ಏ.2 ರಂದು ಬ್ರಹ್ಮಕಲಶೋತ್ಸವ : ಏ.11ರಂದು ಮಹಾರಥೋತ್ಸವ
ಆಲಂಕಾರು: ಸೀಮಾ ದೇವಸ್ಥಾನ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ 2026ನೇ ಮಾ.25 ರಿಂದ ದೇವತಾ ಕಾರ್ಯಪ್ರಾರಂಭಗೊಂಡು ಏ.2 ರಂದು ಬ್ರಹ್ಮಕಲಶೋತ್ಸವ, ಏ.11 ರಂದು ಮಹಾರಥೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಆಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ.24 ರಂದು ಭಾನುವಾರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು ರೂಪಾಯಿ 10 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ತಾಮ್ರದ ಮೇಲ್ಚಾವಣಿ ಸಹಿತ ಶಿಲಾಮಯ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ, ಹಂಚಿನ ಮೇಲ್ಚಾವಣಿ ಸಹಿತ ಶಿಲಾಮಯ ಸುತ್ತುಪೌಳಿ, ಗಣಪತಿ ಗುಡಿ, ಲಕ್ಷ್ಮೀ ನಾರಾಯಣ ಗುಡಿ, ತೀರ್ಥಭಾವಿ, ಗಂಗಾದೇವಿಯ ಗುಡಿ, ಧ್ವಜಸ್ತಂಭ, ದೈವದ ಗುಡಿ, ಹೂವಿನ ತೇರು( ಚಂದ್ರಮಂಡಲ), ಪಲ್ಲಕ್ಕಿ, ಬ್ರಹ್ಮರಥ ನಿರ್ಮಾಣ, ರಾಜಗೋಪುರ, ರಥಭೀದಿಯಲ್ಲಿ ಮಹಾದ್ವಾರ, ಕುಡಿಯುವ ನೀರಿನ ಬಾವಿ, ಆಲಂಕಾರು ಪೇಟೆಯಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಯೋಜನೆಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು.
ದೇಗುಲದ ಪುನರ್ ನಿರ್ಮಾಣ ಮಾಡುವ ಕಾರ್ಯ ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಬಹುತೇಕ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಊರ-ಪರವೂರ ಭಕ್ತರ ನಿರಂತರ ತನು ಮನ ಧನ ಸಹಾಯದಿಂದ ಅಭಿವೃದ್ದಿ ಕಾರ್ಯ ವೇಗ ಪಡೆದುಕೊಂಡಿದೆ.
ದೇಗುಲದ ನೂತನ ಗರ್ಭಗುಡಿ, ನಮಸ್ಕಾರ ಮಂಟಪ, ಗಂಗಾದೇವಿ ಗುಡಿ,ದೈವಗಳ ಗುಡಿ ಕೆರೆ,ರಾಜಗೋಪುರ, ರಥಬೀಧಿಯಲ್ಲಿರುವ ಸ್ವಾಗತ ಗೋಪುರ ನಿರ್ಮಾಣದ ಹಂತದಲ್ಲಿದೆ. ದೇವಸ್ಥಾನದ ಬ್ರಹ್ಮರಥದ ಕಾಮಗಾರಿಯು 80% ಪೂರ್ಣವಾಗಿದ್ದು, ಸುತ್ತುಪೌಳಿ ಕೆಲಸ ಮುಂದಿನ 2 ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. 2024ರ ಮೇ 2ರಂದು ಬಾಲಲಾಯದಲ್ಲಿ ದೇವರ ಪ್ರತಿಷ್ಠಾಪನೆ ನಡೆದಿದ್ದು, ದೇವಸ್ಠಾನವನ್ನು ಮೂರು ವರ್ಷದ ಒಳಗೆ ಸಂಪೂರ್ಣ ಹೊಸ ರೂಪದಲ್ಲಿ ಅಭಿವೃದ್ದಿಗೊಳಿಸಬೇಕೆಂದು ಎಲ್ಲಾ ಭಕ್ತಾಧಿಗಳ ಸಹಕಾರದೊಂದಿಗೆ ಎದ್ದು ನಿಲ್ಲಿಸಬೇಕೆಂಬ ಪಣ ತೊಟ್ಟೆವು ಇದೀಗ ಒಂದೇ ವರ್ಷದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ ಎಂದರು.
ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ಮಾತನಾಡಿ, ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ 2024 ಮೇ.2 ರಂದು ಬಾಲಾಲಯಪ್ರತಿಷ್ಠೆಗೊಂಡು, ಮೇ 22 ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. 2026ರಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಶಿಲ್ಪಿ ಕುಡುಪು ಶ್ರೀಕೃಷ್ಣರಾಜ್ ತಂತ್ರಿಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. 2025
ಮಾರ್ಚ್ 25 ರಂದು ದೇವತಾಕಾರ್ಯ ಪ್ರಾರಂಭಗೊಂಡು ಮಾರ್ಚ್ 30 ರಂದು ಪ್ರತಿಷ್ಠಾಮಹೋತ್ಸವ ನಡೆದು, ಎಪ್ರಿಲ್ 2 ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಪ್ರತೀ ವರ್ಷ ಜಾತ್ರೋತ್ಸವ ಮಾ 14 ಕ್ಕೆ ಪ್ರಾರಂಭವಾಗುತ್ತದೆ. ಆದರೆ ಈ ವರ್ಷ ಬ್ರಹ್ಮಕಲಶೋತ್ಸವ ಮರುದಿನ ಎಪ್ರಿಲ್ 3 ರಂದು ಮೀನ ಸಂಕ್ರಾಂತಿಯಂದು ಧ್ವಜಾರೋಹಣ
ನಡೆಯುತ್ತದೆ. ಎಪ್ರಿಲ್ 11ರಂದು ಮಹಾರಥೋತ್ಸವ, ಎ.12 ರಂದು ಅವಭೃತ ನಡೆದು, 13 ರಂದು ಭದ್ರಕಾಳಿ ಗುಡಿಯಲ್ಲಿ ವಿಶೇಷ ಪೂಜೆ ನೇಮೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಈ ರೀತಿ ಇದ್ದು ಬರುವ ವರ್ಷದಿಂದ ಯಥಾಪ್ರಕಾರ ಜಾತ್ರೋತ್ಸವ ನಡೆಯಲಿದೆ ಎಂದರು.
ರಾಜಕೀಯ ನೇತಾರರ ಭೇಟಿ
ದೇವಾಲಯದ ಅಭಿವೃದ್ಧಿಗೆ ಸರ್ಕಾರದ ಅನುದಾನ ದೊರಕಿಸಲು ಪ್ರಯತ್ನಗಳು ನಡೆಯುತ್ತಿದ್ದು, ಈಗಾಗಲೇ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹಾಗೂ ಸಭಾಪತಿ ಯು.ಟಿ ಖಾದರ್ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯವರ ಭೇಟಿ ಮಾಡಿ ಅನುದಾನ ದೊರಕಿಸುವಲ್ಲಿ ಪ್ರಯತ್ನ ಮಾಡುವುದಾಗಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು ತಿಳಿಸಿದರು.
ಸಾಮಾಜಿಕ ಸಮನ್ವಯಕ್ಕಾಗಿ ಮನವಿ
ಮಾರ್ಚ್ 25, 2026 ರಿಂದ ಎ.13 2026 ರ ತನಕ ಬ್ರಹ್ಮಕಲಶೋತ್ಸವ, ಜಾತ್ರೋತ್ಸವ ಇರುವ ಕಾರಣ ಭಕ್ತಾದಿಗಳು ಶುಭ ಕಾರ್ಯಕ್ರಮಗಳ ದಿನಾಂಕವನ್ನು ಬದಲಾಯಿಸುವಂತೆ ಸಮಿತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಕಡಬ ತಾಲೂಕು ಆಡಳಿತ ಕಚೇರಿ ಉಪತಹಶೀಲ್ದಾರ ಗೋಪಾಲ ಕಲ್ಲುಗುಡ್ಡೆ ಹಾಗೂ ದೇವಳದ ಅರ್ಚಕರಾದ ಹರಿಪ್ರಸಾದ್ ಉಪಾಧ್ಯಾಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.