ಪುತ್ತೂರು: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ವತಿಯಿಂದ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಆ.18ರಿಂದ 19ರವರೆಗೆ ಕರ್ನಾಟಕ ಸರ್ಕಾರದ ಆರ್‌ಕೆವಿವೈ ರಾಫ್ಟಾರ್ ಪ್ರಾಯೋಜಿಸಿದ ಗೇರು ಬೆಳೆಯಲ್ಲಿ ನರ್ಸರಿ ನಿರ್ವಹಣಾ ತಂತ್ರಜ್ಞಾನಗಳ ಕುರಿತು ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಆಯೋಜಿಸಿತು.
ತರಬೇತುದಾರರಿಗೆ ಸಯಾನ್ ಬ್ಯಾಂಕ್ ಸ್ಥಾಪನೆ, ಕಸಿ ಕಟ್ಟುವಿಕೆ ಮತ್ತು ಗೇರು ಕಸಿ ಗಿಡಗಳ ನಂತರದ ಆರೈಕೆಯ ಅವಧಿಗಳನ್ನು ಒಳಗೊಂಡಂತೆ ನರ್ಸರಿ ನಿರ್ವಹಣೆಯ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಜೆ. ದಿನಕರ ಅಡಿಗರವರು ಕಾರ್ಯಕ್ರಮ ಉದ್ಘಾಟಿಸಿ ಗುಣಮಟ್ಟದ ಗೇರು ಕಸಿ ಗಿಡಗಳ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನರ್ಸರಿಗಳ ಪಾತ್ರ ಮತ್ತು ಗೇರು ಮತ್ತು ಕೋಕೋ ನಿರ್ದೇಶನಾಲಯದ (ಡಿಸಿಸಿಡಿ) ಮಾನ್ಯತೆಯ ಅಗತ್ಯವನ್ನು ತಿಳಿಸಿದರು.
ಭಾರತ ಅಗ್ರಿ ಡೆವಲಪ್ಮೆಂಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವಿಟ್ಲ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಶೆಟ್ಟಿ, ತರಬೇತಿ ಕಾರ್ಯಕ್ರಮದ ಸಂಯೋಜಕಿ ಡಾ. ಅಶ್ವತಿ ಚಂದ್ರಕುಮಾರ್, ಸಹ-ಸಂಯೋಜಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಭಾಗ್ಯ ಎಚ್.ಪಿ., ಹಿರಿಯ ವಿಜ್ಞಾನಿ ಡಾ. ಈರದಾಸಪ್ಪ ಇ, ಉಪಸ್ಥಿತರಿದ್ದರು.
ಮೊದಲ ದಿನ ಡಾ. ಈರದಾಸಪ್ಪ ಮತ್ತು ಡಾ. ಭಾಗ್ಯ ಎಚ್.ಪಿ., ಸಯಾನ್ ಬ್ಯಾಂಕ್ ಮತ್ತು ಗೇರು ನರ್ಸರಿ ಸ್ಥಾಪನೆ ಮತ್ತು ನಿರ್ವಹಣೆಯ ಕುರಿತು ಉಪನ್ಯಾಸ ನೀಡಿದರು. ನರ್ಸರಿಗೆ ಕರೆದೊಯ್ದು ಉತ್ತಮ ಗುಣಮಟ್ಟದ ಕಸಿಕಡ್ಡಿ (scion stick) ಸಂಗ್ರಹಣೆಯನ್ನು ತೋರಿಸಲಾಯಿತು. ಗೇರಿನಲ್ಲಿ ವಾಣಿಜ್ಯವಾಗಿ ಅಳವಡಿಸಿಕೊಳ್ಳುವ ಮೆದುಕಾಂಡ ಕಸಿ ಕಟ್ಟುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಎರಡನೇ ದಿನ ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ. ರಾಜಶೇಖರ ಎಚ್. ನರ್ಸರಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಕೃಷಿ ಕೀಟಶಾಸ್ತ್ರ ಪ್ರಧಾನ ವಿಜ್ಞಾನಿ ಡಾ. ಟಿ.ಎನ್. ರವಿಪ್ರಸಾದ್‌ರವರು ಸಾಮಾನ್ಯ ಕೀಟಗಳು, ಅವುಗಳ ಲಕ್ಷಣಗಳು ಹಾಗೂ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಗೋಡಂಬಿ ನರ್ಸರಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದು ಹೇಗೆ ಹಾಗೂ ಗೇರು ನರ್ಸರಿಯನ್ನು ಸ್ಥಾಪಿಸುವ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಅಂತಿಮ ಅಧಿವೇಶನದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳ ಜೊತೆಗೆ ಸಿಕೇಚರ್ ಮತ್ತು ಸಮರುವಿಕೆಯ ಕತ್ತರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. ಒಟ್ಟು ಹತ್ತು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.