ತುಳುನಾಡಿಗೋಸ್ಕರ ಒಂದಾದ ತುಳುವರು – ಸರ್ವಪಕ್ಷ, ತುಳು ಸಮಾನ ಮನಸ್ಕರ ಸಭೆ

0

ತುಳುವರ ಒಕ್ಕೊರಲ ಅಭಿಪ್ರಾಯವೇನು?

ಪುತ್ತೂರು: ಸರ್ವಪಕ್ಷ, ತುಳು ಸಮಾನ ಮನಸ್ಕರ ಆನ್ಲೈನ್ ಸಭೆ ಜೂ.30ರಂದು ನಡೆಯಿತು.

ಆನ್ಲೈನ್‌ ಮಿಟ್‌ ನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಬ್ರಿಟೀಷರು ಕೆನರ ಅಂತ ಕರಿತಿದ್ದರು, ನಂತರ ಸೌತ್ ಕೆನರ, ನಾರ್ತ್ ಕೆನರ ಆಯಿತು. ಕೆನರದಿಂದ ಹೇಗೆ ಕನ್ನಡ ಅಂತ ತರ್ಜುಮೆ ಆಯಿತು ಗೊತ್ತಿಲ್ಲ. ಮಂಗಳಾಂಬಿಕೆಯ ಸ್ಥಳ ಆದ್ದರಿಂದ ಮಂಗಳೂರು ಅನ್ನೋ ಹೆಸರು ಸೂಕ್ತ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಆಮೇಲೆ ಸಾಮೂಹಿಕ ಚರ್ಚೆಯಲ್ಲಿ ಏನು ನಿರ್ಧಾರ ಆಗುತ್ತೋ ಅದಕ್ಕೆ ಬೆಂಬಲ ಎಂದು ಸೂಚಿಸಿದರು.

ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು, “ಶಾಸಕರಾಗಿ ಏನೆಲ್ಲಾ ಸಹಕಾರ ಬೇಕು ಎಲ್ಲಾ ಮಾಡುತ್ತೇನೆ, ಪಂಚಾಯತ್ ನಿಂದ ಹಿಡಿದು ಜಿಲ್ಲಾಮಟ್ಟದಲ್ಲಿ ಏನೆಲ್ಲಾ ಪ್ರಕ್ರಿಯೆ ಅಗಬೇಕು ಅದನ್ನು ಅರಿತು ಮುಂದುವರಿಯುವ” ಎಂದರು. ಹಾಗೆಯೇ “ಎಲ್ಲಾ ಕರಾವಳಿ ಹೆಸರಿನಲ್ಲಿ ಕಾರ್ಯಕ್ರಮ ಆಗುತ್ತಿದೆ ಅದನ್ನು ಕೂಡ ತುಳುನಾಡು ಎಂದು ಬದಲಾವಣೆ ಮಾಡಬೇಕು” ಎಂದರು.

ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡುತ್ತ, “ಕೆನರ, ಕನ್ನಡಕ್ಕೆ ಯಾವ ರೀತಿಯಲ್ಲೂ ತಾಳೆಯಾಗುತ್ತಿಲ್ಲ, ಆಡಳಿತಾತ್ಮಕವಾಗಿ ಏನೆಲ್ಲಾ ಆಗಬೇಕು ಅದಕ್ಕೆ ಎಲ್ಲ ಬೆಂಬಲ ಕೊಡುತ್ತೇನೆ” ಎಂದರು.

ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲ್ಸಾರ್ ಅವರು ಇಲ್ಲಿ ದುರ್ಬಿನ್ ಹಾಕಿ ನೋಡಿದರೂ ತುಳುವಿಗೆ ಸಂಬಂಧಪಟ್ಟ ವಿಷಯ, ಸ್ಥಳ ಕಾಣಿಸಲ್ಲ, ತುಳು ಅಕಾಡೆಮಿ ಒಂದು ಬಿಟ್ಟರೆ. ನಮ್ಮವರು ತುಳುವನ್ನು ಹಂತ ಹಂತವಾಗಿ ತುಳಿಲಿಕ್ಕೆ ನೋಡುತ್ತಿದ್ದಾರೆ. ಉದಾಹರಣೆಗೆ ಇತ್ತೀಚಿಗೆ ಪಂಚಾಯತ್ ಗ್ರಾಮ ಸಭೆಯಲ್ಲಿ ತುಳು ಮಾತನಾಡಬಾರದು ಅಂತ ಸುತ್ತೋಲೆ ಹೊರಡಿಸಿದ್ದರು. ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ರಾಜ್ಯೋತ್ಸವ ಅಂತ ಕರಿತಿದ್ದಾರೆ. ಹಾಗೆಯೇ ಪಾಡ್ದನದಲ್ಲಿ ಮಂಗಾರ್ ಅಂತ ಉಲ್ಲೇಖ ಇದೆ, ಹಾಗಾಗಿ ಮಂಗಳೂರು ಅನ್ನೋಡು ಕೂಡ ತುಳು ಪದ. ಮುಂದೆ ತುಳು ರಾಜ್ಯ ಆಗೋ ಸಂದರ್ಭ ಬಂದರೂನು ಈ ಹೆಸರು ಸೂಕ್ತ ಎಂದರು. ಆಮೇಲೆ ಜನಗಣತಿ ಸಂದರ್ಭದಲ್ಲಿ ದಕ್ಷಿಣ ಕನ್ನಡ ಇದ್ದ ಕಾರಣ ಮನೆಗೆ ಬರುವ ಪ್ರತಿನಿಧಿಗಳು 80% ನಿಮ್ಮ ಭಾಷೆ ಕನ್ನಡ ಅಂತಲೇ ನಮೂದಿಸಿ ಹೋಗುತ್ತಿದ್ದರು. ಇಷ್ಟಾದರೂ ತುಳುವಿಗೆ ಸ್ಥಾನಮಾನ ಸಿಗದಿದ್ದರೆ ಅದು ನಮ್ಮ ದೌರ್ಬಲ್ಯ ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಮಾತನಾಡಿ “ನಮಗೆ ಎಲ್ಲ ವ್ಯವಸ್ಥೆ ಇದ್ದು, ಇಷ್ಟರವರೆಗೆ ಏನು ಮಾಡಲಾಗಿಲ್ಲ, ಮಧ್ವಾಚಾರ್ಯರಿಂದ ಇಂದಿನ ಅಷ್ಟಮಠದ ಹೆಚ್ಚಿನ ಸ್ವಾಮೀಜಿಗಳು ತುಳು ಲಿಪಿಯಲ್ಲೆ ರುಜು ಮಾಡುತ್ತಿದ್ದಾರೆ” ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ ರವರು, “ಡಾಕ್ಯುಮೆಂಟ್ ನಲ್ಲಿ ಬಿಟ್ಟರೆ ಬೇರೆ ಎಲ್ಲೂ ದಕ್ಷಿಣ ಕನ್ನಡ ಬಳಕೆ ಇಲ್ಲ, ಎಲ್ಲರೂ ಕುಡ್ಲ, ಮಂಗಳೂರು ಅಂತನೇ ಹೇಳೋದು” ಎಂದರು. ಆಮೇಲೆ ಕತ್ತಲ್ಸಾರ್ ಅವರ ಮಾತಿಗೆ ಜೊತೆಯಾಗುತ್ತ ಕರಾವಳಿ ಉತ್ಸವವನ್ನು ತುಳುನಾಡು ಉತ್ಸವ ಅಂತ ಮರುನಾಮಕರಣದ ಬಗ್ಗೆಯೂ ಹೇಳಿದರು. ಹಾಗೆಯೇ ಯಾವ ರೀತಿಯಲ್ಲಿ ಹೊರಾಟಕ್ಕೂ ಜೊತೆಗೂಡಬೇಕು ಎಂದರು.

ಟಿವಿ ವಿಕ್ರಮ್ ನ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಕೂಡ ತಮ್ಮ ಬೆಂಬಲವನ್ನು ಸೂಚಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಅವರು, “ಹೆಚ್ಚಾಗಿ ತುಳು ಮಾತನಾಡುವ ಜಿಲ್ಲೆಗೆ ಕುಡ್ಲ ಅಥವಾ ಮಂಗಳೂರು ಹೆಸರು ಸೂಕ್ತ” ಎಂದರು. ಹಾಗೆಯೇ “ನಾವು ಎಲ್ಲೆ ಹೋದರೂ ‘ಯಾನ್ ಕುಡ್ಲದಾಯೆ’, ‘ನಾನು ಮಂಗಳೂರು ಅಂತೇನೆ’ ಹೇಳೋದು” ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, “ಮಂಗಳೂರು ಅನ್ನೋದು ಸೂಕ್ತ ಹೆಸರು, ಹಾಗೆಯೇ ತುಳು ನಮಗೆ ತಾಯಿಗೆ ಸಮಾನ, ತಾಯಿಯನ್ನು ಉಳಿಸಲು ಎಲ್ಲಾ ಮಕ್ಕಳು ಒಟ್ಟಾಗಬೇಕು” ಎಂದರು.

ಮಾಜಿ ಶಾಸಕರಾದ ಬಿ.ಎ. ಮೋಹಿದ್ದೀನ್ ಬಾವ ಮಾತನಾಡಿ, “ಕುಡ್ಲ ಅನ್ನೋದು ವಿಶ್ವವ್ಯಾಪಿ, ಹಾಗಾಗಿ ಕುಡ್ಲ ಅನ್ನೋ ಹೆಸರು ಸೂಕ್ತ. ಆಮೇಲೆ ಹೆಸರು ಬದಲಾವಣೆಯ ಜೊತೆಗೆ ಕೋಮು ಅನ್ನೋ ಕಳಂಕವೂ ನಿವಾರಣೆಯಾಗಲಿ” ಎಂದು ಹೇಳಿದರು.

ಕವಿತಾ ಸನಿಲ್, ಮಂಗಳೂರಿನ ಮಾಜಿ ಮೇಯರ್ ಅವರು, “ದಕ್ಷಿಣ ಕನ್ನಡ ಚುನಾವಣಾ ಸಂದರ್ಭದಲ್ಲಿ ಬಿಟ್ಟರೆ ಬೇರೆ ಯಾವಾಗಲೂ ಹೆಚ್ಚು ಉಪಯೋಗಿಸುವುದಿಲ್ಲ, ಹಾಗಾಗಿ ಮಂಗಳೂರು ಅನ್ನೋದು ತರ್ಕವಾಗಿ ಸರಿಯಾಗಿದೆ” ಎಂದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ವೇತಾ ಪೂಜಾರಿ ಮಾತನಾಡಿ, “ಇಲ್ಲಿಂದ ಹೊರಡುವವರು ಇಲ್ಲಿಗೆ ಬರುವವರು ಮಂಗಳೂರು ಅಂತನೇ ಹೇಳೋದು, ಹಾಗಾಗಿ ಈ ಹೆಸರಿದ್ದರೆ ಅಷ್ಟೊಂದು ಗೊಂದಲಮಯ ಕೂಡ ಆಗುವುದಿಲ್ಲ” ಎಂದರು.

ಶೈಲೇಶ್ ಆರ್ ಜೆ, ತುಳುವೆರೆ ಪಕ್ಷದ ಸ್ಥಾಪಕರು ಮಾತನಾಡುತ್ತ ಹೇಳಿದರು, “ಇಷ್ಟರವರೆಗೆ ಬೆರಳೆಣಿಕೆಯಷ್ಟು ಜನರು ಮನವಿ ಕೊಡ್ತಿದ್ರು ಅದಕ್ಕೆ ಬೆಲೆ ಇಲ್ಲ, ಈಗ ಎಲ್ಲರೂ ಸೇರಿ ಇದರ ಬಗ್ಗೆ ಒಕ್ಕೊರಲಾಗಿ ಧ್ವನಿ ಎತ್ತಿದ್ದೇವೆ, ಆಮೇಲೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ಈ ಕೆಲಸ ಏನು ಅಲ್ಲ ಎಂದರು.” ಹಾಗೆಯೇ “ಇಲ್ಲಿಯ ಸಣ್ಣ ಸಣ್ಣ ಜಾಗಗಳ ಹೆಸರು ಕನ್ನಡೀಕೃತ ಆಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸರು. ತುಳು ಸಂಸ್ಕೃತಿ ಚಿಂತಕರು ತಮ್ಮಣ್ಣ ಶೆಟ್ಟಿ ತಮ್ಮ ಬೆಂಬಲ ಸೂಚಿಸಿದರು.

ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಯೋಗೀಶ್ ಶೆಟ್ಟಿ ಜೆಪ್ಪು ಅವರು, “ಮರಾಠಿ, ತಮಿಳು ಜನರು ಭಾಷಾ ವಿಷಯಕ್ಕೆ ಪಕ್ಷ ಬಿಟ್ಟು ಒಟ್ಟಾಗುತ್ತಾರೆ, ಆದರೆ ಇಲ್ಲಿ ಅದು ಕಾಣಿಸುತ್ತಿಲ್ಲ, ಆದರೂ ಇವತ್ತು ಸರ್ವಪಕ್ಷ ಸಭೆ ಸೇರಿದ್ದು ಒಳ್ಳೆದೆ ಆಯಿತು” ಎಂದರು.

ಮನೋಜ್ ಕುಮಾರ್, ಮಾಜಿ ಮೇಯರ್, ಮಂಗಳೂರು ಮಹಾನಗರ ಪಾಲಿಕೆ ಮಾತನಾಡುತ್ತ, “ಕರ್ನಾಟಕದ ಎಲ್ಲ ಜಿಲ್ಲೆಗೆ ಆಯಾ ಜಾಗಕ್ಕೆ ಅನುಗುಣವಾಗಿ ಹೆಸರು ಇದೆ, ಆದರೆ ನಮ್ಮ ಜಿಲ್ಲೆಗೆ ಸಂಬಂಧವೇ ಇಲ್ಲದ ಹೆಸರು, ಹಾಗಾಗಿ ಬದಲಾವಣೆ ಅಗಲೇ ಬೇಕು” ಎಂದರು.

ಬಿರ್ವೆರ್ ಕುಡ್ಲದ ಪ್ರತಿನಿಧಿಯಾದ ದಿನೇಶ್ ಸುವರ್ಣ ರಾಯಿ ಮಾತನಾಡಿ, “ಇದಕ್ಕೆ ಬೇಕಾದ ಸರಕಾರಿ ಪ್ರಕ್ರಿಯೆ ಏನೆಲ್ಲಾ ಅಗಬೇಕಿದೆ ಅದನ್ನು ಚರ್ಚಿಸಿ ಮುಂದಿನ ಹೆಜ್ಜೆ ಇಡೋಣ” ಎಂದರು.

ವಾಗ್ಮಿ, ಕನ್ನಡ ಪ್ರಾಧ್ಯಾಪಕರು ಡಾ. ಅರುಣ್ ಉಳ್ಳಾಲ್ ಮಾತನಾಡಿ, “ನಮ್ಮಲ್ಲಿ ಎಷ್ಟೋ ಧರ್ಮ, ಸಂಸ್ಕೃತಿ ಸಂಘಟನೆಗಳು ಇವೆ, ಯಾರು ಭಾಷಾ ವಿಷಯದಲ್ಲಿ ಅಷ್ಟು ಆಸಕ್ತಿ ತೋರಿಸುತ್ತಿಲ್ಲ, ಹಾಗಾಗಿ ಕೋಮು ಭಾವನೆಗೆ ಸಿಕ್ಕ ಬೆಂಬಲ ಭಾಷಾ ವಿಷಯಕ್ಕೆ ಸಿಕ್ಕದೆ ಇರುವುದು ದುರಂತ” ಅಂದರು. ಹಾಗೇ ಪ್ರತಿ ಮನೆ ಮನೆಯಲ್ಲಿ ಭಾಷಾಭಿಮಾನ ಬೆಳೆದರೆ ಇಂತಹ ಕೆಲಸಗಳು ವೇಗ ಪಡೆಯುತ್ತವೆ ಎಂದರು.

ವಿಶ್ವ ಹಿಂದೂ ಪರಿಷತ್ತಿನ ಪ್ರಚಾರ್ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರು, “ಉತ್ತರ ಪ್ರದೇಶದಲ್ಲಿ ಆದ ಜಿಲ್ಲೆಯ ಮರುನಾಮಕರಣದ ಉದಾಹರಣೆ ಕೊಟ್ಟು, ಹೆಸರು ಬದಲಾದರೆ ದಾಸ್ಯತ್ವದಿಂದ ಹೊರ ಬಂದಂತೆ” ಎಂದು ಭಾವಿಸಿದರು. “ಇತರ ನಾಲ್ಕು ದ್ರಾವಿಡ ಭಾಷೆಗಳಿಗಿಂತ ನಾವು ಏನು ಕಡಿಮೆಯಿಲ್ಲ” ಎಂದು ಹೇಳಿದರು.

ಕಿರಣ್ ಕುಮಾರ್ ಕೊಡಿಕ್ಕಲ್ ಅವರು ಕೂಡ ಮಂಗಳೂರು ಹೆಸರು ಸಮಯೋಚಿತವಾಗಿದೆ ಅಂತ ತಮ್ಮ ಇಂಗಿತ ತಿಳಿಸಿದರು. ಯಾವ ಪಂಚಾಯತ್ ಅಧಿಕಾರಿ ಸಭೆಗಳಲ್ಲಿ ತುಳು ಮಾತನಾಡಬಾರದು ಅಂತ ನೋಟಿಸ್ ಹೊರಡಿಸಿದ್ದರೊ, ಅದರಿಂದ ಫಲಶ್ರುತಿ ಇವತ್ತು ಇಷ್ಟು ಜನ ಸೇರುವಂತಾಯಿತು.

ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಅವರು, “ಕರ್ನಾಟಕ ಸರ್ಕಾರದಿಂದ ತುಳುವಿಗೆ ಸಲೀಸಾಗಿ ಯಾವುದೆ ಮನ್ನಣೆ ಸಿಕ್ತಾ ಇಲ್ಲ, ಹಾಗಾಗಿ ಈ ಬದಲಾವಣೆಯ ಪರ್ವ ಒಳ್ಳೆಯ ಬೆಳವಣಿಗೆ” ಎಂದರು.

ರೋಷನ್ ರೆನಾಲ್ಡ್, ತುಳು ಸಂಘಟಕರು ಮಾತನಾಡಿ, “ತುಳುವಿಗೆ ಮಣ್ಣನೆ ಸಿಗಬೇಕಾದರೆ ಶುರುವಿಗೆ ನಾಮಫಲಕ ಬದಲಾವಣೆ ಅಗಬೇಕು, ಅಂದ್ರೆ ದಕ್ಷಿಣ ಕನ್ನಡವನ್ನು ಮಂಗಳೂರು/ಕುಡ್ಲ ಎಂದು ಮರುನಾಮಕರಣ ಮಾಡಬೇಕು” ಎಂದರು.

ಬರಹಗಾರ್ತಿ ಕುಶಾಲಾಕ್ಷಿ ಕಣ್ವತೀರ್ಥ ಅವರು, “ಹೆಸರು ಬದಲಾವಣೆಯ ಜೊತೆಗೆ ತಮ್ಮ ಊರಾದ ಕಾಸರಗೋಡು ಕೂಡ ಸೇರಿ ತುಳುನಾಡ ರಾಜ್ಯ ಶೀಘ್ರದಲ್ಲೇ ಆಗಲಿ” ಎಂದು ಬಯಸಿದರು.

ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷರು ಉದಯ ಪೂಂಜ ಮಾತನಾಡಿ, “ಡಿಸಿ ಅವರು ಎಲ್ಲೆ ಹೋದರೂ ಕುಡ್ಲ ಡಿಸಿ ಅಂತನೇ ಹೇಳೋದು, ಹಾಗಾಗಿ ಹೆಸರು ಬದಲಾವಣೆಗೆ ಇದು ಒಳ್ಳೆಯ ಸಮಯ” ಎಂದರು.

ಗಣೇಶ್ ಕಾಸರಗೋಡು ಅವರು, “ನಮ್ಮನ್ನು ತುಳುನಾಡಿನಿಂದ ಬೇರೆ ಮಾಡಬೇಡಿ, ತುಳುನಾಡನ್ನು ಉಡುಪಿ, ಮಂಗಳೂರಿಗೆ ಸೀಮಿತ ಮಾಡಬೇಡಿ” ಎಂದು ಅಳಲನ್ನು ತೊಡಿದರು.

ಉದಯ ಆಚಾರ್ಯ ಅವರು ಮಾತನಾಡುತ್ತ, “ಕರ್ನಾಟಕದ ಹೆಚ್ಚಿನ ಎಲ್ಲಾ ಜಿಲ್ಲೆಗಳು ಮರುನಾಮಕರಣ ಮಾಡಿದ್ದಾರೆ, ದಕ್ಷಿಣ ಕನ್ನಡ ಬದಲಾವಣೆ ಮಾಡೋದರಲ್ಲಿ ಏನು ಕಷ್ಟ ಇಲ್ಲ” ಎಂದರು.

ಶಟರ್‌ಬಾಕ್ಸ್ ಫಿಲಂಸ್‌ನ ಸಚಿನ್ ಶೆಟ್ಟಿ ಹಾಗು ಧನುಷ್ ಶೆಟ್ಟಿ ಅವರು “ಕುಡ್ಲ ತುಳು ಬೆಳವಣಿಗೆಗೆ, ಹೆಸರು ಬದಲಾವಣೆ ತುಂಬಾ ಬಲ ನೀಡುತ್ತದೆ” ಎಂದರು.

ಪುನೀತ್ ಸನಿಲ್ ಅವರು ಮಾತನಾಡಿ, “ಮೂಲ ದ್ರಾವಿಡದಿಂದ ಮೊದಲು ಕವಲು ಒಡೆದ ಭಾಷೆ ತುಳು, ಆದರೂ ಇವತ್ತು ನಮ್ಮ ಅಸಡ್ಡೆಯಿಂದಲೆ ಮೂಲೆಗುಂಪಾಗಿದೆ” ಎಂದರು.

ಗ್ಲೆನ್ ವಿಶಾಲ್ ಡಿ’ಸಿಲ್ವ ಅವರು, “ನಾವು ಇವತ್ತಿನಿಂದಲೇ ಮಂಗಳೂರು ಜಿಲ್ಲೆ ಅಂತರ ಬರೆಯಲು ಶುರು ಮಾಡೋಣ, ಅಧಿಕೃತವಾಗಿ ಒಂದು ಕಡೆ ಕೆಲಸ ನಡೆಯುತ್ತ ಇರಲಿ” ಎಂದರು.

ಗೀತಾ ಲಕ್ಷ್ಮೀಶ್ ಮಾತನಾಡಿ, “ಪಕ್ಷಭೇದ ಮರೆತು ನಾವು ಒಟ್ಟಾಗಿದ್ದೇವೆ, ಈ ನಿಲುವು ಮುಂದೆ ತುಳು ರಾಜ್ಯ ಕಟ್ಟುವ ಕನಸನ್ನು ನನಸು ಮಾಡುವ ಕಡೆ ಚಿತ್ತೈಸಲಿ” ಎಂದರು.

ಸುರೇಶ್ ಮೂಲ್ಯ ಗೋವಾ ಅವರು, “ಗೋವಾ ಜನತೆಯ ಒಗ್ಗಟ್ಟನ್ನು ಮುಂದಿಟ್ಟುಕೊಂಡು, ತುಳುವರಲ್ಲಿ ಇದು ಇಲ್ಲದ ಕಾರಣ ಈ ಸ್ಥಿತಿ ಬಂದಿದೆ” ಎಂದರು.

TCRF ನ ಮಹಿ ಮುಲ್ಕಿ ಎಲ್ಲರಿಗೂ ವಂದನೆ ಸಲ್ಲಿಸಿ ಹೇಳಿದರು, “ಮೊದಲು ತಾಯಿಯ (ಜಿಲ್ಲೆ) ಹೆಸರು ಸರಿಮಾಡೋಣ, ಆಮೇಲೆ ಮಕ್ಕಳ (ಉಳಿದ ಸ್ಥಳ) ಹೆಸರು. ಇದೊಂದು ನಿರಂತರ ಪ್ರಕ್ರಿಯೆ.” TCRF ನ ಅಧ್ಯಕ್ಷರಾದ ನಿಶ್ಚಿತ್ ರಾಮಕುಂಜ ಅವರು, “ಪೋರ್ಚುಗೀಸ್‌ರಿಗೆ ‘ಡ’ (ಕನ್ನಡ) ಉಚ್ಚರಿಸಲು ಬರದೆ, ‘ರ’ (ಕೆನರ) ಇಟ್ಟರು ಅನ್ನೋದು ಶುದ್ಧ ಸುಳ್ಳು, ಅವರು ‘ಡ’ ಕ್ಕೆ ‘ದ’ ಉಚ್ಚರಿಸುತ್ತಿದ್ದರು ಹಾಗಾಗಿ ಕೆನದ ಆಗುತ್ತಿತ್ತು” ಎಂದು ಸ್ಪಷ್ಟಪಡಿಸಿದರು.

ಶೈಲೇಶ್ ನಿಡ್ಡೋಡಿ ಮಾತನಾಡಿ, “ಕುಡ್ಲದ ಹೆಸರು ಸೂಕ್ತ, ದಕ್ಷಿಣ ಕನ್ನಡ ಅನ್ನೋದು ತುಳುವರ ಮೇಲೆ ಕನ್ನಡ ಹೆರಿಕೆಗೆ ಮಾಡಿದ ಹೆಸರು. ಶಾಲೆಲಿ ಕೂಡ ತುಳುವಿಗೆ ಲಿಪಿಯಿಲ್ಲ, ತುಳು ಕನ್ನಡದ ಉಪಭಾಷೆ ಎಂದು ಕಲಿಸುತ್ತಿದ್ದಾರೆ” ಎಂದರು. ಗೀತಾ ಲಕ್ಷ್ಮೀಶ್ ಎಲ್ಲರಿಗೂ ವಂದಿಸಿ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here