ಕಡಬ: ಮರ್ದಾಳ ಗುಡ್ ಶೆಫರ್ಡ್ ಪ್ರೌಢಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಹಪಠ್ಯ ಸಂಘಗಳ ಉದ್ಘಾಟನೆ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಡಬ ಸರಕಾರಿ ಪ.ಪೂ.ಕಾಲೇಜಿನ ರಾಜಕೀಯ ಶಾಸ್ತ್ರದ ಉಪನ್ಯಾಸಕ ಸಲೀನ್ ಕೆ.ಪಿ.ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ನಾಯಕತ್ವವನ್ನು ವಹಿಸಿಕೊಂಡು ಮುಂದೆ ಸಮಾಜದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕೆಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಪ್ರಿಯಾಕುಮಾರಿ ಸಿ.ಟಿ., ಅವರು ನೂತನ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪ್ರಮಾಣ ವಚನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹಾಗೂ ನೂತನ ಶಾಲಾ ಸಂಸತ್ತಿನ ಹಾಗೂ ಸಹಪಠ್ಯ ಸಂಘಗಳ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಶಾಲಾ ಮುಖ್ಯಮಂತ್ರಿಯಾಗಿ ಅಲಿನಾ ಪಿ.ಎ., ಉಪಮುಖ್ಯಮಂತ್ರಿಯಾಗಿ ಫಾತಿಮಾತ್ ಪಾಯಿಝಾ, ಶಿಕ್ಷಣ ಮಂತ್ರಿಯಾಗಿ ಹರ್ಷಿತಾ, ಶಿಸ್ತಿನ ಮಂತ್ರಿಯಾಗಿ ಪುನೀತಾ, ಆರೋಗ್ಯಮಂತ್ರಿಯಾಗಿ ಚರಣ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಝಿಯಾನಾ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಶಾಲಾ ಶೈಕ್ಷಣಿಕ ಸಲಹೆಗಾರರಾದ ಮೇಫಿ ಅವರು ಸಹಪಠ್ಯ ಸಂಘಗಳ ಮಾರ್ಗದರ್ಶಕ ಶಿಕ್ಷಕರ ಹಾಗೂ ಸಂಘದ ಪದಾಧಿಕಾರಿಗಳ ಹೆಸರನ್ನು ವಾಚಿಸಿದರು. ಅತಿಥಿಯಾಗಿದ್ದ ಉಪನ್ಯಾಸಕ ಸಲೀನ್ ಅವರು ಎಲ್ಲಾ ಕ್ಲಬ್ಗಳಿಗೆ ಫೈಲ್ಗಳನ್ನು ಹಸ್ತಾಂತರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಲಬ್ಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಸಂಚಾಲಕ ತೋಮಸ್ ಪಿ.ವಿ.ಉಪಸ್ಥಿತರಿದ್ದರು. ಶಿಕ್ಷಕಿ ಶಿಲ್ಪಾ ಸ್ವಾಗತಿಸಿ, ಶಿಕ್ಷಕಿ ಜೀನ್ಸಿ ವಂದಿಸಿದರು. ಶಿಕ್ಷಕಿ ರಶೀದಾ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಸಹಕರಿಸಿದರು.