ನಾಯಿ, ಬೆಕ್ಕು ರಸ್ತೆಗೆ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಿ-ಗ್ರಾಮಸ್ಥರ ಆಗ್ರಹ
ರಾಮಕುಂಜ: ನಾಯಿ, ಬೆಕ್ಕಿನ ಮರಿ, ಹಾವುಗಳನ್ನು ರಸ್ತೆಗೆ ತಂದು ಬಿಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಆ.21ರಂದು ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ (ಪ್ರಭಾರ) ಡಾ.ಅಮಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪ್ರವೀಣ್ ದೇರೆಜಾಲು ಅವರು, ರಸ್ತೆ ಬದಿಯಲ್ಲಿ ನಾಯಿ ಮರಿ, ಬೆಕ್ಕಿನ ಮರಿಗಳನ್ನು ತಂದು ಬಿಡುತ್ತಾರೆ. ಕೆಲವೊಮ್ಮೆ ಹಾವುಗಳನ್ನೂ ತಂದು ಬಿಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಬಶೀರ್, ಸಂಜೀವ ಪೂಜಾರಿಯವರು ಇಂತಹ ಪ್ರಕರಣ ತಡೆಯುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮೋಹನ್‌ಕುಮಾರ್ ಅವರು, ಸಿಸಿ ಕ್ಯಾಮರಾ ಎಲ್ಲಾ ಕಡೆ ಅಳವಡಿಸಲು ಸಾಧ್ಯವಿಲ್ಲ. ಗ್ರಾಮಸ್ಥರಿಗೇ ಅರಿವು ಆಗಬೇಕು. ರಸ್ತೆ ಬದಿ ತ್ಯಾಜ್ಯ ಎಸೆಯುವವರಿಗೆ 10 ಸಾವಿರ ರೂ.ದಂಡ ವಿಧಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು. ಮನೆ ಮನೆಗಳಿಂದ ಒಣಕಸ ಸಂಗ್ರಹ ಆರಂಭಿಸಲಾಗುವುದು ಎಂದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ ನಾವೇ ಪಂಚಾಯತ್‌ಗೆ ಮಾಹಿತಿ ನೀಡಬೇಕೆಂದು ಹೇಳಿದರು. ಗ್ರಾಮದ ಆಯಾಕಟ್ಟಿನ ಸ್ಥಳಗಳಲ್ಲಿ ದೂರು ಪೆಟ್ಟಿಗೆ ಇಡುವಂತೆ ಗ್ರಾಮಸ್ಥ ಬಶೀರ್ ಹೇಳಿದರು. ಪಂಚಾಯತ್‌ನಲ್ಲಿ ದೂರು ಪೆಟ್ಟಿಗೆ ಇದ್ದು ಗ್ರಾಮಸ್ಥರು ತಮ್ಮಲ್ಲಿ ಇರುವ ಮಾಹಿತಿಯನ್ನು ಅದರಲ್ಲಿ ಹಾಕಬಹುದು ಎಂದು ಪಿಡಿಒ ಮೋಹನ್‌ಕುಮಾರ್ ಹೇಳಿದರು. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಗೋಳಿತ್ತಡಿಯಲ್ಲಿ ಬಸ್‌ನಿಲ್ದಾಣ ಆಗಬೇಕು;
ಗೋಳಿತ್ತಡಿ ಪೇಟೆಯ ಒಂದು ಬದಿ ಬಸ್‌ನಿಲ್ದಾಣವಿದ್ದು ಇನ್ನೊಂದು ಬದಿ ಬಸ್‌ನಿಲ್ದಾಣವಿಲ್ಲ. ಇದರಿಂದ ಕಡಬ ಭಾಗಕ್ಕೆ ಪ್ರಯಾಣಿಸುವ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಹೊಸದಾಗಿ ಬಸ್‌ನಿಲ್ದಾಣದ ಮಾಡಬೇಕೆಂದು ಸಂಜೀವ ಪೂಜಾರಿ ಹೇಳಿದರು. ಅಲ್ಲಿ ಜಾಗದ ಕೊರತೆ ಇದೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷೆ ಸುಚೇತಾ ಬಿ.ಹೇಳಿದರು. ಪಿಡಬ್ಲ್ಯುಡಿ ಇಲಾಖೆ ಎನ್‌ಒಸಿ ನೀಡಿದಲ್ಲಿ ಗೋಳಿತ್ತಡಿಯಲ್ಲಿ ಬಸ್‌ನಿಲ್ದಾಣ ನಿರ್ಮಾಣ ಮಾಡಲು ನಿರ್ಣಯಿಸಲಾಯಿತು.
ಬಾಂತೊಟ್ಟು ಬೈಲುಗೆ ಮೂಲಸೌಕರ್ಯ ಒದಗಿಸಿ;
ನೆಕ್ಕರೆಯಿಂದ ವಿಶ್ವೇಶಪುರ ಅಶ್ವತ್ಥಕಟ್ಟೆಯಿಂದಾಗಿ ಬಾಂತೊಟ್ಟು ಬೈಲುಗೆ ಸಂಪರ್ಕಿಸುವ ರಸ್ತೆ ಸಮರ್ಪಕವಾಗಿಲ್ಲ. ಅಲ್ಲದೇ ಈ ಭಾಗಕ್ಕೆ ನೀರು, ಬೆಳಕಿನ ವ್ಯವಸ್ಥೆಯೂ ಸರಿಯಾಗಿಲ್ಲ. ಗ್ರಾಮ ಪಂಚಾಯತ್‌ನಿಂದ ರಸ್ತೆ ನಿರ್ವಹಣೆಯೇ ಮಾಡುತ್ತಿಲ್ಲ. ಸದ್ರಿ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಬೇಕೆಂದು ಸ್ಥಳೀಯ ನಿವಾಸಿಯೂ ಆದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಚೇತಾ ಬಿ.ಅವರು ಈ ವಿಚಾರ ಗಮನಕ್ಕೆ ಬಂದಿರಲಿಲ್ಲ. ರಸ್ತೆ ನಿರ್ವಹಣೆ ಮಾಡಲಾಗುವುದು. ಆ ಭಾಗದಲ್ಲಿ ಕುಡಿಯುವ ನೀರಿನ ಬಳಕೆದಾರರು ಇಲ್ಲ ಎಂದರು.
ಸಬ್ ಸ್ಟೇಷನ್ ಕಾಮಗಾರಿಗೆ ವೇಗ;
ಕೊಯಿಲ, ರಾಮಕುಂಜ ಗ್ರಾಮಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಕೊಯಿಲದಲ್ಲಿ 33 ಕೆ.ವಿ.ಸಬ್‌ಸ್ಟೇಷನ್ ನಿರ್ಮಾಣ ಹಂತದಲ್ಲಿದೆ. ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿದಿದೆ. ಉಪ್ಪಿನಂಗಡಿಯಿಂದ ಕೊಯಿಲದ ತನಕ ಕಂಬ ಹಾಕಿ ಲೈನ್ ಎಳೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್, ಕೇಬಲ್ ಲೈನ್ ತಪ್ಪಿಸಿ ರಾಜ್ಯ ಹೆದ್ದಾರಿಯಿಂದ 1 ಮೀ.ದೂರದಲ್ಲಿ ಕಂಬ ಹಾಕಲಾಗಿದೆ. ಇದೀಗ ರಸ್ತೆ ಬದಿ ಕಂಬ ಹಾಕಿರುವ ಸಂಬಂಧ ಪಿಡಬ್ಲ್ಯುಡಿ ಇಲಾಖೆಯಿಂದ ನೋಟಿಸ್ ಬಂದಿದೆ. ಇದಕ್ಕೆ ಉತ್ತರ ನೀಡಲಾಗುವುದು. ಗ್ರಾಮಸ್ಥರೂ ಸಹಕಾರ ನೀಡಬೇಕೆಂದು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ಹೇಳಿದರು.
ಎಸ್‌ಸಿ ಕಾಲೋನಿ ಘೋಷಿಸಿ;
ಹಳೆನೇರೆಂಕಿಯಲ್ಲಿ ಎಸ್‌ಸಿಯವರ 11 ಮನೆ ಇದ್ದರೂ ಎಸ್‌ಸಿ ಕಾಲೋನಿ ಘೋಷಿಸಿಲ್ಲ. ನಾಲ್ಕೈದು ವರ್ಷಗಳಿಂದ ಪ್ರತಿ ಗ್ರಾಮಸಭೆಯಲ್ಲೂ ಪ್ರಸ್ತಾಪಿಸುತ್ತಿದ್ದೇನೆ. ಅಧಿಕಾರಿಗಳು ಪರಿಶೀಲಿಸುತ್ತೇವೆ ಎಂಬ ಭರವಸೆ ಮಾತ್ರ ನೀಡುತ್ತಿದ್ದಾರೆ ಎಂದು ದೇವಕಿ ಹಿರಿಂಜ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಅಕ್ಷತಾ ಅವರು, ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ರಸ್ತೆ ಸಮಸ್ಯೆ-ಚರ್ಚೆ;
ಆನ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ 28 ಸಾವಿರ ರೂ.ಖರ್ಚು ಮಾಡಲಾಗಿದೆ. ಆದರೆ ಸದ್ರಿ ರಸ್ತೆ ನಾದುರಸ್ತಿಯಲ್ಲಿದ್ದು ಸಂಚಾರಕ್ಕೆ ಕಷ್ಟವಾಗುತ್ತಿದೆ ಎಂದು ಪ್ರವೀಣ್ ದೇರೆಜಾಲು ಹೇಳಿದರು. ಸದ್ರಿ ರಸ್ತೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಹಾಕಲಾಗಿದೆ. ಇದರಿಂದ ರಸ್ತೆ ಕೆಟ್ಟುಹೋಗಿದೆ ಎಂದು ಅವರು ಹೇಳಿದರು. ಇಜ್ಜಾವು-ಹಿರಿಂಜ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರಾದ ವಸಂತಿ ಕನೆಮಾರು, ದೇವಕಿ ಹಿರಿಂಜ ಸಭೆಯ ಗಮನ ಸೆಳೆದರು. ಕಾಂಕ್ರಿಟ್ ರಸ್ತೆಯ ಪಕ್ಕದಲ್ಲೇ ಪೈಪ್ ಲೈನ್ ಹಾಕಲಾಗಿದೆ ಎಂದು ವಸಂತಿ ಕನೆಮಾರು ಆರೋಪಿಸಿದರು. ರಾಮಕುಂಜ ಗ್ರಾಮದ ಅಂಬೇಡ್ಕರ್ ಕಾಲೋನಿಗೆ ಹೋಗುವ ರಸ್ತೆಯ ಡಾಮರು ತೆಗೆದಿರುವ ವಿಚಾರವೂ ಚರ್ಚೆಗೆ ಬಂತು.
ತಿಂಗಳಿಗೊಮ್ಮೆ ಆಧಾರ್ ಕ್ಯಾಂಪ್ ಮಾಡಿ;
ಆಧಾರ್ ತಿದ್ದುಪಡಿಗೆ ಸಮಸ್ಯೆಯಾಗಿದೆ. ಆದ್ದರಿಂದ ಗ್ರಾ.ಪಂ.ನಲ್ಲಿ ತಿಂಗಳಿಗೊಮ್ಮೆ ಆಧಾರ್ ಕ್ಯಾಂಪ್ ಮಾಡಬೇಕೆಂದು ಪ್ರವೀಣ್ ದೇರೆಜಾಲು ಹಾಗೂ ಇತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಚೆ ಇಲಾಖೆ ಸಿಬ್ಬಂದಿ, ತಿಂಗಳಿಗೊಮ್ಮೆ ಗ್ರಾ.ಪಂ.ನಲ್ಲಿ ಆಧಾರ್ ಕ್ಯಾಂಪ್ ಮಾಡಲು ಕಷ್ಟವಿದೆ. ಅದರ ಬದಲು ಸದ್ಯ ೨ ದಿನದ ಶಿಬಿರ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
ಉಳಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಸಿಬ್ಬಂದಿ ಲೋಕನಾಥ ರೈ, ಗ್ರಾಮ ಆಡಳಿತಾಧಿಕಾರಿ ಸತೀಶ್, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್, ಆಲಂಕಾರು ಶಾಖಾ ಕಿರಿಯ ಇಂಜಿನಿಯರ್ ಪ್ರೇಮ್‌ಕುಮಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೊಳೆಬಸಪ್ಪ, ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಅಕ್ಷತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ವನಿತ ಟಿ.ಎನ್., ಪಶು ಸಂಗೋಪನಾ ಇಲಾಖೆ ಕಿರಿಯ ಪಶುವೈದ್ಯ ಪರೀಕ್ಷಕ ರವಿತೇಜ, ಅಂಚೆ ಇಲಾಖೆ ಸಿಬ್ಬಂದಿ ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಯತೀಶ್‌ಕುಮಾರ್, ಸೂರಪ್ಪ ಕುಲಾಲ್, ಪ್ರದೀಪ್ ಬಾಂತೊಟ್ಟು, ವಸಂತ, ಕುಶಾಲಪ್ಪ ಎಂ., ಅಬ್ದುಲ್ ರಹಿಮಾನ್, ಆಯಿಷಾಶರೀಫ್, ರೋಹಿಣಿ ಬಿ., ಜಯಶ್ರೀ, ಸುಜಾತ ಕೆ., ಭವಾನಿ, ಭಾರತಿ ಎಂ., ಪ್ರಶಾಂತ್ ಆರ್.ಕೆ., ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
5 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡಿ;
ದ.ಕ.ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳು ಮೆಣಸು ಹೆಚ್ಚಾಗಿ ಬೆಳೆಸಲಾಗುತ್ತಿದೆ. ಈ ಬೆಳೆಗಳನ್ನು ಪ್ರತಿವರ್ಷ ಬದಲಾವಣೆ ಮಾಡುತ್ತಿಲ್ಲ. ಆದ್ದರಿಂದ ಪ್ರತಿವರ್ಷ ಬೆಳೆ ಸಮೀಕ್ಷೆ ಮಾಡುವ ಬದಲು 5 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಸತೀಶ್ ಅವರು, ಈ ಬಗ್ಗೆ ಸರಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಸ್ಥರೂ ಜನಪ್ರತಿನಿಧಿಗಳ ಮೂಲಕ ಸಚಿವರಿಗೆ ಒತ್ತಡ ತಂದಲ್ಲಿ ಶೀಘ್ರ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಒಳ್ಳೆಯದು ಎಂದರು.
ಸಬ್‌ಸ್ಟೇಷನ್ ಶಿಲಾನ್ಯಾಸಕ್ಕೆ ಮಾಹಿತಿ ನೀಡಿಲ್ಲ;
ಕೊಯಿಲದಲ್ಲಿ ರಾಜ್ಯ ಹೆದ್ದಾರಿ ಪಕ್ಕ 33 ಕೆ.ವಿ.ಸಬ್‌ಸ್ಟೇಷನ್ ಆರಂಭಿಸುವ ನಿಟ್ಟಿನಲ್ಲಿ ರಾಮಕುಂಜ ಗ್ರಾ.ಪಂ.ನ ಸದಸ್ಯರ ಶ್ರಮ ಇದೆ. ಆದರೆ ಕಾಮಗಾರಿ ಆರಂಭಕ್ಕೆ ಮೊದಲು ನಡೆದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗ್ರಾ.ಪಂ.ಗೆ ಮಾಹಿತಿಯೇ ನೀಡಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ಅವರು, ಬೆಂಗಳೂರಿನ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದು ಶಿಲಾನ್ಯಾಸದ ದಿನದಂದೇ ನನಗೂ ಮಾಹಿತಿ ನೀಡಿದ್ದರು. ಈ ವಿಚಾರದ ಬಗ್ಗೆ ಅವರ ಗಮನಕ್ಕೂ ತಂದಿದ್ದು ಉದ್ಘಾಟನೆಗೆ ಎಲ್ಲರನ್ನೂ ಕರೆಯುವುದಾಗಿ ತಿಳಿಸಿದ್ದಾರೆ ಎಂದರು.