ಸೆ.11: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ, ಉಚಿತ ವೈದ್ಯಕೀಯ ಶಿಬಿರ, ನೂತನ ಲಿಫ್ಟ್ ಉದ್ಘಾಟನೆ

0

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ, ನೂತನ ಲಿಫ್ಟ್ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪೂರ್ವಾಹ್ನ 9.30ಕ್ಕೆ ನೂತನ ಲಿಫ್ಟ್ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನಡೆಯಲಿದೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಲಿಫ್ಟ್ ಉದ್ಘಾಟಿಸಲಿದ್ದಾರೆ. ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಮುರಳೀಧರ ವೈ.ಕೆ.ಅವರು ವೈದ್ಯಕೀಯ ಶಿಬಿರ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ 10.30ರಿಂದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಮಹಾಸಭೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ನೆಲ್ಯಾಡಿ ಅಶ್ವಿನಿ ಆಸ್ಪತ್ರೆ ಹಾಗೂ ಎ.ಜೆ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಪೂರ್ವಾಹ್ನ 9ರಿಂದ ಅಪರಾಹ್ನ 1.30ರ ತನಕ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ

ಇತಿಹಾಸ:
65 ವರ್ಷಗಳ ಇತಿಹಾಸ ಹೊಂದಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ 552.59 ಕೋಟಿ ರೂ.ವಾರ್ಷಿಕ ವ್ಯವಹಾರ ಮಾಡಿ 1.90 ಕೋಟಿ ರೂ. ಲಾಭ ಗಳಿಸಿದೆ. ಸಂಘದಲ್ಲಿ 6448 ಸದಸ್ಯರಿದ್ದು 9.39 ಕೋಟಿ ಪಾಲು ಬಂಡವಾಳವಿರುತ್ತದೆ. 33 ಕೋಟಿ ರೂ. ಠೇವಣಿ ಇದ್ದು, 85 ಕೋಟಿ ರೂ.ಸದಸ್ಯರ ಸಾಲವಿರುತ್ತದೆ. 116 ಕೋಟಿ ರೂ ದುಡಿಯುವ ಬಂಡವಾಳವಿದೆ. ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಗೋಳಿತ್ತೊಟ್ಟು, ಕೊಣಾಲು, ಆಲಂತಾಯ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಸಂಘದ ಕೇಂದ್ರ ಕಚೇರಿ, ಗೋಳಿತ್ತೊಟ್ಟು ಶಾಖೆ, ಶಿರಾಡಿ ಶಾಖೆಗಳಲ್ಲಿ ಎಲ್ಲಾ ರೀತಿಯ ವ್ಯವಹಾರವಿದ್ದು ಇಚ್ಲಂಪಾಡಿ ಶಾಖೆಯಲ್ಲಿ ಪಡಿತರ ವ್ಯವಹಾರ ಮಾಡಲಾಗುತ್ತಿದೆ. ಕೇಂದ್ರ ಕಚೇರಿ, ಗೋಳಿತ್ತೊಟ್ಟು ಹಾಗೂ ಶಿರಾಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದೆ. ಎರಡು ಶಾಖೆಗಳಲ್ಲಿಯೂ ಎಲ್ಲಾ ತರದ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆ.


ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವತೋಮುಖ ಪ್ರಗತಿಯ ಸಾಧನೆಗೆ ಸಂಬಂಧಿಸಿ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ 8 ವರ್ಷಗಳಿಂದ ವಿಶೇಷ ಸಾಧನೆ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದೆ. 2020ನೇ ಇಸವಿಯಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಪಡೆದಿದೆ. 2023-24 ಮತ್ತು 2024-25 ಸಾಲಿನಲ್ಲಿ ಸಂಘವು ಶೇ.100 ಸಾಲ ವಸೂಲಾತಿ ಮಾಡಿರುವುದಕ್ಕೆ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು ತಿಳಿಸಿದ್ದಾರೆ.

ಸಂಘದ ಆಡಳಿತ ಮಂಡಳಿ;
ಸಂಘದ ಆಡಳಿತ ಮಂಡಳಿಯಲ್ಲಿ 12 ಮಂದಿ ಚುನಾಯಿತ ನಿರ್ದೇಶಕರಿದ್ದು ಅಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ನಿರ್ದೇಶಕರಾಗಿ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಉಷಾ ಅಂಚನ್, ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ ಬಿ., ಶೇಷಮ್ಮ, ಭಾಸ್ಕರ ರೈ, ಬಾಬು ನಾಯ್ಕ, ಹರೀಶ್ ಬಿ, ವಲಯ ಮೇಲ್ವಿಚಾರಕ ವಸಂತ ಎಸ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಯಾಕರ ರೈ ಕೆ.ಯ೦. ಕಾರ್ಯನಿರ್ವಹಿಸುತ್ತಿದ್ದಾರೆ.

ದಾಖಲೆಯ ವ್ಯವಹಾರ;
ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ದಾಖಲೆ ವ್ಯವಹಾರ ಮಾಡಿ 1.9 ಕೋಟಿ ರೂ. ಲಾಭ ಹಾಗೂ ಶೇ.100 ಸಾಲ ವಸೂಲಾತಿ ಮಾಡಿ ದಾಖಲೆ ನಿರ್ಮಿಸಿದೆ. ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಪಟ್ಟೆ, ನಿರ್ದೇಶಕರು ಹಾಗೂ ಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕರ ಸಲಹೆ ಸೂಚನೆ, ನೌಕರರ ಪರಿಶ್ರಮ ಹಾಗೂ ಸದಸ್ಯರ ಮತ್ತು ಗ್ರಾಹಕರ ಉತ್ತಮ ಸ್ಪಂದನೆಯಿಂದ ಸಂಘಕ್ಕೆ ಈ ಸಾಧನೆ ಸಾಧ್ಯವಾಗಿದೆ. ಅವರೆಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
ಬಾಲಕೃಷ್ಣ ಬಾಣಜಾಲು ಅಧ್ಯಕ್ಷರು
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

LEAVE A REPLY

Please enter your comment!
Please enter your name here