ತೆಂಕಿಲ ಕಟ್ಟತ್ತಾರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 2.50 ಎಕ್ರೆ ಜಮೀನು ಮರು ಸ್ವಾಧೀನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಂಡಾರದ ಹೆಸರಿನಲ್ಲಿ ಹಲವು ಕಡೆ ಜಮೀನುಗಳಿದ್ದರೂ ಬಹುತೇಕ ಕಡೆಗಳಲ್ಲಿ ಇತರರ ಸ್ವಾಧೀನದಲ್ಲಿದ್ದು ಅದನ್ನು ಮತ್ತೆ ದೇವಸ್ಥಾನದ ವಶಕ್ಕೆ ಪಡೆಯುವ ಕೆಲಸ ಸರಕಾರದ ಆದೇಶದಂತೆ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದಲ್ಲಿ ನಡೆಯುತ್ತಿದ್ದು ಆ.10ರಂದು ತೆಂಕಿಲ ಕಟ್ಟತ್ತಾರಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಎಕ್ರೆ ಜಮೀನನ್ನು ಮರು ಸ್ವಾಧೀನ ಪಡೆಯಲಾಯಿತು. ಮರು ಸ್ವಾಧೀನ ಪಡಿಸಿದ ಜಾಗಕ್ಕೆ ದೇವಳದ ವತಿಯಿಂದ ಫಲಕ ಹಾಕಿ ಸುತ್ತಲೂ ಬೇಲಿ ಹಾಕುವ ವ್ಯವಸ್ಥೆ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರು ತೆಂಕಿಲ ಕಟ್ಟಾತ್ತಾರು ಎಂಬಲ್ಲಿ ದೇವಸ್ಥಾನದ ಸ್ವಾಧೀನದ ಭೂಮಿಗೆ ಬಂದು ಅಲ್ಲಿದ್ದವರಲ್ಲಿ ಮನೆ ತೆರವು ಮಾಡುವಂತೆ ಮನವಿ ಮಾಡಿದರು. ಈ ಜಾಗದಲ್ಲಿ ಮನೆ ಮಾಡಿ ಸುಮಾರು 70ವರ್ಷದಿಂದ ವಾಸ್ತವ್ಯವಿದ್ದವರ ಪೈಕಿ ಬಹಳಷ್ಟು ಮಂದಿ ದೇವಸ್ಥಾನದ ಚಾಕ್ರಿ ಮಾಡುವವರಾಗಿದ್ದು, ಅವರೆಲ್ಲ ನಮಗೆ ಬೇರೆ ಮನೆಯಿಲ್ಲ ಎಂದು ಶಾಸಕರಲ್ಲಿ ಮನವಿ ಮಾಡಿದರು. ಹಿರಿಯ ಮಹಿಳೆಯೊಬ್ಬರು ಮತ್ತು ನಾಲ್ಕೈದು ಮಂದಿ ಮಕ್ಕಳು ಮನೆ ಕಳೆದುಕೊಳ್ಳುವ ಭಯದಲ್ಲಿ ಅತ್ತರು. ಈ ಸಂದರ್ಭ ಶಾಸಕರು ಅವರನ್ನು ಸಮಾಧಾನಿಸಿ ಮಾತನಾಡಿ, ನಾವು ಮಾನವೀಯತೆ ನೆಲೆಯಲ್ಲಿ ನಿಮಗೆ ಮನೆಯನ್ನು ಬಿಟ್ಟು ಕೊಡುತ್ತೇವೆ. ಆದರೆ ಖಾಲಿ ಸ್ಥಳ ಮತ್ತು ಕೃಷಿ ಭೂಮಿಯನ್ನು ದೇವಸ್ಥಾನಕ್ಕೆ ಮರು ಸ್ವಾಧೀನ ಪಡಿಸುತ್ತೇವೆ ಎಂದರು. ಜೊತೆಗೆ ನೀವು ಮನೆ ಮಾಡಿ ವಾಸ್ತವ್ಯವಿರುವ ಅಡಿ ಸ್ಥಳ ದೇವಸ್ಥಾನದ ಭಂಡಾರದ ಹೆಸರಿನಲ್ಲಿದೆ. ನಿಮಗೆ ಒಂದಲ್ಲಾ ಒಂದು ದಿನ ಸಮಸ್ಯೆ ಬಂದೇ ಬರುತ್ತದೆ. ಸರಕಾರದಿಂದ ನೋಟೀಸ್ ಜಾರಿ ಆಗಿಯೇ ಆಗುತ್ತದೆ. ಆದ್ದರಿಂದ ನೀವು ಮುಂದಾಲೋಚನೆ ಮಾಡಿಕೊಂಡು ಬೇರೆ ಸ್ಥಳ ಮಾಡಿಕೊಳ್ಳುವುದು ಉತ್ತಮ ಎಂದರು. ಇಲ್ಲಾಂದ್ರೆ ಪಂಚಾಯತ್ ಮಟ್ಟದಲ್ಲಿ ಸರಕಾರಿ ಸ್ಥಳವಿದೆ. ಈಗಲೇ ಅರ್ಜಿ ಸಲ್ಲಿಸಿ ಎಂದರು.

ಖಾಲಿ ಸ್ಥಳ ವಶಕ್ಕೆ ಪಡೆದು ಮಾನವೀಯತೆ ನೆಲೆಯಲ್ಲಿ ಮನೆ ಬಿಟ್ಟಿದ್ದೇವೆ
ಶಾಸಕ ಅಶೋಕ್ ಕುಮಾರ್ ರೈ ಅವರು ಮಾಧ್ಯಮದವರ ಜೊತೆ ಮಾತನಾಡಿ, ದೇವಸ್ಥಾನಕ್ಕೆ ಸೇರಿದ ಸುಮಾರು 15.5 ಎಕ್ರೆ ಜಾಗ ಬೇರೆ ಬೇರೆಯವರ ಕೈಯಲ್ಲಿತ್ತು. ಹಂತ ಹಂತವಾಗಿ ದೇವಸ್ಥಾನದ ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದೇವೆ. ತೆಂಕಿಲದಲ್ಲಿ ಸುಮಾರು ಎರಡೂವರೇ ಎಕ್ರೆಯಷ್ಟು ಜಾಗಕ್ಕೆ ದೇವಸ್ಥಾನದಿಂದ ಬೇಲಿ ಹಾಕುವ ಕೆಲಸ ಆಗಿದೆ. ಆದರೆ ಇಲ್ಲಿ ತುಂಬಾ ವರ್ಷದಿಂದ ದೇವಸ್ಥಾನದ ಕೆಲಸ ಮಾಡುವ ಹತ್ತು ಹದಿನೈದು ಕುಟುಂಬ ಮನೆ ಮಾಡಿ ವಾಸ್ತವ್ಯವಿದ್ದಾರೆ. ನಾವು ಅವರಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಅದರಲ್ಲಿ ಬಡವರು ಇದ್ದಾರೆ. ಅವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ಅವರು ಇಲ್ಲಿ ಎಷ್ಟು ದೊಡ್ಡ ಮನೆ ಕಟ್ಟಿದರೂ ಅದು ಒಂದಲ್ಲ ಒಂದು ದಿನ ದೇವಸ್ಥಾನಕ್ಕೆ ಹೋಗುತ್ತದೆ ಎಂದು ವಿವರವಾಗಿ ತಿಳಿಸಿದ್ದೇವೆ. ಪಂಚಾಯತ್ ಮಟ್ಟದಲ್ಲಿ 3 ಸೆಂಟ್ಸ್ ಸರಕಾರಿ ಸ್ಥಳ ಕೊಡುವ ಕೆಲಸ ಮಾಡುತ್ತೇವೆ. ಅವರು ಅಲ್ಲಿ ಅದನ್ನು ಪಡೆಯುವ ಕೆಲಸ ಮಾಡಬೇಕು. ಮಾನವೀಯತೆಯ ದೃಷ್ಟಿಯಿಂದ ಅವರನ್ನು ತೆರವು ಮಾಡುವ ಕೆಲಸ ಮಾಡುವುದಿಲ್ಲ. ಮುಂದಿನ ದಿನ ಸರಕಾರದಿಂದ ಏನಾದರು ಪರಿಹಾರ ಕೊಡಬಹುದಾ ಎಂಬ ಬಗ್ಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಈಗ ಇಲ್ಲಿ ಮನೆ ಕಟ್ಟಿದವರ ಮುಂದಿನ ಪೀಳಿಗೆಗೆ ಯಾವುದೇ ಆಸ್ತಿ ಸಿಗುವುದಿಲ್ಲ. ಆದರೆ ಇಲ್ಲಿ ಯಾರೆಲ್ಲ ಕೃಷಿ ಮಾಡಿದ್ದಾರೋ ಅದನ್ನು ದೇವಸ್ಥಾನಕ್ಕೆ ವಾಪಾಸು ಪಡೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.


ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ರಂಜಿತ್ ಬಂಗೇರ, ಲೋಕೇಶ್ ಪಡ್ಡಾಯೂರು, ದೇವಸ್ಥಾನದ ಭದ್ರತಾ ಸಿಬ್ಬಂದಿ ವಸಂತ, ಲೋಕೇಶ್ ತೆಂಕಿಲ ಸಹಿತ ದೇವಳದ ಚಾಕ್ರಿ ಮಾಡುವವರು ಉಪಸ್ಥಿತರಿದ್ದರು.

ಬಡವರನ್ನು ಎಬ್ಬಿಸುವ ಪ್ರಶ್ನೆಯೇ ಇಲ್ಲ

ತೆಂಕಿಲದಲ್ಲಿ ಸುಮಾರು 2.5ಎಕ್ರೆ ಜಮೀನು ದೇವಸ್ಥಾನಕ್ಕೆ ಮರು ಸ್ವಾಧೀನ ಮಾಡಿದ್ದೇವೆ. ಈ ಜಾಗದಲ್ಲಿ ನಾಲ್ಕೈದು ಮನೆಗಳು ಇವೆ. ಆ ಮನೆಯವರನ್ನು ಎಬ್ಬಿಸುವುದಿಲ್ಲ. ಅವರಿಗೆ ಧೈರ್ಯ ಕೊಡುವ ಕೆಲಸವನ್ನು ಶಾಸಕರು ಮತ್ತು ನಮ್ಮ ಸಮಿತಿಯವರು ಮಾಡಿದ್ದೇವೆ. ದೇವಸ್ಥಾನದ ಜಾಗದಲ್ಲಿದ್ದವರು ಬಿಟ್ಟುಕೊಟ್ಟರೆ ಅವರಿಗೆ ವ್ಯವಸ್ಥೆ ಮಾಡುವ ಕುರಿತು ಸಚಿವರಲ್ಲಿ ಪ್ರಸ್ತಾಪಿಸಿದ್ದೇವೆ. ಸರಕಾರದಿಂದ ಅದಕ್ಕೆ ಉತ್ತರ ಬಂದಿಲ್ಲ. ಹಾಗಾಗಿ ದೇವಸ್ಥಾನದ ಜಾಗದಲ್ಲಿ ಬಡವರು ವಾಸ್ತವ್ಯವಿದ್ದರೆ ಅವರನ್ನು ಎಬ್ಬಿಸುವ ಕೆಲಸಕ್ಕೆ ಹೋಗುವುದಿಲ್ಲ. ಬಡವರಿಗೆ ಬೇರೆ ವ್ಯವಸ್ಥೆ ಮಾಡಬೇಕು. ನಾನು ಬಡವರ ಜೊತೆ ಇದ್ದೇನೆ. ಖಾಲಿ ಜಾಗವನ್ನು ಸ್ವಾಧೀನ ಮಾಡುತ್ತೇವೆ. ನಮ್ಮ ಸಮಿತಿ ಬಂದ ಬಳಿಕ ಸುಮಾರು 7 ಎಕ್ರೆ ಜಾಗವನ್ನು ದೇವಸ್ಥಾನದ ಮರು ವಶಕ್ಕೆ ಮಾಡಿದ್ದೇವೆ. ಅದರ ಅಂದಾಜು ಮೊತ್ತ ಸುಮಾರು 60 ಕೋಟಿ ರೂಪಾಯಿ ಆಗಬಹುದು. ಇನನು ನಾಲ್ಕು ಕಡೆ ಜಾಗ ಇದೆ. ತೆಂಕಿಲ, ನೆಲ್ಲಿಕಟ್ಟೆ, ಕೊಂಬೆಟ್ಟು ಹಾಗೂ ಮಯೂರ ಚಿತ್ರಮಂದಿರ ಬಳಿಯೂ ಇದೆ. ಅಲ್ಲಿ ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಮರು ಸ್ವಾಧೀನ ಪಡಿಸುವ ಕಾರ್ಯ ಮುಂದುವರಿಯಲಿದೆ.
ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here