ಮಲೀನವಾಗುತ್ತಿವೆ ನೇತ್ರಾವತಿ- ಕುಮಾರಧಾರ
ನದಿಗೆ ತ್ಯಾಜ್ಯ ನೀರು ಬಿಡುವುದಕ್ಕೆ ಕಡಿವಾಣ ಹಾಕಲು ಆಗ್ರಹ
ಉಪ್ಪಿನಂಗಡಿ: ನೇತ್ರಾವತಿ ನದಿಗೆ ಉಪ್ಪಿನಂಗಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ಬಿಳಿಯೂರಿನ ಅಣೆಕಟ್ಟಿಗೆ ಗೇಟ್ ಅಳವಡಿಸಿದ್ದರಿಂದ ಈಗ ನಿಂತಿರುವ ನೇತ್ರಾವತಿಯ ಹಿನ್ನೀರು ಸಂಪೂರ್ಣ ಮಲೀನಗೊಂಡಿದೆ. ಇದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿದ್ದು, ಸ್ಥಳೀಯರು ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ. ಆದ್ದರಿಂದ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ನದಿಗೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಗ್ರಾ.ಪಂ. ಸದಸ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಹೇಳಿದರು.
ಉಪ್ಪಿನಂಗಡಿ ಗ್ರಾ.ಪಂ.ನ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಅಣೆಕಟ್ಟಿನ ಮೂಲಕ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರನ್ನು ನಿಲ್ಲಿಸಿರುವುದು ರೈತರಿಗೆ ಅನುಕೂಲವಾಗಿದೆ. ಆದರೆ ಪೇಟೆಯ ಬಹುತೇಕ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತದೆ. ಇದರಿಂದ ನದಿ ಮಲೀನವಾಗುವಂತಾಗಿದೆ. ಆದ್ದರಿಂದ ಗ್ರಾ.ಪಂ. ಕೇವಲ ವ್ಯಾಪಾರ ಪರವಾನಿಗೆ ನವೀಕರಣಕ್ಕೆ ಸೀಮಿತವಾಗದೇ ಸಾಮೂಹಿಕ ಇಂಗು ಗುಂಡಿ ರಚನೆಯ ಮೂಲಕ ನದಿಗೆ ತ್ಯಾಜ್ಯ ಹರಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾ.ಪಂ. ಪಿಡಿಒ ಅವರಿಗೆ ಒತ್ತಾಯಿಸಿದರು.
ಸಮಿತಿಯ ಸದಸ್ಯ ಸಿದ್ದೀಕ್ ಕೆಂಪಿ ಮಾತನಾಡಿ, ಕೋಟೆ ಹಿತ್ತಿಲು, ಗಾಂಧಿಪಾರ್ಕ್ ಪರಿಸರದಲ್ಲಿ ಮಣ್ಣು ಮಿಶ್ರಿತ ಕುಡಿಯುವ ನೀರು ಗ್ರಾಹಕರಿಗೆ ಸರಬರಾಜು ಆಗುತ್ತಿದೆ. ಆದ್ದರಿಂದ ಅಲ್ಲಿಗೆ ಬದಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೋಡ್ರಿಗಸ್, ಕೋಟೆ ಹಿತ್ತಿಲು ಬಳಿ ಹೊಸ ಕೊಳವೆ ಬಾವಿ ಕೊರೆದು ಈಗಾಗಲೇ ಎಲ್ಲ ವ್ಯವಸ್ಥೆ ಆಗಿದೆ ಎಂದು ತಿಳಿಸಿದರಲ್ಲದೆ, ತಕ್ಷಣವೇ ಹೊಸ ಕೊಳವೆ ಬಾವಿ ನೀರನ್ನು ಗ್ರಾಹಕರಿಗೆ ಒದಗಿಸುವಂತೆ ನೀರು ನಿರ್ವಾಹಕರಿಗೆ ಸೂಚನೆ ನೀಡಿದರು.
ಸಮಿತಿ ಸದಸ್ಯ ಇಸ್ಮಾಯಿಲ್ ತಂಙಳ್ ಮಾತನಾಡಿ, ಲಕ್ಷ್ಮೀನಗರದಲ್ಲಿ 80ಕ್ಕೂ ಅಧಿಕ ಕುಡಿಯುವ ನೀರು ಬಳಕೆದಾರರಿದ್ದಾರೆ. ಆದರೆ ಇಲ್ಲಿ ಎತ್ತರ ಪ್ರದೇಶದಲ್ಲಿ ವಾಸವಿರುವರಿಗೆ ಸರಿಯಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ದೂರಿದರು.
ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ, ಗ್ರಾ.ಪಂ.ಗೆ ಈಗ ಹಸಿ ಕಸ ವಿಲೇವಾರಿದ್ದೇ ಸಮಸ್ಯೆಯಾಗಿದೆ. ಆದ್ದರಿಂದ ಗ್ರಾ.ಪಂ. ಒಣಕಸ ಸಂಗ್ರಹಿಸಿ, ಹಸಿ ಕಸವನ್ನು ಆಯಾ ವಾರ್ಡ್ಗಳಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡಿದರೆ ಬಹುತೇಕ ಸಮಸ್ಯೆ ಪರಿಹಾರವಾಗಬಹುದು ಎಂದು ಸಲಹೆ ನೀಡಿದರು. ವಸತಿ ಸಮುಚ್ಚಯಗಳಿಗೆ ಗ್ರಾ.ಪಂ. ಕುಡಿಯುವ ನೀರು ನೀಡಲು ಮುಂದಾದರೆ ಅದರ ದುರುಪಯೋಗವಾಗಬಹುದು. ಈ ಬಗ್ಗೆ ಈಗಾಗಲೇ ಹಲವಾರು ದೂರುಗಳು ಬಂದಿದ್ದು, ಇದರಿಂದ ಇತರರಿಗೆ ನೀರು ನೀಡಲು ಅಸಾಧ್ಯವಾಗುವ ಲಕ್ಷಣಗಳಿವೆ. ಈ ಬಗ್ಗೆ ಪರಿಶೀಲಿಸಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.
ಗ್ರಾ.ಪಂ. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಕುಡಿಯುವ ನೀರಿನ ದರ ಪರಿಷ್ಕರಣೆಯಾಗದೇ 12 ವರ್ಷ ಕಳೆಯಿತು ಎಂದಾಗ, ಅಬ್ದುರ್ರಹ್ಮಾನ್ ಕೆ. ಧ್ವನಿಗೂಡಿಸಿ, ಶೇ. 60 ರಷ್ಟು ಹೆಚ್ಚಿಸಲು ಹೇಳಿದರು. ಆಗ ಸದಸ್ಯರೊಳಗೆ ಈ ಬಗ್ಗೆ ಚರ್ಚೆ ನಡೆದು, ಈಗಾಗಲೇ ಮಾಸಿಕ ಶುಲ್ಕ ನೂರು ರೂಪಾಯಿ ಇದೆ. ಇನ್ನೂ ಹೆಚ್ಚಿಸಿದರೆ ಕಡು ಬಡವರಿಗೆ ಕಷ್ಟವಾಗಬಹುದು ಎಂದರು. ಆಗ ಪಿಡಿಒ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಉಪಾಧ್ಯಕ್ಷ ಧನಂಜಯ ನಟ್ಟಿಬೈಲು, ಸದಸ್ಯರಾದ ಉಷಾ ನಾಯ್ಕ, ಯಶೋಧ, ಮುರಳಿ, ಜಯಂತ ಪೊರೋಳಿ, ಚಂದ್ರಾವತಿ ಉಪಸ್ಥಿತರಿದ್ದರು.