18% ಡಿವಿಡೆಂಡ್ | ಹಿರಿಯ ಮೂರ್ತೆದಾರರಿಗೆ ಸನ್ಮಾನ | ಶೀಘ್ರದಲ್ಲೇ ನೂತನ ಶಾಖೆ
ಪುತ್ತೂರು: ಪುರುಷರಕಟ್ಟೆ ಶಿವಕೃಪಾ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.5 ರಂದು ಪೂರ್ವಾಹ್ನ ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನ ಸಭಾಂಗಣದಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶೀಘ್ರದಲ್ಲಿಯೇ ನೂತನ ಶಾಖೆ ಆರಂಭಕ್ಕೆ ಚಿಂತನೆ-ಸತೀಶ್ ಕೆಡೆಂಜಿ:
ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಮಾತನಾಡಿ, ಈಗಾಗಲೇ ಪುಣ್ಚತ್ತಾರು ಶಾಖೆಯನ್ನು ಆರಂಭಿಸಿ ಅಲ್ಲಿ ಠೇವಣಿ ಸಂಗ್ರಹಿಸಿ ಶಾಖೆಯು ಕೇವಲ ಐದೇ ತಿಂಗಳಲ್ಲಿ ಯಶಸ್ವಿಯತ್ತ ಮುನ್ನೆಡೆಯುತ್ತಿದೆ. ರೂ.22 ಕೋಟಿ ವ್ಯವಹಾರವಿದ್ದ ನಮ್ಮ ಬ್ಯಾಂಕ್ ಒಂದೇ ವರ್ಷದಲ್ಲಿ ರೂ.35 ಕೋಟಿ ವ್ಯವಹಾರ ಮಾಡಿರುವುದಾದರೆ ಅಲ್ಲಿ ಬ್ಯಾಂಕ್ ಸದಸ್ಯರು, ಸಾಲಗಾರರು, ಠೇವಣಿದಾರರು ನಮ್ಮ ಮೇಲೆ ವಿಶ್ವಾಸವಿರಿಸಿದ್ದು ಜೊತೆಗೆ ನಮ್ಮ ಸಿಬ್ಬಂದಿಯ ಗುಣಮಟ್ಟದ ಸೇವೆಯು ಪ್ರಮುಖ ಕಾರಣವಾಗಿದೆ ಎಂದ ಅವರು ಬ್ಯಾಂಕ್ ಸ್ವತಹ ಬಲಿಷ್ಟಗೊಂಡ ಮೇಲೆ ನಮ್ಮ ಬ್ಯಾಂಕಿಗೆ ಸ್ವಂತ ಜಾಗ, ಸ್ವಂತ ಕಟ್ಟಡ ಹೊಂದಿಸುವ ಕಾರ್ಯ ಮುಂದಿನ ಎರಡು ವರ್ಷಗಳಲ್ಲಿ ಮಾಡೋಣ. ಯಾವುದೇ ಬ್ಯಾಂಕ್ ಅಭಿವೃದ್ಧಿ ದಿಸೆಯಲ್ಲಿ ಸಾಗಬೇಕಾದರೆ ಅಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತದೆ. ಶೀಘ್ರವೇ ಮತ್ತೊಂದು ಶಾಖೆಯನ್ನು ಆರಂಭಿಸುವ ಉದ್ಧೇಶವನ್ನು ಸಂಘವು ಹೊಂದಿದೆ ಎಂದರು.

ಸಂಘದ ಕಾರ್ಯಕ್ಷೇತ್ರ:
ಸಂಘದ ಕಾರ್ಯಕ್ಷೇತ್ರವು ಪುತ್ತೂರು ತಾಲೂಕಿನ ನರಿಮೊಗರು, ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ, ಸರ್ವೆ ಹಾಗೂ ಕಡಬ ತಾಲೂಕಿನ ಸವಣೂರು, ಪುಂಚಪ್ಪಾಡಿ, ಕುದ್ಮಾರು, ಕಾಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ ಮತ್ತು ದೋಲ್ಪಾಡಿ ಗ್ರಾಮಗಳನ್ನು ಒಳಗೊಂಡಿದೆ.
ಸದಸ್ಯರು, ಪಾಲುಧನ, ಠೇವಣಾತಿಗಳು:
ವರದಿ ಸಾಲಿನಲ್ಲಿ ‘ಎ’ ತರಗತಿಯ 77 ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು 546 ಮಂದಿ ಸದಸ್ಯರಿದ್ದು ರೂ.11,24,134 ಪಾವತಿಯಾದ ಪಾಲುಧನ, ‘ಸಿ’ ತರಗತಿಯ ರೂ.8,56,075 ಪಾಲುಧನ ಇರುತ್ತದೆ. ವರದಿ ಸಾಲಿನ ಆರಂಭಕ್ಕೆ ರೂ.3,38,91,420.08 ವಿವಿಧ ಠೇವಣಿ ಇದ್ದು ರೂ.19,41,59,175 ಜಮಾ ಬಂದು ರೂ.17,63,13,905.70 ಮರುಪಾವತಿ ಮಾಡಿ ವರ್ಷಾಂತ್ಯಕ್ಕೆ ರೂ.5,24,70,600.10 ಠೇವಣಿ ಇರುತ್ತದೆ. ವರದಿ ವರ್ಷದಲ್ಲಿ ರೂ.1,85,79,180.02 ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿದೆ. ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದ್ದು ಸದಸ್ಯರು ತಮ್ಮ ಠೇವಣಿಯನ್ನು ಸಂಘದಲ್ಲಿಟ್ಟು ಸಹಕರಿಸಬೇಕಾಗಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳಲ್ಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಅನನ್ಯ ಬಿ.ಜಿ(563 ಅಂಕ), ದೀಕ್ಷಾ(557 ಅಂಕ), ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ನಿಶಾ ಕೈಪಂಗದೋಳ(542 ಅಂಕ), ರಜತ ಕೆ(516 ಅಂಕ), ವರ್ಷಾ ಪಿ.ವಿ(538 ಅಂಕ)ರವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಪ್ರೋತ್ಸಾಹಧನ ವಿತರಣೆ:
ಸಂಘದ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಕ್ತ ಮೂರ್ತೆದಾರರಾದ ಪುಣ್ಚತ್ತಾರು ರಾಧಾಕೃಷ್ಣ ಪೂಜಾರಿ ಮರಕ್ಕಡ, ಆನಂದ ಪೂಜಾರಿ ಮರಕ್ಕಡರವರಿಗೆ ಪ್ರೋತ್ಸಾಹಧನ ಈ ಸಂದರ್ಭದಲ್ಲಿ ವಿತರಿಸಲಾಯಿತು.
ಸಭೆಯಲ್ಲಿ ಮಹಾಸಭೆಯ ತಿಳುವಳಿಕೆ ಪತ್ರ, 2024-25ನೇ ಸಾಲಿನ ಆಡಳಿತ ವರದಿ, ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮತ್ತು ಅಂಗೀಕಾರ, 2025-26ನೇ ಸಾಲಿಗೆ ಅಂದಾಜು ಬಜೆಟ್ ಮಂಡನೆ ಮತ್ತು ಅಂಗೀಕಾರ, 2024-25ನೇ ಸಾಲಿನ ಆಯವ್ಯಯ ಮೀರಿದ ವೆಚ್ಚಗಳ ಮಂಜೂರಾತಿ, 2024-25ನೇ ಸಾಲಿನ ನಿವ್ವಳ ಲಾಭವನ್ನು ವಿವಿಧ ನಿಧಿಗಳಿಗೆ ವಿಂಗಡಿಸುವುದು ಹಾಗೂ ಡಿವಿಡೆಂಡ್ ಘೋಷಣೆ, 2025-26ನೇ ಸಾಲಿನ ಲೆಕ್ಕಪರಿಶೋಧಕರ ನೇಮಕದ ಕುರಿತು ಚರ್ಚಿಸಿ ಅಂಗೀಕರಿಸಲಾಯಿತು.
ವಿಮಲ ಕಲ್ಲರ್ಪೆ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಪದ್ಮಾವತಿ ಮುಂಡೋಡಿ ಸ್ವಾಗತಿಸಿ, ನಿರ್ದೇಶಕ ಉದಯಕುಮಾರ್ ಕೋಲಾಡಿ ವಂದಿಸಿದರು. ನಿರ್ದೇಶಕ ಎಚ್.ಅಣ್ಣಿ ಪೂಜಾರಿ ಹಿಂದಾರು, ಸಂತೋಷ್ ಕುಮಾರ್ ಮರಕ್ಕೂರು, ಜಯಂತ ಪೂಜಾರಿ ಕೊಡಂಗೆ, ದಾಮೋದರ ಪೂಜಾರಿ ಕರ್ಪುತ್ತಮೂಲೆ, ಗಣೇಶ್ ಸಾಲ್ಯಾನ್ ಪಜಿಮಣ್ಣು, ಗೌರವ ಸಲಹೆಗಾರ ಸಂತೋಷ್ ಕುಮಾರ್ ಮರಕ್ಕಡ, ನಿರ್ದೇಶಕಿ ಗೀತಾ ಕೆ.ಕುರೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಶನ್ ಎ, ಶಾಖಾ ವ್ಯವಸ್ಥಾಪಕಿ ಶೃತಿ, ಕಂಪ್ಯೂಟರ್ ಆಪರೇಟರ್ಗಳಾದ ರಮ್ಯಶ್ರೀ ಕೆ, ರೂಪಿಕಾ ಕೆ, ಕು.ಶ್ವೇತಾಶ್ರೀ, ಶಾಖಾ ವ್ಯವಸ್ಥಾಪಕ ಅಂಕಿತ್ ಕುಮಾರ್, ದೈನಿಕ ಠೇವಣಿ ಸಂಗ್ರಾಹಕರಾದ ಚಂದ್ರಶೇಖರ ಕುರೆಮಜಲು, ಕಿರಣ್ ಕೋಡಿಬೈಲು, ಚಿತ್ರಾ ಎ, ಸರಾಫರಾದ ಜನಾರ್ದನ ಆಚಾರ್ಯ ಶಾಂತಿಗೋಡು, ದಾಮೋದರ ಆಚಾರ್ಯ ಪುರುಷರಕಟ್ಟೆ, ಪುರುಷೋತ್ತಮ ಆಚಾರ್ಯ ಪುಣ್ಚತ್ತಾರುರವರು ವಿವಿಧ ರೀತಿಯಲ್ಲಿ ಸಹಕರಿಸಿದರು.
ಈರ್ವರಿಗೆ ಸನ್ಮಾನ..
ತನ್ನ 12ನೇ ವಯಸ್ಸಿನಲ್ಲಿ ಮೂರ್ತೆಗಾರಿಕೆಯನ್ನು ಪ್ರಾರಂಭಿಸಿ 50 ವರ್ಷಗಳ ಕಾಲ ಮೂರ್ತೆಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ವೀರಪ್ಪ ಪೂಜಾರಿ ಕೋಡಿ ಕಲ್ಕಾರುರವರನ್ನು ಹಾಗೂ ತನ್ನ 18ನೇ ವಯಸ್ಸಿನಲ್ಲಿ ಮೂರ್ತೆಗಾರಿಕೆಯನ್ನು ಪ್ರಾರಂಭಿಸಿ 31 ವರ್ಷಗಳ ಕಾಲ ಮೂರ್ತೆಗಾರಿಕೆ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿರುವ ತಿಮ್ಮಪ್ಪ ಪೂಜಾರಿ ಮರಕ್ಕೂರುರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶೇ.18% ಡಿವಿಡೆಂಡ್..
ವರದಿ ಸಾಲಿನಲ್ಲಿ ‘ಎ’ ತರಗತಿಯ 77 ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು 546 ಮಂದಿ ಸದಸ್ಯರಿದ್ದಾರೆ. ಸಂಘವು ವಾರ್ಷಿಕ ರೂ.35 ಕೋಟಿ ವ್ಯವಹಾರ ನಡೆಸಿದ್ದು ರೂ.11,11,228.05 ನಿವ್ವಳ ಲಾಭ ಗಳಿಸಿದ್ದು ಇದು ಸಂಘದ ನಿರ್ದೇಶಕರ, ಸಿಬ್ಬಂದಿಗಳು, ಠೇವಣಿದಾರರು, ಸಾಲಗಾರರು ಇವರ ಶ್ರಮದಿಂದ ಸಾಧ್ಯವಾಗಿದೆ. ಆದ್ದರಿಂದ ಈ ಬಾರಿಯೂ ಸಂಘವು ಶೇ.18 ಡಿವಿಡೆಂಡ್ನ್ನು ನೀಡುತ್ತಿದೆ ಎಂದು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಘೋಷಣೆ ಮಾಡಿದರು.