ಹೆಚ್ಚುತ್ತಿರುವ ಅಗ್ನಿ ಅವಘಡ, ಶಮನವೇ ಸವಾಲು : ಪುತ್ತೂರು ಅಗ್ನಿಶಾಮಕ ದಳಕ್ಕೆ ನೀರಿನದ್ದೇ ಸಮಸ್ಯೆ

0

ಬರಹ: ಶರತ್ ಕುಮಾರ್ ಪಾರ

ಪುತ್ತೂರು:ಬಿರು ಬೇಸಿಗೆಯ ಕಾರಣದಿಂದ ಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುವ ಘಟನೆಗಳು ಹೆಚ್ಚಾಗುತ್ತಿದ್ದು ಅಗ್ನಿ ಶಾಮಕ ದಳಕ್ಕೆ ಶಮನ ಕಾರ್ಯ ಸವಾಲಾಗಿ ಪರಿಣಮಿಸಿದೆ. ಬೇಸಿಗೆಯಲ್ಲಿ ನಡೆಯುತ್ತಿರುವ ಎಲ್ಲಾ ಅಗ್ನಿ ಅವಘಡಗಳನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿರುವ ಪುತ್ತೂರು ಅಗ್ನಿ ಶಾಮಕ ದಳಕ್ಕೆ ನೀರು ಹಾಗೂ ಸಣ್ಣ ವಾಹನದ ಕೊರತೆಯಿಂದ ಅಗ್ನಿ ಶಮನ ಸವಾಲಾಗಿ ಪರಿಣಮಿಸಿದೆ.


ಹೆಚ್ಚಿದ ತಾಪಮಾನದಿಂದಾಗಿ ಗುಡ್ಡ, ಅರಣ್ಯ ಹಾಗೂ ಒಣ ಹುಲ್ಲಿನ ಪ್ರದೇಶಕ್ಕೆ ಬೆಂಕಿ ಬೀಳುತ್ತಿದೆ.ಮನೆ,ಕಟ್ಟಡಗಳಲ್ಲೂ ಬೆಂಕಿ ಅನಾಹುತ ಸಂಭವಿಸುತ್ತದೆ.ಸಾಮಾನ್ಯವಾಗಿ ಮಧ್ಯಾಹ್ನದ ಸುಡುಬಿಸಿಲಿನ ಸಮಯದಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಕಂಡು ಬರುತ್ತಿದೆ.ಹೆಚ್ಚಿನ ಬೆಂಕಿ ಅವಘಡಗಳು ಉಂಟಾಗುವುದೇ ವಿದ್ಯುತ್ ಪರಿವರ್ತಕದಿಂದ.ಇದರಿಂದ ಉಂಟಾದ ಸಣ್ಣ ಕಿಡಿಯೊಂದು ಕೆಳಗೆ ಬಿದ್ದು ಅಲ್ಲಿ ಹರಡಿಕೊಂಡಿರುವ ಪೊದೆ,ಬಳ್ಳಿಗಳ ಮೂಲಕ ಬೆಂಕಿ ಹತ್ತಿಕೊಳ್ಳುತ್ತದೆ.ಒಂದೇ ಸಮಯದಲ್ಲಿ ವಿವಿಧೆಡೆ ಇಂತಹ ಘಟನೆಗಳಾದಾಗ ಅಗ್ನಿಶಾಮಕ ದಳಕ್ಕೆ ಅಗ್ನಿ ಶಮನವೇ ಸವಾಲಾಗಿ ಪರಿಣಮಿಸುತ್ತಿದೆ.ಇಂತಹ ಸಂದರ್ಭದಲ್ಲಿ ಒಂದು ಕಡೆ ಬೆಂಕಿ ನಂದಿಸಿ ಇನ್ನೊಂದು ಕಡೆಗೆ ಹೋಗಬೇಕಾಗುತ್ತದೆ.ಅಷ್ಟರಲ್ಲಾಗಲೇ ಬೆಂಕಿಯಿಂದ ಅಲ್ಲಿನ ಪ್ರದೇಶಕ್ಕೆ ಹಾನಿಯಾಗಿರುತ್ತದೆ ಮಾತ್ರವಲ್ಲದೆ, ಅಗ್ನಿ ಶಾಮಕ ದಳದವರ ಆಗಮನ ವಿಳಂಬ ಎಂಬ ಆರೋಪ ಕೇಳಿ ಬರುತ್ತದೆ.


ನೀರಿನ ಸಮಸ್ಯೆ:
ಮೊಟ್ಟೆತ್ತಡ್ಕದಲ್ಲಿರುವ ಪುತ್ತೂರು ಅಗ್ನಿ ಶಾಮಕ ಠಾಣೆಗೆ ಬೆಂಕಿ ನಂದಿಸಲು ನೀರಿನದ್ದೇ ಮುಖ್ಯ ಸಮಸ್ಯೆಯಾಗಿದೆ.ಒಮ್ಮೆ ನೀರು ತುಂಬಿಸಿಕೊಂಡು ಹೊರಟ ಮೇಲೆ ಬೆಂಕಿ ನಂದಿಸಿ ಬಳಿಕ ವಾಹನದಲ್ಲಿ ನೀರು ಖಾಲಿಯಾದರೆ ನೀರು ತುಂಬಿಸಲು ಮತ್ತೆ ಠಾಣೆಗೆ ಬರಬೇಕಾದ ಪರಿಸ್ಥಿತಿ ಇದೆ.ಬೇರೆ ಕಡೆ ನೀರು ತುಂಬಿಸಲು ವ್ಯವಸ್ಥೆ ಇಲ್ಲ.ನೀರು ತುಂಬಿಸಿ ಹೋಗುವಷ್ಟರಲ್ಲಿ ಬೆಂಕಿ ಶಮನಕ್ಕೆ ಸಮಯದ ಅಭಾವವೂ ಉಂಟಾಗುತ್ತದೆ.ಅಗ್ನಿ ಶಾಮಕ ಠಾಣೆಯಲ್ಲಿರುವ ಒಂದೇ ಬೋರ್‌ವೆಲ್‌ನಿಂದ ನೀರು ತುಂಬಿಸಬೇಕಾಗಿದೆ.ಬೋರ್‌ವೆಲ್‌ನಿಂದ ಟ್ಯಾಂಕ್‌ಗೆ ಶೇಖರಿಸಿ ಅಲ್ಲಿಂದ ವಾಹನಕ್ಕೆ ತುಂಬಿಸಬೇಕಾಗಿದೆ.ವಿದ್ಯುತ್ ಸಮಸ್ಯೆಯಾದರೆ ನೀರು ತುಂಬಿಸುವುದೂ ಕಷ್ಟಕರವಾಗಿದೆ.


ಕೆಡಿಪಿಯಲ್ಲೂ ಪ್ರಸ್ತಾಪ:
ಅಗ್ನಿ ಶಾಮಕ ದಳದವರಿಗೆ ನೀರಿನ ಸಮಸ್ಯೆ ಬಗ್ಗೆ,ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಚರ್ಚೆ ನಡೆದಿತ್ತು.ಪುತ್ತೂರು ನಗರ ಹಾಗೂ ಹೆದ್ದಾರಿ ಸಮೀಪದಲ್ಲೇ ನೀರು ಸರಬರಾಜಾಗುವ ಪೈಪ್‌ನಿಂದ ನೀರು ತುಂಬಿಸಲು ವ್ಯವಸ್ಥೆ ಮಾಡುವ ಬಗ್ಗೆ ಶಾಸಕರು ಭರವಸೆ ನೀಡಿದ್ದರು.


ಖಾಸಗಿ ಬೋರ್‌ವೆಲ್‌ನಿಂದ ನೀರು:
ನೀರಿನ ತೊಂದರೆಯನ್ನು ಎದುರಿಸುತ್ತಿರುವ ಅಗ್ನಿ ಶಾಮಕ ಠಾಣೆಯ ವಾಹನಕ್ಕೆ ಖಾಸಗಿಯವರಿಂದ ಕಾಡಿ ಬೇಡಿ ನೀರು ತುಂಬಿಸಲಾಗುತ್ತಿದೆ.ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ನೀರಿನ ಕೊರತೆಯುಂಟಾಗುತ್ತದೆ.ನೀರು ತುಂಬಿಸಲು ಮತ್ತೆ ಪುತ್ತೂರು ಠಾಣೆಗೆ ಬರುವ ಬದಲು ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಖಾಸಗಿ ವ್ಯಕ್ತಿಗಳ ಬೋರ್‌ವೆಲ್ ಪೈಪು ಮೂಲಕ ನೀರು ಪಡೆದುಕೊಳ್ಳುತ್ತಿದ್ದಾರೆ.ಈ ಬಾರಿ ಸುಮಾರು 7ರಿಂದ 8 ಬಾರಿ ಖಾಸಗಿಯವರ ತೋಟದಿಂದ ಪೈಪ್ ಮೂಲಕ ನೀರು ತೆಗೆದುಕೊಂಡಿದ್ದೇವೆ.ಒಮ್ಮೆ ವಾಹನ ಪೂರ್ಣ ತುಂಬಲು 5000ಲೀ ನೀರಿನ ಅವಶ್ಯಕತೆ ಇದೆ ಎನ್ನುತ್ತಾರೆ ಅಗ್ನಿ ಶಾಮಕ ಠಾಣಾಧಿಕಾರಿಯವರು.


ಸಣ್ಣ ವಾಹನದ ಮುಖ್ಯ ಬೇಡಿಕೆ:
ಠಾಣೆಯಲ್ಲಿ ಒಂದೇ ವಾಹನವಿದೆ.ಬೆಂಕಿ ಅನಾಹುತ ಸಂಭವಿಸಿದಾಗ ಎಲ್ಲಾ ಕಡೆ ದೊಡ್ಡ ವಾಹನವನ್ನೇ ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ.ಪ್ರಾಣಿ, ಮನುಷ್ಯರ ಜೀವ ರಕ್ಷಣೆಯ ಸಂದರ್ಭದಲ್ಲಿ ದೊಡ್ಡ ವಾಹನದ ಅವಶ್ಯಕತೆ ಇರುವುದಿಲ್ಲ.ಕೆಲವು ಸ್ಥಳಗಳಿಗೆ ಅಗ್ನಿ ಶಮನ ಸೌಲಭ್ಯ ಹೊಂದಿರುವ ದೊಡ್ಡ ವಾಹನ ಹೋಗಲು ಸಮಸ್ಯೆಯುಂಟಾಗುತ್ತದೆ.ಸ್ಥಳದ ಅಭಾವವಿರುವಲ್ಲಿಗೆ ಹೋಗಲು ಸಣ್ಣ ವಾಹನದ ಅಗತ್ಯತೆ ಇದೆ.ಅಲ್ಲದೆ ಕೆರೆ, ಬಾವಿಗೆ ಪ್ರಾಣಿಗಳು ಬಿದ್ದ ಸಂದರ್ಭದಲ್ಲಿ ಅವುಗಳ ರಕ್ಷಣೆ ವೇಳೆ ಸಣ್ಣ ವಾಹನವೇ ಬೇಕಾಗಿರುತ್ತದೆ.ಮಳೆಗಾಲದಲ್ಲಿ ಅಗ್ನಿ ಅವಘಡಗಳು ಇರುವುದಿಲ್ಲ.ಪ್ರವಾಹ ಸಂದರ್ಭದಲ್ಲಿ ಬೋಟ್‌ನಲ್ಲಿ ಸಾಗಬೇಕಾಗುತ್ತದೆ.ಬೋಟ್ ಕೊಂಡೊಯ್ಯಲು ಕೂಡ ದೊಡ್ಡ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಬೋಟ್ ಸಾಗಿಸಲಾದರೂ ಸಣ್ಣ ವಾಹನ ಅವಶ್ಯಕವಾಗಿ ಬೇಕಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ವಿಟ್ಲ, ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ, ಶಿರಾಡಿಯವರೆಗೂ ಇದೇ ವಾಹನ: ಪುತ್ತೂರು ತಾಲೂಕು ವ್ಯಾಪ್ತಿ ಅಲ್ಲದೆ ಪಕ್ಕದ ತಾಲೂಕು ವ್ಯಾಪ್ತಿಯಲ್ಲಿಗೂ ಇಲ್ಲಿನ ವಾಹನವನ್ನೇ ಆಶ್ರಯಿಸಬೇಕಾಗಿದೆ.ಒಂದು ದಿನದಲ್ಲಿ ಸುಮಾರು 50 ಕಿ.ಮೀ.ವರೆಗೂ ಸಾಗಬೇಕಾದ ಪರಿಸ್ಥಿತಿ ಇದೆ.ವಿಟ್ಲ, ಕನ್ಯಾನ, ನೆಲ್ಯಾಡಿ, ಬೆಳ್ತಂಗಡಿ, ಕಡಬ ತಾಲೂಕು ಅಲ್ಲದೆ ಸುಬ್ರಹ್ಮಣ್ಯ, ಗುಂಡ್ಯ, ಶಿರಾಡಿ ಗಡಿಯವರೆಗೆ ಪುತ್ತೂರು ಠಾಣೆಯ ವಾಹನವೇ ಸಾಗಬೇಕಾಗಿದೆ.ಇಷ್ಟು ದೂರ ಸಾಗಿ ಬೆಂಕಿ ಶಮನ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿಗಳು ಸುಸ್ತಾಗಿ ಹೋಗುತ್ತಾರೆ.ಕೆಲವು ಸಂದರ್ಭದಲ್ಲಿ ಮಧ್ಯಾಹ್ನದ ಊಟವನ್ನು ಬಿಟ್ಟು ಕರ್ತವ್ಯ ನಿಭಾಯಿಸುವ ಅನಿವಾರ್ಯತೆಯಲ್ಲಿರುತ್ತಾರೆ.


ಎಫ್ ಸಿ ಇಲ್ಲದ ಒಂದು ವಾಹನ:
ಠಾಣೆಯಲ್ಲಿ ಎರಡು ವಾಹನವಿದ್ದರೂ ಒಂದು ವಾಹನದ ಎಫ್ ಸಿ ಮುಗಿದಿದೆ.ಆದ ಕಾರಣ ದೊಡ್ಡ ವಾಹನವೊಂದೇ ಎಲ್ಲಾ ಕಡೆ ಹೋಗಬೇಕಾಗಿದೆ.ಉತ್ತಮ ಕಂಡೀಷನ್ ಹೊಂದಿರುವ ಇನ್ನೊಂದು ವಾಹನದ ಫಿಟ್‌ನೆಸ್ ಸರ್ಟಿಫಿಕೇಟ್ ಮುಗಿದು ಒಂದು ವರ್ಷವೇ ಕಳೆದಿದೆ.

ಜನವರಿಯಿಂದ ಇಲ್ಲಿಯವರೆಗೆ 113 ಬೆಂಕಿ ಅವಘಡ
ಈ ಬಾರಿ ಜನವರಿಯಿಂದ ಮಾರ್ಚ್ 17ರವರೆಗೆ 113 ಬೆಂಕಿ ಅವಘಡ ಪ್ರಕರಣಗಳು ಪುತ್ತೂರು ಅಗ್ನಿ ಶಾಮಕ ಠಾಣೆಯಲ್ಲಿ ದಾಖಲಾಗಿದೆ.ಒಂದು ವರ್ಷದಲ್ಲಿ ಸಂಭವಿಸುವ ಅವಘಡಗಳು ಈ ಬಾರಿ ಮೂರು ತಿಂಗಳೊಳಗೇ ದಾಖಲಾಗಿದ್ದು ಅತೀ ಹೆಚ್ಚಿನ ಪ್ರಕರಣ ಇದಾಗಿದೆ.

ದ.ಕ.ಜಿಲ್ಲೆಯಲ್ಲೇ ಅತೀ ಹೆಚ್ಚು ಅಗ್ನಿ ಅವಘಡ ಸಂಭವಿಸುವ ತಾಲೂಕು ಪುತ್ತೂರು.ನಮ್ಮ ಠಾಣೆಯಲ್ಲಿ 17 ಮಂದಿ ಸಿಬ್ಬಂದಿ ಇದ್ದೇವೆ.ಅಗ್ನಿ ಶಮನಕ್ಕೆ ನಮಗೆ ನೀರಿನದ್ದೇ ಸಮಸ್ಯೆ ಆಗುತ್ತಿದೆ. ಅನೇಕ ಬಾರಿ ಖಾಸಗಿಯವರಿಂದ ನೀರು ಪಡೆದುಕೊಂಡಿದ್ದೇವೆ.ನೀರಿನ ತೊಂದರೆ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ.ಅಲ್ಲದೆ ಸಣ್ಣ ವಾಹನದ ಬೇಡಿಕೆಯೂ ಇದೆ.ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ಮಾಡುತ್ತಾರೆ.ಊಟ, ತಿಂಡಿ ಬಿಟ್ಟು ಅಗ್ನಿ ಶಮನ, ಜೀವ ರಕ್ಷಣೆ ಕಾರ್ಯ ಮಾಡುತ್ತಾರೆ.ಕೆಲವೊಂದು ದಿನ 13 ಅಗ್ನಿ ಅವಘಡ ಪ್ರಕರಣಗಳು ನಡೆದದ್ದೂ ಇದೆ.ಬೆಂಕಿ ಅವಘಡವಾಗದಂತೆ, ಸಾರ್ವಜನಿಕರು ವಿದ್ಯುತ್ ಪರಿವರ್ತಕದ ಸುತ್ತಮುತ್ತಲ ಸ್ಥಳವನ್ನು ಬೆಂಕಿ ಬೀಳದ ಹಾಗೆ ಕಾಪಾಡಿಕೊಳ್ಳಬೇಕು
ಶಂಕರ್, ಠಾಣಾಧಿಕಾರಿ, ಅಗ್ನಿ ಶಾಮಕ ಠಾಣೆ ಪುತ್ತೂರು

ಬೆಳ್ತಂಗಡಿಗೂ ಹೋಗಬೇಕಾದ ಅನಿವಾರ್ಯತೆ
ಪುತ್ತೂರು ತಾಲೂಕು ಮೀರಿ ಬೆಳ್ತಂಗಡಿ ತಾಲೂಕಿನ ಕೆಲವು ಕಡೆ ಪುತ್ತೂರಿನ ವಾಹನವೇ ಹೋಗಬೇಕಾಗಿದೆ.ಬೆಳ್ತಂಗಡಿ ಅಗ್ನಿ ಶಾಮಕ ಠಾಣೆಯ ವಾಹನದ ಫಿಟ್‌ನೆಸ್ ಸರ್ಟಿಫಿಕೇಟ್ ಇತ್ತೀಚೆಗೆ ಮುಗಿದ ಕಾರಣ ಅಲ್ಲಿಗೂ ಇಲ್ಲಿನ ವಾಹನದ ಅನಿವಾರ್ಯತೆ ಇದೆ.ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆಯವರೆಗೆ ಪುತ್ತೂರಿನಿಂದಲೇ ಅಗ್ನಿ ಶಾಮಕ ವಾಹನ ಹೋಗಬೇಕಾದ ಪರಿಸ್ಥಿತಿಯಿದೆ.

LEAVE A REPLY

Please enter your comment!
Please enter your name here