ಧಾರ್ಮಿಕ ಕೇಂದ್ರಗಳ ಭೂಮಿ ಸಕ್ರಮಗೊಳಿಸದೇ ವಿರಮಿಸೆನು: ಅಶೋಕ್ ರೈ

0

ಉಪ್ಪಿನಂಗಡಿ: ಬಹುತೇಕ ಹಿಂದೂ ಧಾರ್ಮಿಕ ಕೇಂದ್ರಗಳ ಭೂ ದಾಖಲೆಗಳು ಸರಕಾರಿ ಒಡೆತನವನ್ನೇ ಹೊಂದಿದ್ದು, ಎಲ್ಲಾ ಧಾರ್ಮಿಕ ಕೇಂದ್ರಗಳ ಭೂಮಿಯನ್ನು ಸಕ್ರಮಗೊಳಿಸದೆ ವಿರಮಿಸೆನು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಧಾರ್ಮಿಕ ಪರಿಷತ್ತಿನ ಎಲ್ಲಾ ಸದಸ್ಯರಲ್ಲಿ, ಮಂತ್ರಿಗಳಲ್ಲಿ, ಸಂಸದರಲ್ಲಿ, ಶಾಸಕರಲ್ಲಿ ಧಾರ್ಮಿಕ ಸಂಸ್ಥೆಗಳ ಭೂಮಿಯನ್ನು ಅದರದ್ದೆ ಹೆಸರಿಗೆ ಮಾಡಿಸುವ ಬಗ್ಗೆ ಸರಕಾರದಿಂದ ಆಡಳಿತಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತಾ ಬಂದಿದ್ದೆ. ಅಂದಿನ ಎಲ್ಲಾ ನಾಯಕರಿಗೆ ಹಿಂದುತ್ವದ ಹೆಸರಿನಲ್ಲಿ ಮತಗಳು ಬೇಕಿತ್ತೇ ವಿನಹ ಹಿಂದೂಗಳ ಬೇಡಿಕೆಗೆ ಸ್ಪಂದಿಸುವ ಇಚ್ಚಾ ಶಕ್ತಿ ಇರಲಿಲ್ಲ. ಈ ಕಾರಣಕ್ಕಾಗಿ ಸರಕಾರ ತಮ್ಮದಿದ್ದರೂ ಹಿಂದೂ ಶ್ರದ್ಧಾ ಕೇಂದ್ರಗಳಾದ ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳ ಭೂಮಿಯನ್ನು ಆಯಾಯಾ ಧರ್ಮ ಕೇಂದ್ರಗಳ ಹೆಸರಿಗೆ ಮಂಜೂರುಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪರಿಣಾಮವಾಗಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸರಕಾರ ಆರ್ಥಿಕ ಸಹಕಾರ ನೀಡಿದರೂ, ಅದನ್ನು ಪಡೆಯಬೇಕಾದರೆ, ಭೂ ದಾಖಲೆಗಳೇ ಇಲ್ಲದೇ ಇರುವುದರಿಂದ ಸರಕಾರದ ಅನುದಾನ ದೊರಕದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಕಾರಣಕ್ಕೆ ಸದನದೊಳಗೆ ಈಗಾಗಲೇ ಪ್ರಸ್ತಾಪಿಸಿದ್ದು, ರಾಜ್ಯದ ಎಲ್ಲಾ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ದೇವಾಲಯ, ಮಸೀದಿ, ಚರ್ಚ್, ಭಜನಾ ಮಂದಿರ, ದೈವಸ್ಥಾನ, ಕಟ್ಟೆಗಳನೆಲ್ಲಾ ಆಯಾಯಾ ಧಾರ್ಮಿಕ ಕೇಂದ್ರಗಳ ಹೆಸರಿಗೆ ಭೂಮಿಯನ್ನು ಮಂಜೂರುಗೊಳಿಸುವಂತೆ ಒತ್ತಾಯಿಸಲಾಗಿದೆ. ನನ್ನ ಶಾಸಕತ್ವದ ಅವಧಿ ಪೂರ್ಣಗೊಳಿಸುವ ಮುನ್ನಾ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಈ ಮೂಲಕ ಹಿಂದುತ್ವದ ಕಾರ್ಯ ಏನೆಂಬುವುದನ್ನು ಕೆಲಸದ ಮೂಲಕ ಮಾಡಿ ತೋರಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ಪ್ರಮುಖರಾದ ಕರುಣಾಕರ ಸುವರ್ಣ, ಈಶ್ವರ ಭಟ್ ಪಂಜಿಗುಡ್ಡೆ, ಡಾ. ರಾಜಾರಾಮ್ ಕೆ.ಬಿ. , ರವೀಂದ್ರ ಪಟಾರ್ತಿ, ಜಗದೀಶ ಶೆಟ್ಟಿ ನಡುಮನೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here