ದ.ಕ, ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಕಾಫಿ ಬೆಳೆಗಾರರ ಮಾಹಿತಿ ಶಿಬಿರ ; ಸಮಾವೇಶ

0

ಕಾಣಿಯೂರು: ದ.ಕ., ಕಾಸರಗೋಡು ಜಿಲ್ಲೆಗಳಲ್ಲಿ ಕಾಳುಮೆಣಸು ಹಾಗೂ ಕಾಫಿ ಬೆಳೆದು ರೈತರು ಆರ್ಥಿಕ ಶಕ್ತಿ ಪಡೆಯಲು ವ್ಯಾಪಕ ಅವಕಾಶವಿದ್ದು, ಬೆಳೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಶ್ರೀಲಂಕಾ ಹಾಗೂ ವಿಯೆಟ್ನಾಂನಿಂದ ಕಾಳಸಂತೆಯಲ್ಲಿ ಕಾಳುಮೆಣಸು ಭಾರತಕ್ಕೆ ಬರುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆ ಕೇಂದ್ರ ಸರಕಾರದ ಜತೆ ಪ್ರಯತ್ನ ಮಾಡುತ್ತಿದೆ. ಹಳದಿ ರೋಗ ನಿವಾರಣೆಗೆ ಪ್ರಯತ್ನ, ಕೃಷಿಕರಿಗೆ ಬೇಕಾದ ಪೂರಕ ವ್ಯವಸ್ಥೆ, ಕಾಫಿಯ ಬೆಳೆಯ ಬಗ್ಗೆಯೂ ಕ್ಯಾಂಪ್ಕೋ ಸಂಸ್ಥೆಯು ಗಮನ ಹರಿಸುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.


ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ವತಿಯಿಂದ ಪುತ್ತೂರಿನ ಸುಭದ್ರಾ ಸಭಾ ಮಂದಿರದಲ್ಲಿ ಆ.10ರಂದು ನಡೆದ ‘ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೊರೋನಾ ಅನಂತರದಲ್ಲಿ ಅಡಿಕೆ ದರ ಕುಸಿಯದಂತೆ ಕಾಪಾಡುವಲ್ಲಿ ಕ್ಯಾಂಪ್ಕೋ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಅಡಿಕೆ, ಕಾಳುಮೆಣಸು, ಕೊಕ್ಕೋ ದರದ ಸ್ಥಿರತೆ ಸಾಧಿಸುವಲ್ಲಿ ಕ್ಯಾಂಪ್ಕೋ ಪ್ರಯತ್ನ ನಿರಂತರವಾಗಿರಲಿದೆ ಎಂದು ಹೇಳಿದ ಕೊಡ್ಗಿ, ರೋಗ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯುವ ಕುರಿತು ದ.ಕ. ಸಂಸದ ಬ್ರಿಜೇಶ್ ಚೌಟ ಅವರೂ ಸಿಪಿಸಿಆರ್‌ಐ ವಿಜ್ಞಾನಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದರು.


ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ:
ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ| ವೇಣುಗೋಪಾಲ್ ಅವರು ಸಮಗ್ರ ಕಾಳುಮೆಣಸು ಬೆಳೆಯುವ ಮಾಹಿತಿ ಮತ್ತು ಸಂರಕ್ಷಣಾ ವಿಧಾನದ ಬಗ್ಗೆ ವಿಷಯ ಮಂಡಿಸಿದರು. ಸೆವೆನ್ ಬೀನ್ ಟೀಮ್ ಇದರ ಮುಖ್ಯಸ್ಥ ಡಾ| ಎಚ್.ಎಸ್.ಧರ್ಮರಾಜ್ ಸಕಲೇಶಪುರ ಅವರು ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಬಗ್ಗೆ, ಇಂಧೋರ್‌ನ ಶ್ರೀ ಸಿದ್ಧಿ ಅಗ್ರಿ ಕಂಪೆನಿ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಪೆರುವೋಡಿ ನಾರಾಯಣ ಭಟ್ ಅವರು ಅಡಿಕೆ ಬೆಳೆಯುವ ವಿಧಾನ ಮತ್ತು ಪೋಷಕಾಂಶಗಳ ಸಮಗ್ರ ಮಾಹಿತಿ ನೀಡಿದರು. ಅಡಿಕೆ ಮತ್ತು ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು, ಅರವಿಂದ ಮುಳ್ಳಂಕೊಚ್ಚಿ ಆಲಂಕಾರು, ಪ್ರಗತಿಪರ ಕಾಳುಮೆಣಸು ಕೃಷಿಕ ಡಾ| ವೇಣುಗೋಪಾಲ್ ಕಳೇಯತೋಡಿ, ಧೂಪದ ಮರದಲ್ಲಿ ಕಾಳುಮೆಣಸು ಕೃಷಿ ಮಾಡಿದ ಸಾಧಕ ಅನಂತರಾಮಕೃಷ್ಣ ಪಳ್ಳತ್ತಡ್ಕ, ಅಡಿಕೆ ಮರ ಏರುವ ಯಂತ್ರವನ್ನು ಆವಿಷ್ಕರಿಸಿದ ಕೋಮಲೆ ಗಣಪತಿ ಭಟ್, ಕಾಳುಮೆಣಸು ಕಸಿ ಕಟ್ಟಿ ಬೆಳೆಸಿದ ಅನುಭವಿ ಕೃಷಿಕೆ ಸ್ವಪ್ನಾ ಸೇಡಿಯಾಪು, ಕಾರ್ಯಕ್ರಮದ ಸಂಯೋಜಕ ಶಶಿಕುಮಾರ್ ಭಟ್ ಪಡಾರು ಉಪಸ್ಥಿತರಿದ್ದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನುಭವಿ ಕೃಷಿಕರಿಂದ ಮಾಹಿತಿ ವಿನಿಮಯ ಹಾಗೂ ಗೋಷ್ಠಿ ನಡೆಸಿದ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ನಡೆಯಿತು.


ಸನ್ಮಾನ:
ಈ ಸಂದರ್ಭದಲ್ಲಿ ಪ್ರಗತಿಪರ ಅಡಿಕೆ, ಕಾಳುಮೆಣಸು ಮತ್ತು ಪ್ರಗತಿಪರ ಕಾಫಿ ಬೆಳೆಗಾರ ಅಜಿತ್ ಪ್ರಸಾದ್ ರೈ ಮತ್ತು ಸವಿತಾ ರೈ ದಂಪತಿ ಮತ್ತು ಇಂದೋರ್ ಶ್ರೀ ಅಗ್ರಿ ಕಂಪೆನಿಯ ಪೆರುವೋಡಿ ನಾರಾಯಣ್ ಭಟ್ ಅವರನ್ನು ಸನ್ಮಾನಿಸಲಾಯಿತು. ಮೇಘಶ್ಯಾಮ ಅಗ್ರಿ ಮತ್ತು ಗೋವಿಂದ ಭಟ್ ಬಾಯಾಡಿ ಅವರು ಸನ್ಮಾನ ಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here