






ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜಂಟಿಯಾಗಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಅರಿಯಡ್ಕ ವಲಯ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ರೈ ಕುತ್ಯಾಡಿ ಅವರು ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು.


ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಕುತ್ಯಾಡಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಪಟ್ಟೆ ಪ್ರತಿಭಾ ಪ್ರೌಢಶಾಲೆಯ ದೈ.ಶಿ.ಶಿಕ್ಷಕ ಮೋನಪ್ಪ ಬಿ ಅವರು ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಾಗ ಮೈಗೂಡಿಸಿಕೊಂಡ ಶಿಸ್ತು, ಬದ್ದತೆ ಜೀವನದುದ್ದಕ್ಕೂ ಉತ್ತಮ ಆರೋಗ್ಯ ಹಾಗೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಊರಿನ ಹಿರಿಯರಾದ ಶಿವಪ್ಪ ಕುಲಾಲ್ ಕೌಡಿಚ್ಚಾರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಕೃಷಿಕರಾದ ವಸಂತ ರೈ ಕುತ್ಯಾಡಿ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ದೈಹಿಕ ಶಿ.ಶಿಕ್ಷಕ ಮೋನಪ್ಪ ಪಟ್ಟೆ ಅವರನ್ನು ಸನ್ಮಾನಿಸಲಾಯಿತು.



ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಸ್ಟ್ಯಾನಿ ಪ್ರವೀಣ್ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಎಸ್ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ, ತಿಮ್ಮಪ್ಪ ನಾಯ್ಕ, ಚಂದ್ರ, ರೇವತಿ, ಲೀಲಾವತಿ ಹಾಗೂ ಭಾಗಿರಥಿ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ಬಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ವಿಜ್ಞಾನ ಶಿಕ್ಷಕಿ ಪ್ರೀತ ಟಿ.ಎಂ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

ಬೆಂಗಳೂರಿನಲ್ಲಿ ಉದ್ಯಮಿಗಳಾಗಿರುವ ಅರಿಯಡ್ಕದ ಹನೀಫ್, ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿ, ಅಬೂಬಕ್ಕರ್ ಕೌಡಿಚ್ಚಾರ್,ಬಾಲಕೃಷ್ಣ ಕುಲಾಲ್, ಉದ್ಯಮಿ ರಮೇಶ್ ಪರ್ಪುಂಜ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿಯವರು ಸಹಕರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು, ಅರಿಯಡ್ಕ ಗ್ರಾ.ಪಂ ಸದಸ್ಯೆ ಸಾವಿತ್ರಿ ಕುರಿಂಜ, ಪಾಪೆಮಜಲು ಸ.ಹಿ.ಪ್ರಾ.ಶಾಲಾ ನಿಕಟಪೂರ್ವ ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಮರತ್ತಮೂಲೆ, ನಿವೃತ್ತ ರೇಂಜರ್ ಸುಬ್ರಹ್ಮಣ್ಯ ಗೌಡ ಶುಭ ಹಾರೈಸಿದರು. ಅರಿಯಡ್ಕ ಗ್ರಾ.ಪಂ ಸದಸ್ಯೆ ಸಾವಿತ್ರಿ ಕುರಿಂಜ ಧ್ವಜ ಅವರೋಹಣ ಕಾರ್ಯಕ್ರಮ ನೆರವೇರಿಸಿದರು. ಎರಡೂ ಶಾಲೆಗಳ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.










