ಅಂಬಿಕಾ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾದಿನದ ಉದ್ಘಾಟನಾ ಸಮಾರಂಭ

0

ಕ್ರೀಡೆಯನ್ನು ಕೇವಲ ಮೋಜು ಎಂದು ಪರಿಗಣಿಸಬಾರದು : ಸುಬ್ರಮಣ್ಯ ನಟ್ಟೋಜ

ಪುತ್ತೂರು: ಕ್ರೀಡೆಯನ್ನು ಕೇವಲ ಮೋಜು ಎಂಬಂತೆ ಸ್ವೀಕರಿಸದೆ ನಮ್ಮ ದೇಹದಾಢ್ಯತೆಯನ್ನು ಸಮೃದ್ಧಗೊಳಿಸುವ ವ್ಯವಸ್ಥೆಯಾಗಿ ಗುರುತಿಸಬೇಕು. ಯುವ ಸಮೂಹ ಆರೋಗ್ಯವಂತರಾಗಿ ಮೂಡಿಬರುವಲ್ಲಿ ಕ್ರೀಡೆ ಮಹತ್ವ ಪಡೆಯುತ್ತದೆ. ನಮ್ಮ ದೇಹಾರೋಗ್ಯ ದೇಶಕ್ಕೆ ಉಪಯೋಗ ಆಗುವ ನೆಲೆಯಲ್ಲಿ ವಿನಿಯೋಗಗೊಳ್ಳಬೇಕು. ದೇಶಕ್ಕಾಗಿ ನಾವು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಒಡಮೂಡಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವತಿಯಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಆವರಣದ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕ ಕ್ರೀಡಾದಿನವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಯುವಶಕ್ತಿ ದೇಶದ ಬಗೆಗೆ ಆಲೋಚನೆ ನಡೆಸಬೇಕು. ನಮ್ಮ ಬದುಕನ್ನು ದೇಶಕ್ಕಾಗಿ ಮುಡಿಪಿಡುವ ನೆಲೆಯಲ್ಲಿ ಕಾರ್ಯತತ್ಪರರಾಗಬೇಕು. ವಿವಿಧ ದೈಹಿಕ ಕಸರತ್ತುಗಳ ಮೂಲಕ ನಮ್ಮನ್ನು ನಾವು ಆರೋಗ್ಯಪೂರ್ಣರಾಗಿ ಇಟ್ಟುಕೊಂಡಾಗಲಷ್ಟೇ ದೇಶಕ್ಕೆ ನಮ್ಮಿಂದ ಕೊಡುಗೆ ಕೊಡುವುದಕ್ಕೆ ಸಾಧ್ಯ. ಆದ್ದರಿಂದ ಕ್ರೀಡಾದಿನವನ್ನು ಕೇವಲ ಒಂದು ಮನರಂಜನೆಯ ದಿನವಾಗಿ ಕಾಣದೆ ನಮ್ಮನ್ನು ನಾವು ಸಮರ್ಥರನ್ನಾಗಿಸುವ ಅವಕಾಶವಾಗಿ ಕಾಣಬೇಕು ಎಂದು ಕರೆಕೊಟ್ಟರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ., ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಕ್ಷಿತ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿ, ವಿದ್ಯಾಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಸ್ವಾಗತಿಸಿದರು. ವಿದ್ಯಾಥಿನಿ ಅಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ತೃಪ್ತಿ ಎಂ. ಮಯ್ಯಾಳ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here