ನೆಲ್ಯಾಡಿ: ಟ್ರಾನ್ಸ್‌ಪೋರ್ಟ್ ಉದ್ಯಮಿಯಾಗಿರುವ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಇಕ್ಬಾಲ್ ಎಂಬವರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಚಿತ್ರಹಿಂಸೆ ನೀಡಿ ೩೧.೫೦ ಲಕ್ಷ ರೂ.ದೋಚಿ ಸಕಲೇಶಪುರ ರೆಸಾರ್ಟ್ ನಲ್ಲಿ ಬಿಟ್ಟುಹೋಗಿರುವ ಘಟನೆಗೆ ಸಂಬಂಧಿಸಿದಂತೆ ನಟೋರಿಯಸ್ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್ ಸಹಿತ ಹಲವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಉಡುಪಿಯ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್ ಬಿಳಿಯೂರು,ದಾವೂದ್ ಇಬ್ರಾಹಿಂ,ರಿಜ್ವಾನ್, ಮನ್ಸೂರ್, ಶಮೀರ್, ನಝೀರ್, ಇಸಾಕ್ ಪ್ರೇಯಸಿ, ತಾಯಿ,ಚಿಕ್ಕಪ್ಪ ಸೇರಿದಂತೆ ಬಿಳಿಯೂರು,ಹಂಗಲೂರು,ಕುಂದಾಪುರ, ಕಾವಳ್‌ಕಟ್ಟೆ, ಕುಕ್ಕಾಜೆ ಪರಿಸರದ ಸುಮಾರು ೨೦ ಮಂದಿ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.
ಉಪ್ಪಿನಂಗಡಿ ಮಠದಲ್ಲಿ ಕಚೇರಿ ಹೊಂದಿರುವ ಅಶೋಕ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಮಾಲಕ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಇಕ್ಬಾಲ್ ಅವರು ಜ.೨೪ರಂದು ಕೋಲ್ಪೆಯಿಂದ ಬೆಂಗಳೂರಿಗೆ ತೆರಳಿ ಅಲ್ಲಿ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ನಡೆದ ರಾಜ್ಯ ಹಾಗೂ ಹೊರ ರಾಜ್ಯದ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಪ್ರತಿನಿಽಗಳ ಸಭೆಯಲ್ಲಿ ಭಾಗವಹಿಸಿದ್ದರು. ರಾತ್ರಿ ಅಲ್ಲಿಂದ ಶಿವಾಜಿನಗರದಲ್ಲಿರುವ ಸ್ನೇಹಿತ ಕರೀಂ ಎಂಬವರಿಗೆ ಸೇರಿದ ಸಿಟ್ರೆಕ್ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದರು. ಜ.೨೫ರಂದು ರಾತ್ರಿ ಬೆಂಗಳೂರಿನಿಂದ ನೆಲ್ಯಾಡಿ ಕೋಲ್ಪೆಗೆ ಒಬ್ಬನೇ ಕಾರು ಚಲಾಯಿಸಿಕೊಂಡು ಹೊರಟಿದ್ದು, ಜ.೨೬ರ ಮುಂಜಾನೆ ೩ ಗಂಟೆ ವೇಳೆಗೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರು ಸಮೀಪದ ಆನಂದ ಭವನ ಹೋಟೆಲ್‌ನಿಂದ ತುಸು ಮುಂದೆ ನಾಲ್ಕೈದು ಕಾರುಗಳಲ್ಲಿ ಬಂದ ಆರು ಮಂದಿ ದರೋಡೆಕೋರರು ಇಕ್ಬಾಲ್ ಅವರನ್ನು ಅಡ್ಡಗಟ್ಟಿ ಅವರನ್ನು ಕಾರಿಗೆ ಹಾಕಿಕೊಂಡು ಅಪಹರಣ ನಡೆಸಿದ್ದರು. ಎರಡು ದಿನ ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸುತ್ತಾಡಿಸಿದ ತಂಡ ಇಕ್ಬಾಲ್ ಅವರಲ್ಲಿದ್ದ ಲಕ್ಷಾಂತರ ರೂಪಾಯಿ, ಬ್ಯಾಂಕ್ ಖಾತೆಯಿಂದ ೧೫ ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಜ.೨೮ರಂದು ಸಕಲೇಶಪುರದ ರೆಸಾರ್ಟ್ ವೊಂದಕ್ಕೆ ಕರೆತಂದು ಇಕ್ಬಾಲ್ ಅವರ ಸಹೋದರನನ್ನು ಕರೆಸಿ ಅವರಿಂದಲೂ ೧೩ ಲಕ್ಷ ರೂ. ಪಡೆದುಕೊಂಡು ಇಕ್ಬಾಲ್ ಅವರನ್ನು ಅಲ್ಲಿಯೇ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿ ತಂಡ ಪರಾರಿಯಾಗಿತ್ತು.ಘಟನೆ ಬಗ್ಗೆ ಇಕ್ಬಾಲ್ ಅವರು ನೀಡಿದ್ದ ದೂರಿನಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.ದರೋಡೆಕೋರರು ಒಟ್ಟು ೩೧.೫೦ ಲಕ್ಷ ರೂ. ದೋಚಿದ್ದಾರೆ ಎಂದು ಇಕ್ಬಾಲ್ ಅವರು ತಿಳಿಸಿದ್ದಾರೆ. ಇಕ್ಬಾಲ್ ಅವರು ಟ್ಯಾಂಕರ್ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ರಾಜ್ಯ, ಹೊರರಾಜ್ಯಗಳಿಗೆ ಸಾಗಾಟ ಮಾಡುವ ಉದ್ದಿಮೆ ನಡೆಸುತ್ತಿದ್ದಾರೆ.
ಉಡುಪಿ ಗರುಡ ಗ್ಯಾಂಗ್ ಕೃತ್ಯ:
ಅಪಹರಿಸಿದವರು ಉಡುಪಿಯ ಗರುಡ ಗ್ಯಾಂಗ್ ಎಂದು ಹೇಳಿಕೊಂಡು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಇಕ್ಬಾಲ್ ಅವರು ನೆಲಮಂಗಲ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದು ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಹೊಸಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಗಣೇಶ್ ರಾವ್, ನೆಲಮಂಗಳ ಇನ್ಸ್‌ಪೆಕ್ಟರ್ ನರೇಂದ್ರ ಬಾಬು ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಽಸುವಲ್ಲಿ ಯಶಸ್ವಿಯಾಗಿದೆ.
ಪರಾರಿಯಾಗಲೆತ್ನಿಸಿದ ಇಸಾಕ್‌ಗೆ ಗುಂಡೇಟು:
ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿ ಇಸಾಕ್‌ಗೆ ಪೊಲೀಸರು ಶೂಟೌಟ್ ಮಾಡಿ ಬಂಽಸಿರುವುದಾಗಿ ತಿಳಿದು ಬಂದಿದೆ.
ದರೋಡೆ ಪ್ರಕರಣದಲ್ಲಿ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್ ಬೆನ್ನು ಬಿದ್ದಿದ್ದ ಬೆಂಗಳೂರಿನ ನೆಲಮಂಗಲ ಠಾಣೆ ಪೊಲೀಸರು ಆರೋಪಿಯ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಕಾರಿನಲ್ಲಿ ಯುವತಿಯೋರ್ವಳೊಂದಿಗೆ ಮಣಿಪಾಲಕ್ಕೆ ಬಂದಿದ್ದ ಇಸಾಕ್ ಪೊಲೀಸರನ್ನು ಕಂಡ ಕೂಡಲೇ ತನ್ನ ಕಾರಿನಲ್ಲಿ ಎಸ್ಕೇಪ್ ಆಗೋದಕ್ಕೆ ಯತ್ನಿಸಿದ್ದ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಸ್ಪೀಡ್ ಆಗಿ ಗಾಡಿ ಚಲಾಯಿಸಿ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನು ಸಾಹಸಮಯವಾಗಿ ಚೇಸ್ ಮಾಡಿ ಮಣಿಪಾಲದ ಮಣ್ಣಪಳ್ಳದ ಬಳಿ ಕಾರಿನೊಂದಿಗೆ ಸೆರೆ ಹಿಡಿದಿದ್ದಾರೆ.