ಪುತ್ತೂರು: ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನಲ್ಲಿ 2025-26ನೇ ಸಾಲಿನ ವಿಜ್ಞಾನ ವೇದಿಕೆ ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿ ಮೈಸೂರು ಮಹಾರಾಣಿ ಸೈನ್ಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಅಬ್ದುಲ್ ರಹೀಮಾನ್ ಮಾತನಾಡಿ, ವಿಜ್ಞಾನ ಮನೋಭಾವ ಇಲ್ಲದೆ ಇಂದಿನ ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಯಾವ ದೇಶವೂ ಮುಂದುವರಿಯಲು ಸಾಧ್ಯವಿಲ್ಲವೆಂದು ತಿಳಿಸಿದರು. ನವೀನ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ವಿಶ್ಲೇಷಣೆ, ಹೊಸ ಆವಿಷ್ಕಾರ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯ ಅತ್ಯಗತ್ಯವೆಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ ಅಲ್ಬರ್ಟ್ ಐನ್ಸ್ಟೈನ್ ಅವರ ಮಾತುಗಳನ್ನು ಉಲ್ಲೇಖಿಸಿ, ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧಿವಂತ, ಆದರೆ ಕೇವಲ ಬುದ್ಧಿಮತ್ತೆಯೇ ಸಾಕಾಗುವುದಿಲ್ಲ. ಜ್ಞಾನವನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸುವುದು ಹಾಗೂ ಉತ್ಪಾದಕತೆಯ ಕಡೆಗೆ ದಾರಿ ಮಾಡಿಕೊಡುವುದು ಅತ್ಯಗತ್ಯವೆಂದರು. ವಿದ್ಯಾರ್ಥಿಗಳು ಚರ್ಚೆ, ವಾದ-ಪ್ರತಿವಾದ, ಸಂಶೋಧನಾ ಲೇಖನ ಬರೆಯುವುದು, ತಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಹಂಚಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ವೇದಿಕೆಯ ಸಂಯೋಜಕರು ಮತ್ತು ಆಂತರಿಕ ಗುಣಮಟ್ಟ ಭದ್ರತಾಕೋಶ ಸಂಯೋಜಕರಾದ ಡಾ. ಎಡ್ವಿನ್ ಡಿಸೋಜಾ, ಡೀನ್ ಆಫ್ ಸೈನ್ಸ್ ಡಾ. ಮಾಲಿನಿ ಕೆ. ಹಾಗೂ ಎಲ್ಲಾ ವಿಜ್ಞಾನ ವಿಭಾಗದ ಅಧ್ಯಾಪಕರು ಪಾಲ್ಗೊಂಡರು. ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿ ಮೊಹಮ್ಮದ್ ಫಾಹೀಂ ನಿರೂಪಿಸಿದರು. ಅಕ್ಷತಾ ಮತ್ತು ತಂಡ ಪ್ರಾರ್ಥಿಸಿದರು. ವಿಜ್ಞಾನ ವೇದಿಕೆಯ ಅಧ್ಯಕ್ಷ ಯಜ್ನೇಶ್ ಸ್ವಾಗತಿಸಿ, ಉಪಾಧ್ಯಕ್ಷೆ ಅಖಿಲಾ ವಂದಿಸಿದರು.