ರಾಮಕುಂಜ ಆಂಗ್ಲಮಾಧ್ಯಮ ಶಾಲೆಯಲ್ಲಿ ಉಚಿತ ಕಣ್ಣಿನ ಪರೀಕ್ಷೆ – ದೇಶದಲ್ಲಿ ಶೇ.7ರಷ್ಟು ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ-ನಿವೃತ್ತ ನೇತ್ರಾಧಿಕಾರಿ ಶಾಂತರಾಜ್

0

ರಾಮಕುಂಜ: ಭಾರತ ಸರ್ಕಾರದ ಅಂಧತ್ವ ನಿವಾರಣ ಸಂಸ್ಥೆಯ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಕಣ್ಣಿನ ಪರೀಕ್ಷೆ ಜು.21ರಂದು ನಡೆಯಿತು.
ಪುತ್ತೂರು ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲತಿಕೇಶವ ಕಲಾಯಿಗುತ್ತು ಕೊಯಿಲ ಅವರು ಶಿಬಿರ ಉದ್ಘಾಟಿಸಿದರು. ಅತಿಥಿಯಾಗಿದ್ದ ನಿವೃತ್ತ ನೇತ್ರಾಧಿಕಾರಿ ಶಾಂತರಾಜ್‌ರವರು ಮಾತನಾಡಿ, ಭಾರತ ಸರಕಾರದ ಅಂಕಿ ಅಂಶಗಳ ಪ್ರಕಾರ ಶೇ.7ರಷ್ಟು ವಿದ್ಯಾರ್ಥಿಗಳಲ್ಲಿ ದೃಷ್ಟಿ ತೊಂದರೆ ಇದೆ. ಇದರಲ್ಲಿ ಶೇ.2ರಷ್ಟು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಶೇ.5ರಷ್ಟು ವಿದ್ಯಾರ್ಥಿಗಳಿಗೆ ಇದರ ಅರಿವೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಪ್ರತಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಣ್ಣಿನ ಪರೀಕ್ಷೆ ತಪಾಸಣೆ ನಡೆಸುತ್ತಿದೆ. ಆದರೆ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಈ ಶಿಬಿರ ನಡೆಯುತ್ತಿರಲಿಲ್ಲ. ನಾನು ನಿವೃತ್ತಿಯಾದ ಬಳಿಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಈ ವರ್ಷ 10 ಸಾವಿರ ಮಕ್ಕಳ ದೃಷ್ಟಿ ಪರೀಕ್ಷೆಯ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಮನುಷ್ಯನಿಗೆ ಕಣ್ಣು ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ 1100 ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಲು ನಿರ್ಧರಿಸಿದ್ದೇವೆ. ದೃಷ್ಟಿ ದೋಷವಿರುವ ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಲಾಗುವುದು. ಪೋಷಕರಿಗೆ ನೇತ್ರಾಧಿಕಾರಿ ಶಾಂತರಾಜ್‌ರವರ ಮೂಲಕವೇ ಮಾರ್ಗದರ್ಶನ ನೀಡಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು. ಶ್ರೀ ರಾಮಕುಂಜೇಶ್ವರ ಸಿಬಿಎಸ್‌ಇ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು ಮಾತನಾಡಿ, ಕೆಲವು ವಿದ್ಯಾರ್ಥಿಗಳಲ್ಲಿ ದೃಷ್ಟಿ ತೊಂದರೆ ಇದ್ದರೂ ಅವರು ಹೇಳಿಕೊಳ್ಳುತ್ತಿಲ್ಲ. ಇದಕ್ಕೆ ಈಗಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಇದ್ದಲ್ಲಿ ಮುಂದೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಈ ಶಿಬಿರ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದರು.


ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಹರೀಶ್ ಬಾರಿಂಜ, ಸಂಸ್ಥೆ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ರಾಮಜಾಲು, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಸ್ವಾಗತಿಸಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಲೋಹಿತ ವಂದಿಸಿದರು. ಶಿಕ್ಷಕಿಯರಾದ ಶ್ರೀಹಿತ, ಸಂಚಿತ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here