ಉಪ್ಪಿನಂಗಡಿ: ಭಗವಂತನ ಮೇಲಿನ ಭಕ್ತಿಗೂ ಮಾನವ ಸೃಷ್ಠಿಸಿದ ಮತಗಳಿಗೂ ಯಾವುದೇ ನಂಟಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಹಲವಾರು ಪುರಾವೆಗಳು ಲಭ್ಯ. ನಂಬಿದವನಿಗೆ ಇಂಬು ದೊರೆಯುವುದೆಂಬುವುದಕ್ಕೆ ಉಪ್ಪಿನಂಗಡಿಯಲ್ಲಿ ಆದಿತ್ಯವಾರ ನಡೆದ ಘಟನೆಯೇ ಸಾಕ್ಷಿ .
ಇಬ್ಬರು ಯುವಕರು ದೇವಾಲಯದ ಪರಿಸರದಲ್ಲಿ ಅಲೆದಾಡುತ್ತಿದ್ದರು. ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ಒಂದಷ್ಟು ಹೊತ್ತು, ಸನಿಹದ ನದಿಗಿಳಿಯುವ ಮೆಟ್ಟಿಲ ಬಳಿ ಒಂದಷ್ಟು ಹೊತ್ತು ಪರಿಶೀಲಿಸುತ್ತಿರುವ ರೀತಿಯಲ್ಲಿ ಸಂಚರಿಸುತ್ತಿದ್ದ ಅವರು, ಬಳಿಕ ಅಲ್ಲಿನ ಪುರೋಹಿತರೊಬ್ಬರಲ್ಲಿ ಏನನ್ನೋ ವಿಚಾರಿಸುತ್ತಿದ್ದರು. ಬಳಿಕ ಅವರಲ್ಲಿ ಒಬ್ಬಾತ ದೂರದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾವೊಂದರಿಂದ ನೀಲಿ ಬಣ್ಣದ ಚೀಲವೊಂದನ್ನು ಹಿಡಿದುಕೊಂಡು ದೇವಾಲಯದ ಬಳಿಗೆ ಆಗಮಿಸಿದರು. ಅವರಿಬ್ಬರು ಮಾತನಾಡುತ್ತಿದ್ದ ಭಾಷೆ ಬ್ಯಾರಿ ಭಾಷೆಯಾಗಿದ್ದರಿಂದ ಸಹಜ ಸಂಶಯ ಮತ್ತು ಕುತೂಹಲ ಮೂಡಿತ್ತು. ಚೀಲದಲ್ಲಿ ತುಂಬಿದ್ದ ಹತ್ತದಿನೈದು ತೆಂಗಿನಕಾಯಿಗಳೊಂದಿಗೆ ಮಹಾಕಾಳಿ ದೇವಾಲಯದ ಬಳಿಯ ನದಿಗಿಳಿಯುವ ಮೆಟ್ಟಿಲಿನಲ್ಲಿ ಒಂದೊಂದೆ ತೆಂಗಿನ ಕಾಯಿಯನ್ನು ಒಡೆಯತೊಡಗಿದರು. ವಿಷ್ಮಯವೆಂಬಂತೆ ಪ್ರತಿಯೊಂದು ತೆಂಗಿನ ಕಾಯಿಯು ಒಡೆದು ಮೇಲ್ಮುಖವಾಗಿ ಬೀಳತೊಡಗಿತ್ತು. ಧಾರ್ಮಿಕ ನೆಲೆಗಟ್ಟಿನಲ್ಲಿ ತೆಂಗಿನಕಾಯಿ ಒಡೆದಾಗ ಅದು ಒಡೆದು ಮೇಲ್ಮುಖವಾಗಿ ಬಿದ್ದರೆ, ದೇವರು ಪ್ರಾರ್ಥನೆಯನ್ನು ಸ್ವೀಕರಿಸಿದ್ದಾನೆಂಬ ನಂಬಿಕೆ ಇರುವುದರಿಂದ ಯುವಕರು ಒಡೆದ ತೆಂಗಿನಕಾಯಿ ಬಿದ್ದ ಸ್ವರೂಪ ಭಗವಂತನ ಪ್ರೀತಿಗೆ ಪಾತ್ರವಾಗಿದೆ ಎಂಬ ಭಾವನೆ ಮೂಡಿ ಯುವಕರನ್ನು ಯಾಕಾಗಿ ಈ ತೆಂಗಿನಕಾಯಿ ಒಡೆದಿರುವಿರಿ ಎಂದು ಸ್ಥಳೀಯರು ಪ್ರಶ್ನಿಸಿದರು.

ಈ ವಿಚಾರವಾಗಿ ಉತ್ತರಿಸಿದ ಯುವಕರು, ನಮ್ಮ ಮನೆಯಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಹರಕೆ ಹೊತ್ತುಕೊಂಡಿದ್ದೆವು. ನಮ್ಮ ಪ್ರಾರ್ಥನೆ ಫಲಿಸಿ ಮದುವೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಹರಕೆಯನ್ನು ಹೇಗೆ ತೀರಿಸುವುದೆಂದು ತಿಳಿಯದೆ ಗೊಂದಲದಲ್ಲಿದ್ದೆವು. ಬಳಿಕ ದೇವಾಲಯದ ಬಳಿಯ ನದಿಗಿಳಿಯುವ ಮೆಟ್ಟಿಲಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದೇವೆ ಎಂದರು. ಬಳಿಕ ಕಾಣಿಕೆ ಹಣವನ್ನು ಅಲ್ಲಿನ ಕಾಣಿಕೆ ಡಬ್ಬಿಗೆ ಹಾಕಿ ಭಕ್ತಿಯಿಂದ ನಮಿಸಿ ನಿರ್ಗಮಿಸಿದರು.
ದೇವನೊಬ್ಬನೇ ನಾಮ ಹಲವು ಎಂಬ ಸನಾತನ ತತ್ವ ಪರಂಪರೆಯಂತೆ ಮುಸ್ಲಿಂ ಮತಾನುಯಾಯಿಗಳಾಗಿದ್ದರೂ, ತಮ್ಮ ಕಷ್ಟ-ಸಂಕಷ್ಟಕ್ಕೆ ಹಿಂದೂ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿ ಹರಕೆಹೊತ್ತ ಈ ಯುವಕರಿಬ್ಬರ ಪ್ರಾರ್ಥನೆಗೆ ಭಗವಂತ ಒಲಿದಿರುವುದು. ಪ್ರಾರ್ಥನೆ ಫಲಿಸಿ ಇಷ್ಟಾರ್ಥ ಸಿದ್ದಿಸಿದ ಕಾರಣಕ್ಕೆ ಯುವಕರು ದೇವಾಲಯದ ಪರಿಸರದಲ್ಲಿ ತೆಂಗಿನ ಕಾಯಿ ಒಡೆದು ಹರಿಕೆ ತೀರಿಸಿರುವುದು ಎಲ್ಲವೂ ಮತೀಯ ತಡೆಗೋಡೆಗಳನ್ನು ಭೇಧಿಸಿ ಭಕ್ತಿ ಮತ್ತು ಭಗವಂತನ ನಡುವಿನ ಸಂಬಂಧದ ನೆಲೆಗಟ್ಟಿನಲ್ಲಿ ನಡೆಯಿತು ಎನ್ನುವುದು ಇಲ್ಲಿ ಗೋಚರಿಸಿದ ಪ್ರಧಾನ ಅಂಶ.