ಪುತ್ತೂರು:ನಗರಸಭಾ ವ್ಯಾಪ್ತಿಗೆ ಮಾಡಿದ ಬಿ-ಖಾತಾ ಬಗ್ಗೆ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿಯವರು ಜನರಿಗೆ ಗೊಂದಲ ಮತ್ತು ತಪ್ಪು ಮಾಹಿತಿ ನೀಡಿದ್ದಾರಲ್ಲದೆ ಸರಕಾರದ ಕಾರ್ಯಕ್ರಮಕ್ಕೆ ಟೀಕೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಸಂಚಾಲಕ ಇಸಾಕ್ ಸಾಲ್ಮರ ಅವರು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದು, ಈ ಕುರಿತು ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಮಹಮ್ಮದ್ ಆಲಿಯವರ ಗೊಂದಲದ ಹೇಳಿಕೆಯಿಂದಾಗಿ, ಈಗಾಗಲೇ ನಗರಸಭೆಯಲ್ಲಿ ಖಾತೆಯ ವಿಚಾರದಲ್ಲಿ ಸಮಸ್ಯೆಯಿರುವ ಸುಮಾರು 1 ಸಾವಿರ ಮಂದಿಯಿಂದ ಅರ್ಜಿಗಳೇ ಬಾರದೆ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ.ಸರಕಾರದ ಕಾರ್ಯಕ್ರಮದ ವಿರುದ್ಧ ಅವರು ಶಾಸಕರ, ಬ್ಲಾಕ್ ಅಧ್ಯಕ್ಷರ ಗಮನಕ್ಕೆ ತಾರದೆ ಪತ್ರಿಕಾಗೋಷ್ಟಿ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಮಹಮ್ಮದ್ ಆಲಿ ಮತ್ತು ಪತ್ರಿಕಾಗೋಷ್ಟಿಯಲ್ಲಿ ಜೊತೆಯಲ್ಲಿದ್ದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದೇನೆ ಎಂದು ಇಸಾಕ್ ಸಾಲ್ಮರ ತಿಳಿಸಿದ್ದಾರೆ.
ಸ್ಪಷ್ಟ ಮಾಹಿತಿ ನೀಡಿದ್ದರಿಂದ ಬ್ರೋಕರ್ಗಳ ಹೊಟ್ಟೆಗೆ ಹೊಡೆದಂತಾಗಿದೆ-ಆಲಿ ಪ್ರತಿಕ್ರಿಯೆ
ಎ ಮತ್ತು ಬಿ ಖಾತೆಗಳಲ್ಲಿ ಈ ತನಕ ಕೆಲವು ಬ್ರೋಕರ್ಗಳು ಗೊಂದಲ ಮೂಡಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.ಸರಕಾರದ ಆದೇಶದ ಕುರಿತು ನಾನು ಸ್ಪಷ್ಟ ಮಾಹಿತಿಯನ್ನು ಜನರಿಗೆ ನೀಡಿದ್ದರಿಂದಾಗಿ ಬ್ರೋಕರ್ಗಳ ಹೊಟ್ಟೆಗೆ ಹೊಡೆದಂತಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.