ಅಧ್ಯಕ್ಷ: ಗುರುಕಿರಣ್, ಕಾರ್ಯದರ್ಶಿ: ವಿನೀತ್ ಕುಮಾರ್
ಜೊತೆ ಕಾರ್ಯದರ್ಶಿ: ಮಂಜುನಾಥ್, ಉಪಾಧ್ಯಕ್ಷೆ: ಕುಮಾರಿ ಸಾನ್ವಿ ಕೆ.
ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಇವಿಎಂ ಸಿಮ್ಯುಲೇಟರ್ ಆಪ್ ಸಹಾಯದಿಂದ ನಡೆಯಿತು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷನಾಗಿ ಗುರುಕಿರಣ್, ಕಾರ್ಯದರ್ಶಿಯಾಗಿ ವಿನೀತ್ ಕುಮಾರ್ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು. ಸಾನ್ವಿ ಕೆ. ಉಪಾಧ್ಯಕ್ಷೆಯಾಗಿ ನೇಮಕಗೊಂಡರು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಒಟ್ಟು 175 ವಿದ್ಯಾರ್ಥಿಗಳು ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಝಾಕ್ ಕೆ. ಮುಖ್ಯ ಚುನಾವಣಾ ಅಧಿಕಾರಿಯಾಗಿ ಉಪನ್ಯಾಸಕ ಕಮಲಾಕ್ಷ ಎ. ಮತ್ತು ಪುಷ್ಪರಾಜರವರು ಸಮನ್ವಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಪನ್ಯಾಸಕರಾದ ರಜನಿ ಬಿ. ಚುನಾವಣಾ ಅಧಿಕಾರಿಯಾಗಿ, ಸೈಯದ್ ಫಾರುಕ್ ಸಹಾಯಕ ಚುನಾವಣಾ ಅಧಿಕಾರಿಯಾಗಿ ಜ್ಯೋತಿ ಕುಮಾರಿ ವೀಕ್ಷಕರಾಗಿ, ಗಾಯತ್ರಿ ಎಂ. ಹಾಗೂ ರಶ್ಮಿ ಬಿ. ಅಧ್ಯಕ್ಷಾಧಿಕಾರಿಯಾಗಿ, ನಯನ ಮತ್ತು ಮಹಮ್ಮದ್ ಮುಸ್ತಫ ಪೋಲಿಂಗ್ ಅಧಿಕಾರಿಯಾಗಿ, ಬೋಧಕೇತರ ಸಿಬ್ಬಂದಿ ಮೋಹನ್ರವರು ಬಿ.ಎಲ್.ಓ ಆಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ರಜಾಕ್ ಕೆ. ಫಲಿತಾಂಶ ಘೋಷಿಸಿ ಮಾತನಾಡಿ, ಯಾವುದೇ ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸರಿಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಆ ದೇಶ ಪ್ರಗತಿಯ ಪ್ರಥದಲ್ಲಿ ಸಾಗಬಲ್ಲದು. ವಿದ್ಯಾರ್ಥಿ ಪರಿಷತ್ ಕಾಲೇಜಿನ ಪ್ರಮುಖ ಅಂಗವಾಗಿದ್ದು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಮಾದರಿ ಸಂಘಟನೆಯಾಗಿ ಕಾಲೇಜಿನ ಪ್ರಗತಿ ಆಗುವುದು ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.