ಪುತ್ತೂರು:ಕೆದಿಲ ಗ್ರಾಮದ ಕಾಂತುಕೋಡಿ ತೋಡಿನಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗಂಡನ ಅಣ್ಣನಿಂದ ಕೊಲೆ: ಪ್ರಕರಣ ದಾಖಲು:
ಮಮತಾ ಅವರನ್ನು ಆಕೆಯ ಗಂಡ ಗಣಪತಿ ಯಾನೆ ರಾಮಣ್ಣ ಗೌಡರ ಅಣ್ಣ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಾಗಿದೆ.ಮಮತಾ ಅವರ ಪತಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ‘ನನ್ನ ಪತ್ನಿ ಮಮತಾಳನ್ನು ನನ್ನ ಸಹೋದರನಾದ ಲೋಕಯ್ಯ ಯಾನೆ ಸುಂದರ, ಆತನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ನನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾ ಮೃತಪಟ್ಟಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ.ಪೊಲೀಸರು ಕಲಂ: 115(2),103(1)BNS 2023ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ನಾಪತ್ತೆ:
ಮಮತಾ ಅವರ ಮೃತದೇಹ ಪತ್ತೆಯಾದ ವೇಳೆಗಾಗಲೇ ಆರೋಪಿ ಸುಂದರ ಗೌಡ ಯಾನೆ ಲೋಕಯ್ಯ ಗೌಡ ಕೂಡಾ ನಾಪತ್ತೆಯಾಗಿದ್ದ. ಮಮತಾ ಅವರ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಕೂಡಾ ಕಾಣೆಯಾಗಿತ್ತು.ಸುಮಾರು ಮೂರೂವರೆ ಪವನ್ ಚಿನ್ನದ ಕರಿಮಣಿ ಸರ ಇದಾಗಿತ್ತು.
ಚಪ್ಪಲಿ ಪತ್ತೆ:
ನಾಪತ್ತೆಯಾಗಿರುವ ಆರೋಪಿಯ ಬಾರ ಕಡಿದ ಚಪ್ಪಲಿ ಕಾಡಿನಲ್ಲಿ ಪತ್ತೆಯಾಗಿದೆ. ಪೊಲೀಸರು ಆರೋಪಿಯ ಹುಡುಕಾಟಕ್ಕೆ ಕಾಡಿನೊಳಗೆ ಹೋಗುತ್ತಿದ್ದ ವೇಳೆ ಚಪ್ಪಲಿ ಪತ್ತೆಯಾಗಿತ್ತು. ಇದು ತನ್ನ ತಂದೆಯ ಚಪ್ಪಲಿ ಎಂದು ಲೋಕಯ್ಯ ಗೌಡರ ಪುತ್ರರು ಗುರುತಿಸಿರುವುದಾಗಿ ತಿಳಿದು ಬಂದಿದೆ.
ಪೊಲೀಸರ ಹುಡುಕಾಟ:
ಬೆಳಗ್ಗಿನಿಂದಲೇ ಪೊಲೀಸರು ಸ್ಥಳೀಯರ ಜೊತೆ ಕೆದಿಲ ಕಾಡು ದಾರಿ ಮತ್ತು ತೋಡು ಬದಿಯಲ್ಲಿ ಲೋಕಯ್ಯ ಗೌಡನಿಗಾಗಿ ಹುಡುಕಾಟ ನಡೆಸಿದ್ದಾರೆ.ಸಂಜೆ ವೇಳೆ ಹುಡುಕಾಟವನ್ನು ನಿಲ್ಲಿಸಿದ್ದು ಆ.8ರಂದು ಬೆಳಗ್ಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಳಕುಮೇರಿ ಗಣಪತಿ ಯಾನೆ ರಾಮಣ್ಣ ಗೌಡರು ಆ.6ರಂದು ಕೂಲಿ ಕೆಲಸಕ್ಕೆಂದು ಹೊರಟಿದ್ದು ಆ ಸಮಯ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಮನೆಯ ಹತ್ತಿರದ ಶಂಕರ ಭಟ್ಟರ ಮನೆಗೆ ಹೋಗಿದ್ದರು. ಗಣಪತಿ ಯಾನೆ ರಾಮಣ್ಣ ಗೌಡರು ಕೆಲಸಕ್ಕೆ ಹೋಗುವ ಸಮಯ ಮಳೆ ಬರುತ್ತಿದ್ದುದರಿಂದ ರೈನ್ ಕೋಟ್ ತರಲೆಂದು ಪತ್ನಿ ಮಮತಾ ಅವರಿಗೆ ಕರೆ ಮಾಡಿದ್ದರು.ಆ ವೇಳೆ ಮಮತಾ ಅವರು ಮನೆಯಲ್ಲಿರದೆ ರಾಮಣ್ಣ ಅವರ ತಾಯಿ ಕರೆಯನ್ನು ಸ್ವೀಕರಿಸಿ, ಮಮತಾ ಬಟ್ಟೆ ತೊಳೆಯಲು ಮನೆಯ ಪಕ್ಕದ ನೀರಿನ ತೋಡಿಗೆ ಹೋಗಿದ್ದಾಗಿ ತಿಳಿಸಿದ್ದರು.ಬಳಿಕ ರಾಮಣ್ಣ ಅವರೇ ಮನೆಗೆ ಬಂದು ರೈನ್ ಕೋಟ್ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 1.30 ಗಂಟೆಗೆ ಮನೆಗೆ ಬಂದಾಗ ಹೆಂಡತಿ ಮಮತಾಳು ಮನೆಗೆ ಬಾರದೇ ಇರುವುದನ್ನು ಕಂಡು ಬಟ್ಟೆ ತೊಳೆಯುವ ನೀರಿನ ತೋಡಿಗೆ ಹೋಗಿ ನೋಡಿದಾಗ ಮಮತಾಳು ತೊಳೆಯಲು ಕೊಂಡು ಹೋದ ಬಟ್ಟೆಯು ಬಕೆಟ್ ನಲ್ಲಿ ಇರುವುದನ್ನು ಕಂಡು ಮದುತಾಳನ್ನು ಜೋರಾಗಿ ಕೂಗಿ ಕರೆದೆ. ಆದರೆ ಕರೆಗೆ ಆಕೆ ಸ್ಪಂದಿಸದೇ ಇರುವುದನ್ನು ಕಂಡು ತನ್ನ ಮೇಸ್ತ್ರಿ ಪದ್ಮಣ್ಣ ಅವರಿಗೆ ತಿಳಿಸಿ ನಂತರ ಆಸುಪಾಸಿನವರೆಲ್ಲ ಕೂಡಿ ಗುಡ್ಡ ಪ್ರದೇಶ ಮತ್ತು ನೀರಿನ ತೋಡಿನಲ್ಲಿ ಮಮತಾಳನ್ನು ಹುಡುಕುತ್ತಾ ಹೋದಾಗ ಸಾಯಂಕಾಲ 5.45 ಗಂಟೆಗೆ ಹಾರಕೆರೆ ಮತ್ತು ಬೀಟಿಗೆ ನೀರಿನ ತೋಡು ಕೂಡುವ ಸ್ಥಳದ ಕಾಂತುಕೋಡಿ ಎಂಬಲ್ಲಿ ಮಮತಾಳ ಮೃತ ದೇಹವು ನೀರಿನಲ್ಲಿ ಕಲ್ಲಿಗೆ ತಾಗಿ ತೇಲುತ್ತಿರುವುದು ಕಂಡು ಬಂದಿತ್ತು. ನಂತರ ನಾನು ಮತ್ತು ಇತರರು ಸೇರಿ ಮಮತಾಳ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಸಮೀಪದಲ್ಲಿ ಇಟ್ಟು ಮೃತದೇಹವನ್ನು ವೀಕ್ಷಿಸಿದಾಗ ಬಲ ಕಣ್ಣಿನ ಕೆಳಗಡೆ ರಕ್ತ ಹೆಪ್ಪುಗಟ್ಟಿದಂತೆ ಕಂಡು ಬಂದಿತ್ತು ಎಂದು ಆರಂಭದಲ್ಲಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು.ತನಿಖೆ ನಡೆಸಿರುವ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.