*ಭಕ್ತಿಯಿಂದ ಸಲ್ಲಿಸಿದ ಪೂಜೆ ಭಗವಂತನಿಗೆ ತಲುಪುತ್ತದೆ – ವಿ ಶಶಾಂಕ್ ಭಟ್
*ದೇವಾಲಯಗಳಲ್ಲಿ ಭಕ್ತಿ ಪ್ರದಾನ ಕಾರ್ಯಕ್ರಮ ನಿರಂತರ- ಈಶ್ವರ ಭಟ್ ಪಂಜಿಗುಡ್ಡೆ
*ಭಕ್ತಿಯ ಮೂಲಕ ದೇಶಪ್ರೇಮ – ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಉಡುಪಿ ಪೇಜಾವರ ಅಧೋಕ್ಷಜ ಮಠ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ- ರಾಮೋತ್ಸವದ ಪ್ರಯುಕ್ತ ಎ.2ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಿ ರಥಯಾತ್ರೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಸ್ವಾಗತಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರು ಹಾಗೂ ವಿಹಿಂಪ ಪ್ರಮುಖರು ಭಕ್ತಿ ರಥಯಾತ್ರೆಯನ್ನು ಸ್ವಾಗತಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಭಕ್ತಿ ರಥಕ್ಕೆ ಪೂಜೆ ಸಲ್ಲಿಸಿದರು.

ಭಕ್ತಿಯಿಂದ ಸಲ್ಲಿಸಿದ ಪೂಜೆ ಭಗವಂತನಿಗೆ ತಲುಪುತ್ತದೆ:
ಪೇಜಾವರ ಶ್ರೀಗಳ ಸಹೋದರರಾಗಿರುವ ಭಕ್ತಿ ರಥಯಾತ್ರೆಯ ಸಂಚಲನಾ ಸಮಿತಿ ಸದಸ್ಯ ವಿ ಶಶಾಂಕ ಭಟ್ ಅವರು ಧಾರ್ಮಿಕ ಪ್ರವಚನ ನೀಡಿದರು. ‘ಬದುಕಿನ ನೆಮ್ಮದಿಗೆ ಭಗವಂತನ ಅನುಗ್ರಹವೂ ಮುಖ್ಯ. ಭಗವಂತನ ಅನುಗ್ರಹಕ್ಕೆ ಭಕ್ತಿಯೇ ಏಕೈಕ ಮಾರ್ಗ. ಭಕ್ತಿಯಿಂದ ಸಲ್ಲಿಸುವ ಪೂಜೆ ಭಗವಂತನಿಗೆ ತಲುಪುತ್ತದೆ’ ಹಾಗಾಗಿ ಭಕ್ತಿ ರಥಯಾತ್ರೆಯು ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಲಿದೆ ಎಂದ ಅವರು ರಥಯಾತ್ರೆಯು ಎ.9ಕ್ಕೆ ಉಡುಪಿಗೆ ಬಂದು ಅನಂತೇಶ್ವರಗಳನ್ನೊಳಗೊಂಡ ರಥಬೀದಿಗೆ ಪ್ರದಕ್ಷಿಣೆ ಬಂದು ಮರಳಿ ಪಾಜಕದಲ್ಲಿ ಕೊನೆಗೊಳ್ಳಲಿದೆ. ಬಳಿಕ ಪೆರ್ಣಂಕಿಲಕ್ಕೆ ತೆರಳಿ ಅಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವದಲ್ಲಿ ಭಗವಂತನಿಗೆ ಸಮರ್ಪಣೆಯಾಗಲಿದೆ ಎಂದು ಹೇಳಿದರು.

ದೇವಾಲಯಗಳಲ್ಲಿ ಭಕ್ತಿ ಪ್ರದಾನ ಕಾರ್ಯಕ್ರಮ ನಿರಂತರ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ದೇವಾಲಯಗಳಲ್ಲಿ ಭಕ್ತಿ ಪ್ರದಾನ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಆ ಮೂಲಕ ಧರ್ಮದ ಜಾಗೃತಿಯಾಗಬೇಕು. ಇವತ್ತು ಗೋವಿನ ಮಹತ್ವ ಎಲ್ಲರಿಗೂ ತುಲುಪುವಂತೆ ಪೇಜಾವರ ಶ್ರೀಗಳ ಕಾರ್ಯ ಬಹಳ ಅದ್ಭುತವಾಗಿದೆ. ಉಡುಪಿಯ ನೀಲಾವರ ಗೋ ಶಾಲೆಯಂತೆ ಪುತ್ತೂರಿನಲ್ಲೂ ಗೋ ಶಾಲೆಯ ಸ್ವರೂಪದ ಚಿಂತನೆಯಿದೆ. ಮಾನವರಿಗೆ ಹೆತ್ತ ತಾಯಿ ಬೇರೆ ಬೇರೆಯಾದರೂ ಗೋಮಾತೆ ಸರ್ವರ ಮಾತೆ ಎಂದ ಅವರು ಧರ್ಮ ಕಾರ್ಯಕ್ರಮಕ್ಕೆ ದೇವಳದ ನಿಂತರ ಸಹಕಾರ ನೀಡುತ್ತದೆ ಎಂದರು.

ಭಕ್ತಿಯ ಮೂಲಕ ದೇಶಪ್ರೇಮ:
ಹಿಂದು ಸಂಘಟನೆಗಳ ಪ್ರಮುಖರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಭಕ್ತಿಯ ಮೂಲಕ ಸಮಾಜ ಒಗ್ಗಟ್ಟಾಗಬೇಕು. ದೇಶ ಪ್ರೇಮ ಬೆಳೆಯಬೇಕೆಂದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೇಡೆಕರ್, ದಿನೇಶ್ ಪಿ.ವಿ, ವಿನಯ ಸುವರ್ಣ, ಮಾಜಿ ಅಧ್ಯಕ್ಷ ಕೇಶವಪ್ರಸಧ್ ಮುಳಿಯ, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ, ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಯು ಲೋಕೇಶ್ ಹೆಗ್ಡೆ, ಶ್ರೀಕಾಂತ್ ಹಿಂದಾರು, ಅಶೋಕ್ ಪುತ್ತಿಲ, ರಾಜೇಶ್ ಬನ್ನೂರು, ಪಿ.ಜಿ.ಚಂದ್ರಶೇಖರ್ ರಾವ್, ಪ್ರೇಮಲತಾ ರಾವ್, ಭಾಸ್ಕರ್ ಬಾರ್ಯ, ರಾಮದಾಸ್ ಹಾರಾಡಿ, ಸತೀಶ್ ಬಿ.ಎಸ್, ತುಳಸಿ ಕ್ಯಾಟರಿಂಗ್ನ ಹರೀಶ್ ರಾವ್, ಅನಿಲ್ ತೆಂಕಿಲ, ರೂಪೇಶ್ ಮತ್ತಿತರರು ಉಪಸ್ಥಿತರಿದ್ದರು. ಭಕ್ತಿ ರಥ ಸಂಚಲನಾ ಸಮಿತಿ ಸದಸ್ಯ ನಂದಳಿಕ ವಿಠಲ ಆಚಾರ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
