ರಾಮಕುಂಜ: ಅಲ್-ಸಫರ್ ಹೆಲ್ಪ್ಲೈನ್ ಆತೂರುಬೈಲ್ ವತಿಯಿಂದ ದಿ| ಎ.ಪಿ. ಹಾರೀಸ್ ಸ್ಮರಣಾರ್ಥ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಬ್ಯಾಗ್, ಧನಸಹಾಯ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ.17ರಂದು ಆತೂರುಬೈಲ್ ಸಭಾಂಗಣದಲ್ಲಿ ಜರಗಿತು.
ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸಹಾಯ, ಸಹಕಾರಗಳು ಅತ್ಯಂತ ಪುಣ್ಯದಾಯದ ಸೇವೆಯಾಗಿದ್ದು, ನಮ್ಮ ಮುಂದೆ ಬಹಳಷ್ಟು ವಿದ್ಯಾರ್ಥಿಗಳು ಇದೇ ರೀತಿಯಲ್ಲಿ ಕಷ್ಟದಲ್ಲಿದ್ದು ಬೇರೆಯವರ ಸಹಾಯ ಪಡೆದುಕೊಂಡು ಕಲಿತು ಇಂದು ಸಮಾಜದಲ್ಲಿ ಉನ್ನತ ಸ್ನಾನಕ್ಕೆ ಏರಿದವರು ಇದ್ದಾರೆ. ಮುಂದೊಂದು ದಿನ ಇದೀಗ ಸಹಾಯ ಪಡೆಯುವ ವಿದ್ಯಾರ್ಥಿಗಳು ಅಂತಹವರ ಸಾಲಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಸಮಾಜದಲ್ಲಿ ಬಹಳಷ್ಟು ಮಂದಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುವವರಿದ್ದಾರೆ. ಆದ ಕಾರಣ ಇದೀಗ ಕಲಿಯುವ ಮಕ್ಕಳಿಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ವಿದ್ಯಾರ್ಥಿಗಳು ಮುಂದಿನ ಗುರಿಯನ್ನು ಇಟ್ಟುಕೊಂಡು ಕಲಿತು ಮುಂದೆ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸುವಂತಾಗಬೇಕು ಎಂದರು.
ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಆತೂರು ಮಾತನಾಡಿ, ಇಲ್ಲಿನ ಯುವಕರ ಈ ಸೇವೆ ಇತರೇ ಯುವಕರಿಗೂ ಮಾದರಿ ಆಗಲಿ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದರು. ಸಮಾರಂಭದಲ್ಲಿ ಇಸ್ಮಾಯಿಲ್ ದಾರಿಮಿ, ಸಫ್ವಾನ್ ಎಮಾನಿ, ಇಬ್ರಾಹಿಂ ಕೌಸರಿ, ಹೈದರ್ ಕಲಾಯಿ, ಅಬ್ದುಲ್ ಖಾದರ್, ಡಿ.ಎ. ಪುತ್ತುಮೋನು, ಅಲ್-ಸಫರ್ ಸಂಘಟನೆಯ ಪದಾಧಿಕಾರಿಗಳಾದ ಎಂ.ಎ. ಹಂಝ, ಇಕ್ಬಾಲ್, ಫಾರೂಕ್, ಇಸ್ಮಾಯಿಲ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ, ಸನ್ಮಾನ:
ಸಮಾರಂಭದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಇರ್ಫಾನ, ಫಾತಿಮತ್ ಸೈಮ, ಅಫೀಫ, ಖಲಂದರ್ ಅಪ್ನಾನ್ ಇವರನ್ನು ಅಭಿನಂದಿಸಲಾಯಿತು. ನಾಟಿವೈದ್ಯ ಈಸುಬು ದೇವಳಬಳಿ ಇವರಿಗೆ 2025ನೇ ಸಾಲಿನ ಅಲ್-ಸಫರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸುಮಾರು 70 ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ನೀಡಲಾಯಿತು.
ಅಲ್-ಸಫರ್ ಹೆಲ್ಪ್ಲೈನ್ ಮಾಜಿ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಆತೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೌಫಲ್ ವಂದಿಸಿದರು. ಪಿ.ಎ. ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.