ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ಮಹಿಳಾ ಠಾಣೆ

0

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆ ಕಟ್ಟಡವು ಸ್ಥಳಾಂತರವಾಗಲಿದ್ದು ಪುತ್ತೂರು ಬಸ್ ನಿಲ್ದಾಣದ ಬಳಿ ಹೊಸ ಠಾಣೆ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಮಂಜೂರು ಮಾಡಿದೆ ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಹೊಂದುತ್ತಿದ್ದು ಅಲ್ಲಿದ್ದ ಅನಧಿಕೃತ ಮನೆಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಸದ್ಯ ಅಲ್ಲಿ ಮಹಿಳಾ ಪೊಲೀಸ್ ಠಾಣೆ ಕಟ್ಟಡವಿದ್ದು ಅದನ್ನು ತೆರವು ಮಾಡುವುದು ಅಥವಾ ಬೇರೆಡೆ ಸ್ಥಳಾಂತರ ಮಾಡಿಸುವುದಾಗಿ ಈ ಹಿಂದೆ ಶಾಸಕರು ತಿಳಿಸಿದ್ದರು. ಈ ಕಟ್ಟಡ ತೆರವುಗೊಂಡಲ್ಲಿ ದೇವಸ್ಥಾನ ಸುಂದರವಾಗಿ ರೂಪುಗೊಂಡಂತಾಗುತ್ತದೆ. ಹೊಸ ಮಹಿಳಾ ಠಾಣೆಗೆ ಬಸ್ ನಿಲ್ದಾಣದ ಬಳಿ ಸ. ನಂ.,124/5ಪಿ2 ರಲ್ಲಿ 8 ಸೆಂಟ್ಸ್ ಜಾಗವನ್ನು ಶಾಸಕರ ಮನವಿ ಮೇರೆಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಶಾಸಕರ ಸತತ ಪ್ರಯತ್ನಕ್ಕೆ ಸಿಕ್ಕಿದ ಫಲ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿದ್ದ ಮನೆಗಳನ್ನು ತೆರವುಗೊಳಿಸಿದ ಬಳಿಕ ದೇವಳಕ್ಕೆ ಅಡ್ಡವಾಗಿದ್ದ ಮಹಿಳಾ ಪೊಲೀಸ್ ಠಾಣಾ ಕಟ್ಟಡವನ್ನು ತೆರವು ಮಾಡಬೇಕಿದೆ ಎಂದು ಅನೇಕ ಭಕ್ತಾದಿಗಳು ಶಾಸಕರಲ್ಲಿ ಮೌಖಿಕ ಮನವಿಯನ್ನು ಮಾಡಿಕೊಂಡಿದ್ದರು. ಈ ಕಟ್ಟಡ ತೆರವು ಮಾಡಿದ್ದೇ ಆದಲ್ಲಿ ದೇವಸ್ಥಾನಕ್ಕೆ ಇನ್ನಷ್ಟು ಜಾಗ ಲಭ್ಯವಾಗಲಿದ್ದು ಮಾತ್ರವಲ್ಲದೆ ದೇವಸ್ಥಾನ ಹಾಗೂ ದೇವಳದ ಪವಿತ್ರ ಕೆರೆಯೂ ಅತಿ ಸುಂದರವಾಗಿ ಕಾಣಿಸಲಿದೆ. ಠಾಣಾ ಕಟ್ಟಡವನ್ನು ತೆರವು ಮಾಡಬೇಕಾದಲ್ಲಿ ಹೊಸ ಠಾಣೆಯನ್ನು ನಿರ್ಮಾಣ ಮಾಡಬೇಕಿತ್ತು. ತಾನೇ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಜಾಗ ಹುಡುಕಿದ ಶಾಸಕರು ಬಸ್ ನಿಲ್ದಾಣದ ಬಳಿಕ 8 ಸೆಂಟ್ಸ್ ಜಾಗವನ್ನು ಪಡೆಯುವಲ್ಲಿ ಸಫಲರಾದರು.

ಸೂಕ್ತ ಜಾಗವನ್ನೇ ಆಯ್ಕೆ
ಬಸ್ ನಿಲ್ದಾಣದ ಬಳಿ ಮಹಿಳಾ ಪೊಲೀಸ್ ಠಾಣೆ ನಿರ್ಮಾಣವಾಗುತ್ತಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಂತ ಅನುಕೂಲ ಎಂಬ ಮಾತುಗಳು ಕೇಳಿ ಬಂದಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇದ್ದ ಹಳೆಯ ಪೊಲೀಸ್ ಠಾಣಾ ಕಟ್ಟಡ ಈಗಿನ ಮಹಿಳಾ ಪೊಲೀಸ್ ಠಾಣೆಯನ್ನು ಬಸ್ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಕಂದಾಯ ಇಲಾಖೆ ಜಾಗವನ್ನು ಗುರುತಿಸಿ ಆದೇಶವನ್ನು ಹೊರಡಿಸಿದೆ. ಕಟ್ಟಡ ನಿರ್ಮಾಣಕ್ಕೆ ಇನ್ನು ಶೀಘ್ರವೇ ಅನುದಾನವೂ ಬರುತ್ತದೆ.ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಈಗ ಇರುವ ಠಾಣೆಯನ್ನು ಕೆಡವಲಾಗುತ್ತದೆ, ಇದು ದೇವಳಕ್ಕೆ ಸೇರಿದ ಜಾಗದಲ್ಲಿರುವ ಕಾರಣ ಠಾಣೆಯ ಕಟ್ಟಡವನ್ನು ಕೆಡವಿ ಆ ಜಾಗವನ್ನು ದೇವರಿಗೆ ನೀಡಲಾಗುತ್ತದೆ. ದೇವಸ್ಥಾನದ ಜಾಗವನ್ನು ಯಾರು ಅಕ್ರಮಿಸಿಕೊಂಡರೂ ಅದನ್ನು ಬಿಡುವ ಪ್ರಶ್ನೆಯೇ ಇಲ್ಲ. ದೇವರ ಜಾಗ ದೇವರಿಗೆ ಸೇರಬೇಕು. ಬಸ್ ನಿಲ್ದಾಣದ ಬಳಿ ಆಧುನಿಕ ಶೈಲಿಯ ಹೊಸ ಮಹಿಳಾ ಪೊಲೀಸ್ ಠಾಣೆ ಶೀಘ್ರವೇ ನಿರ್ಮಾಣವಾಗಲಿದೆ.
ಅಶೋಕ್ ರೈ ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here