆಗೆ ಕಲ್ಲುಗುಡ್ಡೆ ಕಡೆಯಿಂದ ಎಂಜಿರ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದವರು ನೂಜಿಬಾಳ್ತಿಲ ಗ್ರಾಮದ ಅರಿಮಜಲು ಎಂಬಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಬಿದ್ದಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ನಿಡ್ಡೋ ನಿವಾಸಿ ನಾರಾಯಣ ಗೌಡ, ವಸಂತ ಹಾಗೂ ಇತರರು ಸೇರಿಕೊಂಡು ರಾಮಚಂದ್ರ ಗೌಡರನ್ನು ಉಪಚರಿಸಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದರು. ರಾಮಚಂದ್ರ ಗೌಡ ಅವರ ತಲೆಯ ಬಲ ಭಾಗಕ್ಕೆ, ಕೆನ್ನೆಯ ಬಳಿ ಗಾಯವಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಮಾ.5ರಂದು ಬೆಳಿಗ್ಗೆ 11.45ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಿಡ್ಡೋ ನಿವಾಸಿ ನಾರಾಯಣ ಗೌಡ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರಾಮಚಂದ್ರ ಗೌಡ ಅವರು ಪತ್ನಿ ಪೂವಮ್ಮ, ಪುತ್ರ ರಂಜಿತ್ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.








