





ಪುತ್ತೂರು; ಜಿಡೆಕಲ್ಲು ಕಾಲೇಜು ಪರಿಸರದ ಸುಮಾರು 10 ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ, ಈ ಹಿಂದೆ ನೀರು ಪೂರೈಕೆಯಾಗುತ್ತಿದ್ದರೂ ಕೆಲವು ಎಡವಟ್ಟಿನಿಂದ ಆ ಭಾಗಕ್ಕೆ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ನಗರಸಭೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಸಮಸ್ಯೆ ಪರಿಹಾರವಾಗುವ ತನಕ ದಿನ ನಿತ್ಯ ಟ್ಯಾಂಕರಲ್ಲಿ ನೀರು ಪೂರೈಕೆ ಮಾಡಬೇಕು ಎಂದು ನಗರಸಬಾ ಕಮಿಷನರ್ಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.


ಕುಡಿಯುವ ನೀರಿಗೆ ತೊಂದರೆಯಾಗಿದೆ, ವಾರಕ್ಕೆ ಎರಡು ದಿನ ಮಾತ್ರ ನಮಗೆ 500 ಲೀಟರ್ ನೀರು ಬರುತ್ತಿದೆ. ಈ ಬಗ್ಗೆ ನಾವು ಜಲಸಿರಿ ಅಧಿಕಾರಿಗೆ ಕರೆ ಮಾಡಿದರೂ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಇಲ್ಲ ಎಂದು ಆ ಭಾಗದ ಹತ್ತು ಮನೆಯ ಮಹಿಳೆಯರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದರು. ದೂರು ನೀಡಿರುವ ಮಹಿಳೆಯರನ್ನು ಕಚೇರಿಗೆ ಕರೆಸಿ ಅಧಿಕಾರಿಗಳ ಸಮಕ್ಷಮ ಸಮಸ್ಯೆಯ ಬಗ್ಗೆ ಶಾಸಕರು ವಿವರಣೆ ಪಡೆದರು. ಈ ವೇಳೆ ಮಾಹಿತಿ ನೀಡಿದ ಜಲಸಿರಿ ವಿಭಾಗದ ಅಧಿಕಾರಿಗಳು ಅಲ್ಲಿರುವ ಕೊಳವೆ ಬಾವಿ ಕೆಟ್ಟು ಹೋದ ಕಾರಣ ನೀರಿನ ಸಮಸ್ಯೆಯಾಗಿದೆ ಎಂದು ಶಾಸಕರಲ್ಲಿ ತಿಳಿಸಿದರು. ಕೊಳವೆ ಬಾವಿ ದುರಸ್ಥಿ ಅಥವಾ ಆ ಹತ್ತು ಮನೆಗಳಿಗೆ ನಿತ್ಯ ನೀರು ಪೂರೈಕೆ ವ್ಯವಸ್ಥೆಯಾಗುವ ತನಕ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.





ಜಿಡೆಕಲ್ಲು ಕಾಲೇಜು ಪರಿಸರದ ಹತ್ತು ಮನೆಗಳ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಲಾಗಿದೆ, ಇಲ್ಲಿನ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಒದಗಿಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಇರಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅದೆಲ್ಲವನ್ನೂ ಪರಿಶೀಲಿಸಿ ಪರಿಹಾರ ಒದಗಿಸುವಂತೆ ಅಧಿಕಾರಿಗೆ ಸೂಚನೆಯನ್ನು ನೀಡಿದ್ದೇನೆ.
ಅಶೋಕ್ ರೈ ಶಾಸಕರು ಪುತ್ತೂರು








