ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಹೊರಗಿನ ಕೊಳ್ತಿಗೆ ನಿವಾಸಿಯಾಗಿರುವ ಅಮಳ ರಾಮಚಂದ್ರ ಅವರನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಳಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ, ನೇಮಕಾತಿ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನಗರ ಯೋಜನಾ ಪ್ರಾಧಿಕಾರ ಮತ್ತು ಪ್ರಾಧಿಕಾರದ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೆ ನಿರ್ದೇಶಿಸಿರುವ ಹೈಕೋರ್ಟ್ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿದೆ.
ಅಮಳ ರಾಮಚಂದ್ರ ಅವರನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಳಿಸಿ ಸರಕಾರ ಇದೇ ಮಾ.13ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ ಅಮಳ ರಾಮಚಂದ್ರ ಅವರ ನೇಮಕಕ್ಕೆ ಸಂಬಂಧಿಸಿ ಅಗತ್ಯ ಮಾನದಂಡಗಳನ್ನೇ ಅನುಸರಿಸದೆ ನಿಯಮ ಬಾಹಿರವಾಗಿ ನೇಮಕಗೊಳಿಸಲಾಗಿದೆ. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಬೇಕಾದವರು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಸಾಮಾನ್ಯವಾಗಿ ವಾಸಿಸುವವರಾಗಿರಬೇಕು ಎಂಬುದು ಪ್ರಮುಖ ನಿಯಮ. ಆದರೆ ಅಮಳ ರಾಮಚಂದ್ರ ಅವರು ಹುಟ್ಟಿನಿಂದಲೇ ಅವರು ಕೊಳ್ತಿಗೆ ಗ್ರಾಮದ ಅಮಳ ನಿವಾಸಿ. ಪ್ರಗತಿಪರ ಕೃಷಿಕರೂ ಆಗಿರುವ ಅವರು ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಅಲ್ಲಿಂದ ಕೃಷಿ ಸಾಲವನ್ನೂ ಪಡೆದುಕೊಂಡಿದ್ದಾರೆ. ಅವರು ಕೊಳ್ತಿಗೆ ಗ್ರಾಮದ ಮತದಾರರೂ ಆಗಿದ್ದಾರೆ. ಈ ಮಧ್ಯೆ ಅವರು,ತಾನು ಪುತ್ತೂರು ನಗರ ನಿವಾಸಿ ಎಂದು ಬಿಂಬಿಸಲು ಬಾಡಿಗೆ ಚೀಟಿಯ ಆಧಾರದಲ್ಲಿ ತನ್ನ ವಾಸದ ವಿಳಾಸವನ್ನು ಆಧಾರ ಕಾರ್ಡ್ನಲ್ಲಿ ಬದಲಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ,ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರ ನೇಮಕ ನಿಯಮ ಬಾಹಿರವಾಗಿರುವುದರಿಂದ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಬೇಕು, ಸದ್ಯ ನೇಮಕಾತಿ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ರಾಜೇಶ್ ಬನ್ನೂರು ಅವರು ವಕೀಲ ಪ್ರತೀಪ್ ಕೆ.ಸಿ.ಅವರ ಮೂಲಕ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಏ.7ಕ್ಕೆ ರಿಟ್ ಅರ್ಜಿಯನ್ನು ನೋಂದಾಯಿಸಲಾಗಿದೆ.ಕರ್ನಾಟಕ ಸರಕಾರ(ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ,ಬೆಂಗಳೂರು),ದ.ಕ.ಜಿಲ್ಲಾಧಿಕಾರಿ,ಹೆಚ್ಚುವರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ,ಬೆಂಗಳೂರು, ನೆಲ್ಲಿಕಟ್ಟೆ ಎಪಿಎಂಸಿ ರಸ್ತೆ ನಂ.3-21/ಸಿ.ನಿವಾಸಿಯಾಗಿರುವ ಕೆ.ರಾಮಚಂದ್ರ ಮತ್ತು ಪುತ್ತೂರು ನಗರ ಯೋಜನಾ ಪ್ರಾಧಿಕಾರ ಸಿಎಂಸಿ ಬಿಲ್ಡಿಂಗ್, ಪುತ್ತೂರು ಇವರನ್ನು ರಿಟ್ ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಕಾಣಿಸಲಾಗಿದೆ. ಪುತ್ತೂರು ನಗರ ಯೋಜನಾ ಪ್ರಾಧಿಕಾರವನ್ನು ಹೆಚ್ಚುವರಿ ಪ್ರತಿವಾದಿಯನ್ನಾಗಿಸಲು ಅರ್ಜಿದಾರ ರಾಜೇಶ್ ಬನ್ನೂರು ಅವರ ಕೋರಿಕೆಯಂತೆ ಹೈಕೋರ್ಟ್ ಅನುಮತಿ ನೀಡಿದ ಬಳಿಕ,ಪ್ರತಿವಾದಿಯಾಗಿಸಲಾಗಿದೆ.
ತುರ್ತು ನೋಟೀಸ್: ರಿಟ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್.ಸುನಿಲ್ ದತ್ತ್ ಅವರು, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ನಗರ ಯೋಜನಾ ಪ್ರಾಽಕಾರಕ್ಕೆ ತುರ್ತು ನೋಟೀಸ್ ಮಾಡಲು ನಿರ್ದೇಶನ ನೀಡಿ ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಿದೆ.
ಅಮಳ ರಾಮಚಂದ್ರ ನೇಮಕ: ಪ್ರಸ್ತುತ ನಂ.3-21/ಸಿ.ನೆಲ್ಲಿಕಟ್ಟೆ,ಎಪಿಎಂಸಿ ರಸ್ತೆ ನಿವಾಸಿಯಾಗಿರುವ ಅಮಳ ರಾಮಚಂದ್ರ ಅವರನ್ನು, ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)ರ ಉಪಕಲಂ 3(1)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಳಿಸಿ ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಽನ ಕಾರ್ಯದರ್ಶಿ(ಅಭಿವೃದ್ಧಿ,ಪ್ರಾಽಕಾರ ಮತ್ತು ನಗರ ಯೋಜನಾ(ಸೇ)ಲತಾ ಕೆ.ಅವರು ಮಾ.13ರಂದು ಅಧಿಸೂಚನೆ ಹೊರಡಿಸಿದ್ದರು.
ಕಳೆದ ವರ್ಷದಿಂದಲೇ ಪುತ್ತೂರಿನಲ್ಲಿ ವಾಸ್ತವ್ಯ
ಪುಡಾ ಅಧ್ಯಕ್ಷ ಸ್ಥಾನ ಬೇಕೆಂದು ನಾನು ಅದರ ಹಿಂದೆ ಬೀಳುವುದಿಲ್ಲ. ಇರುವಷ್ಟು ಸಮಯ ಉತ್ತಮ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಮಗನ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿ ಕಳೆದ ವರ್ಷದಿಂದಲೇ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದೇನೆ. ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಸಲ್ಲಿಕೆಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ನನಗೆ ಕೋರ್ಟ್ನಿಂದ ಯಾವುದೇ ನೋಟಿಸ್ ಬಂದಿಲ್ಲ
-ಅಮಳ ರಾಮಚಂದ್ರ, ಅಧ್ಯಕ್ಷರು,
ಪುತ್ತೂರು ನಗರ ಯೋಜನಾ ಪ್ರಾಧಿಕಾರ