ಪಾಪೆಮಜಲು : ರಸ್ತೆದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿಯಾಗಿ ಮೃತ್ಯು

0

ಕೌಡಿಚ್ಚಾರ್: ಪಾಪೆಮಜಲು ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಹೊಟೇಲ್ ಮಾಲಕರೋರ್ವರು ಮೃತಪಟ್ಟ ಘಟನೆ ಆ.1ರಂದು ರಾತ್ರಿ ನಡೆದಿದೆ.

ಅಪಘಾತದಿಂದಾಗಿ ರಿಕ್ಷಾ ಪಲ್ಟಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಕೌಡಿಚ್ಚಾರಿನಲ್ಲಿ ಎಸ್.ಎಂ. ಬಿಲ್ಡಿಂಗ್‌ ನಲ್ಲಿ ದುರ್ಗಾಪ್ರಸಾಸ್ ಹೊಟೇಲ್ ನಡೆಸುತ್ತಿದ್ದ ಪಾಪೆಮಜಲು ಪಾದೆಲಡಿ ನಿವಾಸಿ ಸುಭಾಶ್(53ವೆ.)ರವರು ಮೃತಪಟ್ಟವರು.

ಸುಭಾಶ್ ಅವರು ರಾತ್ರಿ ಹೊಟೇಲ್ ಬಂದ್ ಮಾಡಿ ಮನೆಗೆಂದು ಆಟೋ ರಿಕ್ಷಾದಲ್ಲಿ ಹೋಗಿ ಮನೆಯ ಸಮೀಪ ರಿಕ್ಷಾದಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಪೆರಿಗೇರಿ ಕಡೆಯಿಂದ ಬಂದ ಇನ್ನೊಂದು ಆಟೋ ರಿಕ್ಷಾ(ಕೆಎ21 ಬಿ 9249) ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸುಭಾಷ್ ಅವರು ಗಂಭೀರ ಗಾಯಗೊಂಡಿದ್ದರು.ಡಿಕ್ಕಿಯಾದ ಬೆನ್ನಲ್ಲೇ ಚಾಲಕ ಅಶೋಕ್ ಅದರ ನಿಯಂತ್ರಣ ಕಳೆದುಕೊಂಡು ರಿಕ್ಷಾ ಪಲ್ಟಿಯಾಗಿತ್ತು.

ತಕ್ಷಣವೇ ನೆರವಿಗೆ ಧಾವಿಸಿದ ಕೌಡಿಚ್ಚಾರು ಆಟೋ ರಿಕ್ಷಾ ಚಾಲಕರು ಮತ್ತು ಸ್ಥಳೀಯರಾದ ಸಂತೋಷ್‌, ಅಶ್ರಫ್‌ ಮತ್ತು ಸ್ಥಳೀಯರಾದ ಉಮೇಶ್‌ ಅವರು ತೀವ್ರ ಗಾಯಗೊಂಡಿದ್ದ ಸುಭಾಷ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಮೃತ ಸುಭಾಷ್ ಹಾಗೂ ಅವರ ಪತ್ನಿ ಬೇಬಿಯವರು ಕಳೆದ ಕೆಲವು ವರ್ಷಗಳಿಂದ ಕೌಡಿಚ್ಚಾರ್‌ ನಲ್ಲಿ ಹೊಟೇಲ್ ನಡೆಸುತ್ತಿದ್ದರು.ಬೇಬಿಯವರು ಸಂಜೆ ವೇಳೆಗೆ ಕಾಲೇಜಿನಿಂದ ಬಂದ ಮಗಳೊಂದಿಗೆ ಹೊಟೇಲ್ ನಿಂದ ಮನೆಗೆ ಹೋಗಿದ್ದರು.ಸುಭಾಷ್ ಅವರು ರಾತ್ರಿ ಹೊಟೇಲ್ ಬಂದ್ ಮಾಡಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಮೃತರು ಪತ್ನಿ ಬೇಬಿ ಹಾಗೂ ಕುಂಬ್ರ ಸ.ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪುತ್ರಿ ನಿಶ್ಚಿತಾ ಅವರನ್ನು ಅಗಲಿದ್ದಾರೆ.ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

LEAVE A REPLY

Please enter your comment!
Please enter your name here