
ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದ.ಕ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ, ವಿವಿಧತೆಯಲ್ಲಿ ಏಕತೆ ಮಹಿಳಾ ವಾಹನ ಜಾಥಾ ನೆರವೇರಿತು.

ದರ್ಬೆಯಿಂದ ಹೊರಟ ಮಹಿಳಾ ವಾಹನ ಜಾಥಾಕ್ಕೆ ಎಸ್.ಐ ಸವಿತಾರವರು ಚಾಲನೆ ನೀಡಿದರು. ನಂತರ ನಡೆದ ವಾಹನ ಜಾಥಾದಲ್ಲಿ ದ್ವಿಚಕ್ರ ವಾಹನದಿಂದ ಆಟೋ ರಿಕ್ಷಾ, ಜೀಪು, ಕಾರು, ಪಿಕಪ್, ಆಂಬ್ಯುಲೆನ್ಸ್ ಹಾಗೂ ಬಸ್ಗಳನ್ನು ಮಹಿಳೆಯರೇ ಚಾಲಕರಾಗಿದ್ದು ವಾಹನ ಜಾಥಾವು ಎಲ್ಲರ ಗಮನ ಸೆಳೆಯಿತು. ದರ್ಬೆಯಿಂದ ಹೊರಟ ಮಹಿಳಾ ವಾಹನ ಜಾಥ ಕಾರ್ಯಕ್ರಮ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕ ತನಕ ಸಾಗಿಬಂದಿತು. ಮಹಿಳಾ ಚೆಂಡೆ ವಾದನದೊಂದಿಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮಹಿಳಾ ಮಂಡಲಗಳ ಸದಸ್ಯರು ವಿವಿಧ ವೇಷ, ಭೂಷಣಗಳಲ್ಲಿ ಮೆರವಣಿಗೆಯಲ್ಲಿ ಸಾಗಿಬಂದರು. ನಂತರ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥೀ ಮುರಳ್ಯ ಮಾತನಾಡಿ, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ನಾನು ಒಬ್ಬಳೇ ಮಹಿಳಾ ಶಾಸಕಿಯಾಗಿದ್ದೇನೆ. ನಾಲ್ಕು ವರ್ಷದ ನಂತರ ನಡೆಯುವ ಮಹಿಳಾ ದಿನಾಚರಣೆಯಲ್ಲಿ ಎಷ್ಟು ಮಂದಿ ಮಹಿಳಾ ಶಾಸಕರಿರುತ್ತಾರೆ ಎಂದು ಕಾದುನೋಡಬೇಕು. ಪ್ರಧಾನಿ ಮೋದಿಯವರು ಶೇ.33 ಮಹಿಳಾ ಮೀಸಲಾತಿ ನೀಡಿದ್ದಾರೆ. ಅದನ್ನು ಶೇ.60ಕ್ಕೆ ಏರಿಸುವ ಮೂಲಕ ಸಾಧನೆಗೆ ಎಲ್ಲಾ ಮಹಿಳೆಯರಿಗೂ ಅವಕಾಶ ನೀಡಬೇಕು. ಇಂದು ಸೈಕಲ್ನಿಂದ ಹಿಡಿದು ವಿಮಾನ ಹಾರಿಸುವ ತನಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಪ್ರತಿಭಾ ಪಾಟೀಲ್, ದೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾರೆ. ರಾಜ್ಯದಲ್ಲಿ ಹಲವು ಮಂದಿ ಮಹಿಳೆಯರು ಸಚಿವರಾಗಿರುವುದು ಮಹಿಳೆಯರ ಸಾಧನೆಯಾಗಿದೆ. ಸಭೆಯಲ್ಲಿರುವ ಮಹಿಳೆಯರು ಮುಂದೆ ಮುಖ್ಯಮಂತ್ರಿ, ಪ್ರಧಾನಿ, ರಾಷ್ಟರಪತಿಯಾಗುವ ಹಂತಕ್ಕೆ ಬೆಳೆಯಬೇಕು. ಇಂತಹ ಎಲ್ಲಾ ಅವಕಾಶ ದೊರೆಯಲಿ. ಕೊಟ್ಟ ಜವಾಬ್ದಾರಿ ನಿರ್ವಹಿಸುವ ಶಕ್ತಿ ಮಹಿಳೆಯರಲ್ಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಹಿಳೆಯರು ಯಾವತ್ತೂ ಅಬಲೆಯರಲ್ಲ. ಅಂಗಲದಲ್ಲಿ ಮಗುವನ್ನು ಆಡಿಸುವ ಮಹಿಳೆಯರು ಇಂದು ಮಂಗಳನ ಅಂಗಳಕ್ಕೆ ಹೋಗುವಷ್ಟು ಮಹಿಳೆಯರು ಶಕ್ತವಾಗಿದ್ದಾರೆ. ಜಿಲ್ಲೆಯಲ್ಲಿ 73 ಸಾವಿರ ಮತದಾರರ ಮಹಿಲಕೆಯರು ಅಧಿಕವಾಗಿದ್ದು ದ.ಕ ಜಿಲ್ಲೆ ಮಹಿಳಾ ಸಾಮ್ರಾಜ್ಯವಾಗಿದೆ. ಮೋದಿಯವರ ಕನಸಿನಂತೆ ಶೇ.33 ಮಹಿಳಾ ಮೀಸಲಾತಿಯಂತೆ 2028ರ ವೇಳೆಯಲ್ಲಿ ಜಿಲ್ಲೆಯಲ್ಲಿ 4 ಮಂದಿ ಮಹಿಳಾ ಶಾಸಕರಾಗಿ, ಒಬ್ಬ ಸಂಸದರಾಗುವ ಮೂಲಕ ಮಹಿಳೆಯವರು ಜನಪ್ರತಿನಿಧಿಯಾಗಿ ಆಡಳಿತ ನಡೆಸುವ ಕಾಲ ಬರಲಿದೆ. ಇದಕ್ಕಾಗಿ ಎಲ್ಲರೂ ಸಿದ್ದರಾಗಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಮುಂದಿನ ಭವಿಷ್ಯಕ್ಕೆ ಪೂರಕವಾಗುವಂತೆ ಮಹಿಳಾ ಮಂಡಲಗಳ ಮುಖಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಶೇ.33 ಮಹಿಳಾ ಮೀಸಲಾತಿಯನ್ನು ನೀಡಿದ್ದಾರೆ. ಇನ್ನಷ್ಟು ಮೀಸಲಾತಿ ಮಹಿಳೆಯವರಿಗೆ ದೊರೆಯಬೇಕು. ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ, ಮಹಿಳೆಯವರು ಮಹಿಳಾ ದಿನಾಚರಣೆಯ ಒಂದು ದಿನ ಮಾತ್ರ ಗೌರವ ಪಡೆಯುವ ದಿನವಲ್ಲ. ಅದು ನಿರಂತರವಾಗಿರಬೇಕು. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು. ಪೋಷಕರು ಮಕ್ಕಳನ್ನು ಭೇದ ಬಾವ ಇಲ್ಲದೆ ಧೈರ್ಯ ಶಾಲಿ ಮಕ್ಕಳಾಗಿ ಬೆಳೆಸಬೇಕು. ಪ್ರತಿಯೊಬ್ಬ ಮಹಿಳೆಯರೂ ಒಗ್ಗಟ್ಟಿನಿಂದ ಸಮಾಜದಲ್ಲಿ ಬೆಳೆಯಬೇಕು ಎಂದರು.

ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಉಪ ಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು ಮಾತನಾಡಿ, ನಮ್ಮ ಎಲ್ಲಾ ಹೋರಾಟದ ಫಲವಾಗಿ ಮಹಿಳಾ ಮೀಸಲಾತಿ ಬಂದಿದೆ. ನಾವು ಇಷ್ಟು ಮುಂದುವರಿದರೆ ಸಾಲದು. ಹಳ್ಳಿ ಹಳ್ಳಿಗಳಲ್ಲಿ ಮಹಿಳಾ ಸಂಘಟನೆ ಬೆಳೆಯಬೇಕು. ಎಲ್ಲಾ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವ ಜನತೆಯನ್ನು ಸಂಘಟನೆಯೊಂದಿಗೆ ಸೇರಿಕೊಳ್ಳಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಉಷಾ ನಾಯಕ್ ಮಾತನಾಡಿ, ಜಿಲ್ಲಾಧ್ಯಕ್ಷೆಯಾಗಿ ಒಕ್ಕೂಟದಲ್ಲಿ ಸೇವೆ ಸಲ್ಲಿಸಲು ನನಗೆ ಎಲ್ಲರ ಸಲಹೆ, ಸಹಕಾರ ದೊರೆತಿದೆ. ಮಹಿಳಾ ದಿನಾಚರಣೆಗೆ ಹಲವು ಮಂದಿ ದಾನಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ. ಎಲ್ಲ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಬಂದಿದೆ. ಒಕ್ಕೂಟವು ಮುಂದೆ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಲು ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.
ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಅಧ್ಯಕ್ಷೆ ಶಾಂತಿ ಹೆಗಡೆ, ಬಂಟ್ವಾಳದ ಅಧ್ಯಕ್ಷೆ ಧರ್ಮಾವತಿ, ಉಳ್ಳಾಲದ ಅಧ್ಯಕ್ಷೆ ದೇವಕಿ, ಮಂಗಳೂರು ಅಧ್ಯಕ್ಷೆ ಮನೋರಮಾ ಮಂಗಳೂರು, ಸುಳ್ಯದ ಅಧ್ಯಕ್ಷೆ ಮಧುಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸಾಧಕರಿಗೆ ಸನ್ಮಾನ:
ಶತಾಯಿಷಿ, 43 ಬಾರಿ ಶಬರಿಮಲೆ ಯಾತ್ರೆ ಮಾಡಿದ ಕಮಲಾ ನೋಣಯ್ಯ ನಾಯ್ಕ್, ಚರ್ಮ,ಕೂದಲು ತಜ್ಞೆ ಮರ್ಸಿ ವೀನಾ ಡಿ’ ಸೋಜ, ಕೃತಿಕಾರ್ತಿ ಶಾರದಾ ಭಟ್ ಕೊಡಂಕಿರಿ, ನೃತ್ಯ ಗುರು ಪ್ರತಿಕ್ಷಾ ಪ್ರಭು, ಯಕ್ಷಗಾನ ಕಲಾವಿದೆ, ಮಿಸಸ್ ಇಂಡಿಯಾ ಕಿರೀಟ ಪುರಸ್ಕಾರ ಪಡೆದ ಸುಪ್ರೀಯ ಕೆ.ಎಸ್., ಜಾನಪದ ಕಲಾವಿದೆ ಮುತ್ತು ಎನ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಮಹಿಳಾ ವಾಹನ ಜಾಥಾದ ತೀರ್ಪಗಾರ್ತಿ ಆಶಾ ಮಯ್ಯ, ಪಿಕಪ್ ಚಾಲಕಿಯಾಗಿದ್ದ ಮಾಧವಿ ಉಳ್ಳಾಲ, ಕಾರ್ಯಕ್ರಮಕ್ಕೆ ಸಹಕರಿಸಿದ ಬೆಳ್ಳಿಪ್ಪಾಡಿ ಅಂಗನವಾಡಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರನ್ನು ಗೌರವಿಸಲಾಯಿತು.
ವಾಹನ ಜಾಥಾಕ್ಕೆ ಬಹುಮಾನ:
ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಮಹಿಳಾ ವಾಹನ ಜಾಥದಲ್ಲಿ ಮಂಗಳೂರು ತಾಲೂಕು (ಪ್ರ), ಮುಲ್ಕಿ ತಾಲೂಕು (ದ್ವಿ), ಬಂಟ್ವಾಳ ತಾಲೂಕು (ತೃ), ಉಳ್ಳಾಲ ಹಾಗೂ ಸುಳ್ಯ ತಾಲೂಕಿನ ಮಹಿಳಾ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ನಯನಾ ರೈ ತಂಡ ಪ್ರಾರ್ಥಿಸಿದರು. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಗೌರವ ಸಲಹೆಗಾರ್ತಿ ಪ್ರೇಮಲತಾ ರಾವ್ ಸ್ವಾಗತಿಸಿದರು. ಗೌರವಾಧ್ಯಕ್ಷೆ ಚಂಚಲ ತೇಜೋಮಯ ಪ್ರಸ್ತಾವಣೆಗೈದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ರೇಷ್ಮಾ ವಂದಿಸಿದರು. ರಂಜಿನಿ, ಲತಾ ಶೆಟ್ಟಿ, ರೇವತಿ, ಶಿಲ್ಪಾ, ವಿದ್ಯಾ ಕೊಟ್ಟಾರಿ, ವತ್ಸಲಾ ರಾಜ್ಞಿ, ಸುರೇಖಾ ಹೆಬ್ಬಾರ್, ಅನುಪಮ, ಜ್ಯೋತಿ ನಾಯಕ್, ರೂಪ, ಮೋಹಿನಿ ದಿವಾಕರ್, ಕುಶಾಲಾಕ್ಷಿ, ಮೀನಾಕ್ಷಿ, ರೇಣುಕಾ, ರಾಜೇಶ್ವರಿ, ಪೂರ್ಣಿಮಾ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ನಂತರ ವಿವಿಧ ತಾಲೂಕುಗಳ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿತು.
ಜಿಲ್ಲೆಯವರೇ ಆಗಿರುವ ಶೋಭಾ ಕರಂದ್ಲಾಜೆಯವರು ರಾಜ್ಯ ಇಂದನ ಸಚಿವೆಯಾದ ಸಂದರ್ಭದಲ್ಲಿ ಒಂದು ದಿನವೂ ವಿದ್ಯುತ್ ಇಲ್ಲದಂತೆ ನಡೆಸಿಕೊಂಡಿರುವುದು ಮಹಿಳೆಯರಿಗೆ ಸಂದ ಸಾಧನೆಯಾಗಿದೆ. ಈಗ ಪುರುಷರು ಸಚಿವ ಸ್ಥಾನವಿದ್ದು ಯಾವಾಗ ನೋಡಿದರೂ ಕರೆಂಟ್ ಇಲ್ಲ. ದಿನಾ ಬೈಗುಳ ತಿನ್ನುವ ಕೆಲಸ ಮಹಿಳೆಯರಿಗಿದೆ. ಮಹಿಳೆಯರಿಗೆ ಜವಾಬ್ದಾರಿ ದೊರೆತರೆ ಯಾವ ರೀತಿ ನಿರ್ವಹಿಸಬಹುದು ಎನ್ನುವುದಕ್ಕೆ ಶೋಭಾ ಕರಂದ್ಲಾಜೆ ಉದಾಹರಣೆಯಾಗಿದ್ದಾರೆ. ಮುಂದೆ ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ ದೊರೆತರೂ ಅವರು ಎಲ್ಲಾ ರಂಗದಲ್ಲಿ ಸವಲತ್ತುಗಳನ್ನು ಸಮಾನವಾಗಿ ಹಂಚಿಕೆಯಾಗುವಂತೆ ನಿಭಾಯಿಸಲಿದ್ದಾರೆ.
-ಭಾಗೀರಥಿ ಮುರುಳ್ಯ, ಶಾಸಕರು ಸುಳ್ಯ