ಪುತ್ತೂರು: ಕೇರಳದ ಪಾಲಕ್ಕಾಡ್ ನಿಂದ ಮೈಸೂರು ಕಡೆ ತೆರಳುತ್ತಿದ್ದ ಯಾತ್ರಿಕರ ಬಸ್ ಕೆಟ್ಟು ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6ರ ತನಕ ಕುಂಬ್ರದಲ್ಲಿ ರಸ್ತೆ ಬದಿಯಲ್ಲೇ ನಿಂತಿತ್ತು. ಈ ಬಸ್ಸಲ್ಲಿದ್ದ ಯಾತ್ರಿಕರ ಸಂಖ್ಯೆ 60, ಇದರಲ್ಲಿ ಮಹಿಳೆಯರು, ವೃದ್ದರು, ಪುಟ್ಟ ಕಂದಮ್ಮಗಳೂ ಇದ್ದರು. ದೇವಸ್ಥಾನಗಳ ತೀರ್ಥ ಯಾತ್ರೆಗೆ ಹೊರಟ ಇವರು ಅರ್ಧ ದಾರಿಯಲ್ಲಿ ಬಾಕಿಯಾದಾಗ ಇವರಿಗೆ ಆಪದ್ಬಾಂಧವರಾಗಿ ಇತರ ನೆರವಿಗೆ ಬಂದವರು ಕುಂಬ್ರದ ರಿಕ್ಷಾ ಚಾಲಕ ಕೋಳಿಗದ್ದೆ ಇಸ್ಮಾಯಿಲ್ ಹಾಗೂ ಬಶೀರ್ ಕಡ್ತಿಮಾರ್ ಎಂಬವರು
ಅಕಸ್ಮಿಕವಾಗಿ ಬಸ್ಸಿನ ಯಾವುದೋ ಒಂದು ಬಿಡಿ ಭಾಗ ಕಟ್ಟಾಗಿತ್ತು. ಶನಿವಾರ ಸಂಜೆಯಾದ ಕಾರಣ ಇವರ ಬಸ್ಸಿಗೆ ಜೋಡಿಸಬೇಕಾದ ಬಿಡಿಭಾಗ ಅಂಗಡಿಯಲ್ಲಿ ಸಿಗಲಿಲ್ಲ. ಈ ಕಾರಣಕ್ಕೆ ಶನಿವಾರ ಇಡೀ ರಾತ್ರಿ ಬಸ್ಸಲ್ಲೇ ಕಳೆದರು. ಬಸ್ಸು ಯಾಕೆ ಇನ್ನೂ ಹೋಗಿಲ್ಲ ಎಂದು ತಡ ರಾತ್ರಿ 2.30 ಕ್ಕೆ ಇಸ್ಮಾಯಿಲ್ ಕೋಳಿಗದ್ದೆ ಅವರು ಯಾತ್ರಿಕರಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಇಸ್ಮಾಯಿಲ್ರವರು ಅವರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ. ವೃದ್ದರು,ಮಹಿಳೆಯರು ಇದ್ದ ಕಾರಣ ಅವರಿಗೆ ಶೌಚಾಲಯದ ವ್ಯವಸ್ಥೆ ಅಗತ್ಯ ಬೇಕಿತ್ತು. ತನ್ನ ಮನೆಯ ಬಳಿಯ ಶೌಚಾಲಯವನ್ನು ಬಳಸುವಂತೆ ತಿಳಿಸಿದ ಇಸ್ಮಾಯಿಲ್, ಸ್ನಾನ ಮಾಡಲೂ ವ್ಯವಸ್ಥೆ ಮಾಡಿದ್ದಾರೆ. ಊಟೋಪಚಾರವನ್ನು ಯಾತ್ರಿಕರು ಬಸ್ಸಲ್ಲೇ ಮಾಡಿದ್ದರಿಂದ ಅದರ ಅಗತ್ಯ ಬಂದಿರಲಿಲ್ಲ….

ಭಾನುವಾರ ಬಸ್ಸಲ್ಲಿದ್ದ ಕಂದಮ್ಮಗಳ ಆರೋಗ್ಯದಲ್ಲಿ ಏರು ಪೇರಾಗಿತ್ತು. ಇನ್ನೋರ್ವ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ರವರು ಅವರನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದರು. ಊರು ,ಭಾಷೆ ಗೊತ್ತಿಲ್ಲದ ಮಲೆಯಾಳಿಗಳಿಗೆ ಇಸ್ಮಾಯಿಲ್ ಮತ್ತು ಬಶೀರ್ರವರು ಸರ್ವ ರೀತಿಯ ಸಹಕಾರವನ್ನು ನೀಡಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆ ಬಸ್ಸಲ್ಲಿದ್ದ 35 ಮಂದಿ ವಿವಿಧ ಬಸ್ಸುಗಳಲ್ಲಿ ಮೈಸೂರಿಗೆ ತೆರಳಿದರು.ಒಂದು ಕುಟುಂಬ ಮಾತ್ರ ಬಸ್ಸಲ್ಲೇ ಉಳಿದುಕೊಂಡಿತ್ತು. ಅವರ ಜೊತೆಗಿದ್ದ ಮಗುವಿಗೆ ಹುಷಾರಿಲ್ಲದ ಕಾರಣ ಅವರು ಹೋಗಿರಲಿಲ್ಲ. ಸಂಜೆ ವೇಳೆ ಬಸ್ಸನ್ನು ದುರಸ್ತಿ ಮಾಡಿದ ಬಳಿಕ ಬಸ್ಸು ಮೈಸೂರು ಕಡೆ ಪ್ರಯಾಣ ಬೆಳೆಸಿದೆ. ಹೊರಡುವಾಗ ಬಶೀರ್ ಮತ್ತು ಇಸ್ಮಾಯಿಲ್ ಅವರಿಗೆ ಕೃತಜ್ಞತೆ ಹೇಳಲು ಬಸ್ಸಲ್ಲಿದ್ದವರು ಮರೆಯಲಿಲ್ಲ…ಇವರಿಬ್ಬರ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.