ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥೆಯಂತೆ ಅಲೆದಾಡುತ್ತಿದ್ದ ಮಧ್ಯ ವಯಸ್ಕ ಮಹಿಳೆಯೋರ್ವರನ್ನು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಆಶ್ರಮವೊಂದಕ್ಕೆ ಸೇರ್ಪಡೆಗೊಳಿಸಿದ ಘಟನೆ ವರದಿಯಾಗಿದೆ.
ಉತ್ತಮ ಬೆಲೆಬಾಳುವ ಸೀರೆ ಧರಿಸಿದ್ದ ಮಹಿಳೆಯೋರ್ವರು ಪರಿಸರದಲ್ಲಿ ಕಾಣಸಿಕ್ಕಾಗ ಅವರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಅಚ್ಚ್ಯುತ ಪಡಿಯಾರ್ ಎಂಬವರು ಮಾಧ್ಯಮ ಪ್ರತಿನಿಧಿಗಳ ಗಮನ ಸೆಳೆಯುತ್ತಾರೆ. ಈ ವೇಳೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್ ಮಹಿಳೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ತಾನು ಮಾನಸಿಕವಾಗಿ ನೊಂದು ಮನೆ ಬಿಟ್ಟು ಬಂದಿರುವುದಾಗಿ ಮಹಿಳೆ ತಿಳಿಸುತ್ತಾರೆ. ಅವರು ಅದರ ವಿವರವನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಆದರೂ ಮಹಿಳೆಯ ಸಂಬಂಧಿಕರು ಯಾರೂ ಪತ್ತೆಯಾಗದೇ ಹೋದಾಗ, ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಇದರ ಸಂಬಂಧಿತ ಇಲಾಖಾ ಪ್ರಕ್ರಿಯೆಗಳನ್ನು ಪೂರೈಸಿ ಪುತ್ತೂರಿನ ಚಿಕ್ಕಮಡ್ನೂರು ಎಂಬಲ್ಲಿರುವ ದೀಪಶ್ರೀ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸಿದರು. ಕೈಲಾರ್ ರಾಜಗೋಪಾಲ್ ಭಟ್‌ರವರ ಮಾನವೀಯ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ ಉಪ್ಪಿನಂಗಡಿಯ ಜನಪ್ರಿಯ ವೈದ್ಯ ಡಾ. ನಿರಂಜನ್ ರೈ ರವರು ಮಹಿಳೆಯನ್ನು ಸ್ಥಳಾಂತರಿಸಲು ಅಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿ ನೆರವಾದರು. ಪೊಲೀಸ್ ಇಲಾಖೆಯ ಉಪ್ಪಿನಂಗಡಿ ಠಾಣಾ ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಡೇನಿಕಾ ಮತ್ತು ವನಜಾರವರು ಸಹಕರಿಸಿದರು.