ಪುತ್ತೂರು: ಭಾರತೀಯ ಭೂಸೇನೆಯಲ್ಲಿ ಸುದೀರ್ಘ 32 ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದ ಸುಬೇದಾರ್ ಮೇಜರ್ ವಿಶ್ವನಾಥ್ರವರು ಮಾ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.
ಮೂಲತಹ ಮಡಿಕೇರಿ ನಿವಾಸಿಯಾದ ಇವರು 1994ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಸೇನೆಯಲ್ಲಿ ಕರ್ತವ್ಯಕ್ಕೆ ಸೇರಿದ್ದರು. 1996ರಿಂದ1999ರವರೆಗೆ ಪಂಜಾಬ್, 2000ದಿಂದ 2002ರವರೆಗೆ ಸಿಯಾಚಿನ್, 2002ರಿಂದ 2004ರವರೆಗೆ ಮದರಾಸು ರೆಜಿಮೆಂಟ್ ಟ್ರೈನಿಂಗ್ ಸೆಂಟರ್, 2004ರಿಂದ 2007ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ನಲ್ಲಿ, 2007ರಿಂದ 2010ರವೆಗೆ ರಾಜಸ್ಥಾನ, 2010ರಿಂದ 2014ರವರೆಗೆ ಅಸ್ಸಾಂ, 2014ರಿಂದ 2018ರವರೆಗೆ ಎನ್ಎಸ್ಜಿ ಟ್ರೈನಿಂಗ್ ಸೆಂಟರ್(ಬ್ಲ್ಯಾಕ್ ಕಮಾಂಡೋ), 2018ರಿಂದ 2021ರವರೆಗೆ ಕಾಶ್ಮೀರ(ಉರಿ ಸೆಕ್ಟರ್), 2021ರಿಂದ 2023ರವರೆಗೆ ನಾಗಾಲ್ಯಾಂಡ್ ಬಳಿಕ 2023ರಿಂದ 2025ರವೆಗೆ ಎನ್ಸಿಸಿ ಡಿಂಡಿಗಲ್(ತಮಿಳುನಾಡು)ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಲಿದ್ದಾರೆ. 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಹೋರಾಡಿದ್ದರು. 2014ರಲ್ಲಿ 20 ದಿನಗಳ ಇಂಡೋನೇಶಿಯಾ ಕ್ಯಾಂಪ್ನಲ್ಲಿ ಭಾಗವಹಿಸಿರುತ್ತಾರೆ. ಸುದೀರ್ಘ 30 ವರ್ಷಗಳ ಸೇವಾ ಪುರಸ್ಕೃತ ಮೆಡಲ್ಗಳ ಜೊತೆಗೆ ಸುಮಾರು ಹತ್ತಕ್ಕೂ ಮಿಕ್ಕಿ ಮೆಡಲ್ಗಳನ್ನು ಪಡೆದಿರುತ್ತಾರೆ.
ಪ್ರಸ್ತುತ ಕೆಮ್ಮಿಂಜೆ ಗ್ರಾಮದ ನೈತ್ತಾಡಿ ನಿವಾಸಿ ದಿ.ಅಣ್ಣು ಪೂಜಾರಿ ಮತ್ತು ಸುಂದರಿ ಪೂಜಾರಿಯವರ ಪುತ್ರರಾದ ಇವರು ಪತ್ನಿ ಮನೋರಮಾ, ಪುತ್ರಿ ಅಂಬಿಕಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನ್ವಿತಾ ಬಿ.ವಿ. ಮತ್ತು ಪುತ್ರ ಸುದಾನ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ವಿಸ್ಮಯ್ ಬಿ.ವಿ.ರವರೊಂದಿಗೆ ವಾಸವಾಗಿದ್ದಾರೆ.