ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯಕ್ಕೆ ಅತ್ಯಗತ್ಯವಾಗಿದ್ದ ಭೂ ಖರೀದಿಗೆ ಮೂಡಿದ್ದ ವಿಘ್ನಗಳೆಲ್ಲವೂ ಪುತ್ತೂರು ಶಾಸಕರ ಪ್ರಯತ್ನದ ಫಲವಾಗಿ ನಿವಾರಣೆಗೊಂಡು ಭೂ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಮೂಲಕ ದೇವಾಲಯದ ಬಳಿಯಿದ್ದ 32 ಸೆಂಟ್ಸ್ ಭೂಮಿ ದೇವಳದ ಅಧಿನಕ್ಕೆ ಒಳಪಟ್ಟಂತಾಗಿದೆ. ಉಪ್ಪಿನಂಗಡಿಯಲ್ಲಿದ್ದ ಏಕೈಕ ಸಿನಿಮಾ ಮಂದಿರದ ಕಟ್ಟಡವೂ ಇತಿಹಾಸದ ಪುಟಗಳನ್ನು ಸೇರುವಂತಾಗಿದೆ.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ‘ಪ್ರೀತಂ ಟಾಕೀಸ್’ ಕಟ್ಟಡವಿದ್ದ ಸುಮಾರು 32 ಸೆಂಟ್ಸ್ ಭೂಮಿಯನ್ನು ಖರೀದಿಸುವ ಸಂಕಲ್ಪವನ್ನು ಕರುಣಾಕರ ಸುವರ್ಣ ನೇತೃತ್ವದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಕೈಗೊಂಡಿತ್ತು. ಕೈಗೊಂಡ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕಡತ ಅಽಕಾರಿಗಳ ಕಚೇರಿಯಿಂದ ಕಚೇರಿಗೆ ಅಲೆದಾಡಿತೇ ವಿನಃ ಭೂಮಿಯನ್ನು ಖರೀದಿಸಲು ಮುಜರಾಯಿ ಇಲಾಖಾಧಿಕಾರಿಗಳ ಒಪ್ಪಿಗೆ ಲಭಿಸಿರಲಿಲ್ಲ.
ಸರಕಾರ ಬದಲಾವಣೆಗೊಂಡ ಬಳಿಕ ದೇವಾಲಯದ ವ್ಯವಸ್ಥಾಪನಾ ಸಮಿತಿಯೂ ಬದಲಾಯಿತು. ಮತ್ತೆ ಕುಂಟು ನೆಪದೊಂದಿಗೆ ಕಡತ ಅಽಕಾರಿಗಳ ಕಚೇರಿಯಲ್ಲೇ ಉಳಿದಿರುವುದನ್ನು ಗಮನಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಅಽಕಾರಿಗಳಿಗೆ ಚುರುಕು ಮುಟ್ಟಿಸಿ ದೇವಳದ ಅಭಿವೃದ್ಧಿ ಕಾರ್ಯಕ್ಕೆ ಅತ್ಯಗತ್ಯವಾದ ಭೂಮಿಯನ್ನು ಖರೀದಿಸಲು ದೇವಾಲಯದ ಹಣವನ್ನೇ ವಿನಿಯೋಗಿಸಲು ಅವಕಾಶ ನಿರಾಕರಿಸುವುದು ಸರಿಯಲ್ಲ. ಅಗತ್ಯ ಇಲಾಖಾ ಪ್ರಕ್ರಿಯೆಗಳನ್ನು ನಡೆಸಿ ಭೂ ಮಾರಾಟಗಾರರಿಗೆ ಹಣ ಪಾವತಿಸಿ ಭೂಮಿಯನ್ನು ಕ್ರಯವರಿಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ಅದರಂತೆ ಈಗ ಅಗತ್ಯ ಇಲಾಖಾ ಕ್ರಮಗಳು ಜರುಗಿ ರೂ 1.51 ಕೋಟಿ ರೂಪಾಯಿ ಹಣ ಪಾವತಿಸಿ ಪ್ರೀತಂ ಟಾಕೀಸ್ ಇದ್ದ 32 ಸೆಂಟ್ಸ್ ಭೂಮಿಯೂ ದೇವಳದ ಸುಪರ್ದಿಗೆ ಬಂದಂತಾಗಿದೆ. ಈ ಮೂಲಕ ಜನಪ್ರತಿನಿಽಯೋರ್ವ ಇಚ್ಚಾಶಕ್ತಿಯನ್ನು ಹೊಂದಿದ್ದರೆ ಎಂತಹಾ ಅಡೆತಡೆಗಳನ್ನೂ ನಿವಾರಿಸಬಲ್ಲರುಎನ್ನುವುದನ್ನು ಶಾಸಕ ಅಶೋಕ್ ಕುಮಾರ್ ರೈ ಕಾರ್ಯದಲ್ಲಿ ಮಾಡಿ ತೋರಿಸಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
ಐದು ದಶಕಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮನೋರಂಜನಾ ನೆಲೆಯಾಗಿ ಅಸ್ತಿತ್ವಕ್ಕೆ ಬಂದಿದ್ದ ‘ಪ್ರೀತಂ ಟಾಕೀಸ್’ ಎಂಬ ಸಿನೇಮಾ ಮಂದಿರವನ್ನು ಸ್ಥಾಪಿಸಿದವರು ರಾಮದಾಸ್ ಪೈ ಗಳು. ಬಳಿಕ ಅದರ ಆಡಳಿತ ಬೇರೆ ಬೇರೆ ಮಂದಿಯ ಕೈ ವಶವಾಗಿ ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾ ಪ್ರದರ್ಶನದಿಂದ ವಿಮುಖವಾಗಿ ಗೋಡಾನ್ ಕಟ್ಟಡವಾಗಿ ಇದು ಬಳಕೆಯಲ್ಲಿತ್ತು. ಸಿನಿಮಾ ಟಾಕೀಸ್ ಆಗಿದ್ದಾಗ ಸಂಜೆಯ ಸಿನಿಮಾ ಪ್ರದರ್ಶನದ ಮೊದಲು ಧ್ವನಿವರ್ಧಕದಲ್ಲಿ ಜೋರಾಗಿ ಭಿತ್ತರವಾಗುತ್ತಿದ್ದ ‘ಗಜಮುಖನೆ ಗಣಪತಿಯೇ ನಿನಗೆ ವಂದನೆ’ ಭಕ್ತಿ ಗೀತೆಯೂ ಇಲ್ಲಿನವರ ಮನದಲಿ ಹಾಸುಹೊಕ್ಕಾಗಿತ್ತು. ಬಳಿಕ ಸಿನೀಮಾ ಟಾಕೀಸ್ ಬಂದ್ ಆದಾಗ ದೇವಳದ ಅಭಿವೃದ್ಧಿ ಕಾರ್ಯದಲ್ಲಿ ಈ ಭೂಮಿಯ ಅವಶ್ಯಕತೆ ಇರುವುದನ್ನು ಮನಗಂಡು ಅಂದಿನ ವ್ಯವಸ್ಥಾಪನಾ ಸಮಿತಿಯು ಸದ್ರಿ ಕಟ್ಟಡದ ಮಾಲಕರಲ್ಲಿ ಒಂದು ಮೊತ್ತವನ್ನು ನಿಗದಿ ಪಡಿಸಿ ದೇವಾಲಯಕ್ಕೆ ಕ್ರಯವರಿಸಿಕೊಳ್ಳುವ ಮಾತುಕತೆಯನ್ನು ನಡೆಸಿತ್ತು. ಆದರೆ ಭೂ ಮಾಲಕರು ಮತ್ತು ದೇವಳದ ಆಡಳಿತ ಒಪ್ಪಿದರೂ ಮುಜರಾಯಿ ಇಲಾಖಾಽಕಾರಿಗಳ ಒಪ್ಪಿಗೆ ದೊರೆಯದೆ ನಾಲ್ಕು ವರ್ಷಗಳ ಕಾಲ ಅನವಶ್ಯಕ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ವಿಘ್ನಗಳು ನಿವಾರಣೆಯಾಗಿ ಇದೀಗ ಕಟ್ಟಡ ಸಹಿತ ಭೂಮಿ ದೇವಳದ ವಶವಾಗಿದ್ದು, ಸಿನಿಮಾ ಮಂದಿರ ಎನ್ನುವುದು ಇನ್ನು ಇತಿಹಾಸದ ಪುಟವನ್ನು ಸೇರಿದಂತಾಗಿದೆ.
ನಾಲ್ಕು ವರ್ಷದ ಹಿಂದಿನ ಒಪ್ಪಂದದಂತೆಯೇ ಮೊತ್ತ ಸ್ವೀಕರಿಸಿರುವುದು ಶ್ಲಾಘನೀಯ – ರಾಧಾಕೃಷ್ಣ ನಾೖಕ್
ಈ ಬಗ್ಗೆ ಪ್ರತಿಕ್ರಿಯಿಸಿದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ ರವರು, ಕರುಣಾಕರ ಸುವರ್ಣ ನೇತೃತ್ವದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ನಡೆಸಿದ ಒಪ್ಪಂದದಂತೆ ಭೂ ಮಾಲಕರು 4 ವರ್ಷ ವಿಳಂಬವಾದರೂ , ಒಪ್ಪಂದದ ಮೊತ್ತದಲ್ಲಿ ಯಾವುದೇ ವ್ಯತ್ಯಾಸವನ್ನು ಬಯಸದೆ 1.51 ಕೋಟಿ ರೂ. ಮೊತ್ತಕ್ಕೆ ಭೂಮಿಯನ್ನು ದೇವಳಕ್ಕೆ ಮಾರಾಟ ಮಾಡಿರುವುದು ಅವರ ಶ್ರೇಷ್ಟ ಗುಣವಾಗಿದೆ ಮತ್ತು ಶ್ಲಾಘನೀಯವಾಗಿದೆ. ಇಲಾಖಾ ಮಟ್ಟದಲ್ಲಿ ಆಗಿರುವ ವಿಳಂಬವನ್ನು ಶಾಸಕರ ಮುತುವರ್ಜಿಯಿಂದ ನಿವಾರಿಸಲಾಗಿದೆ. ಈ ನಮ್ಮ ಅವಽಯಲ್ಲಿ ದೇವಳದ ಹಕ್ಕಿನ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ದೇವಾಲಯಕ್ಕೆ ಹಿಂದಿರುಗಿಸಿರುವುದರಿಂದ ಒಟ್ಟು 61 ಸೆಂಟ್ಸ್ ಭೂಮಿ ಹೆಚ್ಚುವರಿಯಾಗಿ ದೇವಾಲಯಕ್ಕೆ ಸೇರಿದಂತಾಗಿದೆ. ನಮ್ಮ ಈ ಹಿಂದಿನ ಅವಽಯಲ್ಲಿ 23 ಸೆಂಟ್ಸ್ ಭೂಮಿಯನ್ನು ಭಕ್ತ ಜನತೆಯ ಸಹಕಾರದಿಂದ ದೇವಳಕ್ಕೆ ಖರೀದಿಸಿ ನೀಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ದೇವಾಲಯದ ಪ್ರತಿಕಾರ್ಯದಲ್ಲೂ ಸರಕಾರದ ಹಸ್ತಕ್ಷೇಪ ಸರಿಯಲ್ಲ- ಕರುಣಾಕರ ಸುವರ್ಣ
ಅಂದು ನಾವು ಸಂಕಲ್ಪಿಸಿದ ಭೂಮಿ ಖರೀದಿಯ ಪ್ರಕ್ರಿಯೆ ನಾಲ್ಕು ವರ್ಷಗಳ ಸುಧಿರ್ಘ ಕಾಯುವಿಕೆಯ ಬಳಿಕವಾದರೂ ಅನುಷ್ಠಾನವಾಯಿತ್ತೆಂಬ ಸಮಾಧಾನ ಆಗಿದೆ. ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿನ ಸರಕಾರದ ಅನಗತ್ಯ ಹಸ್ತಕ್ಷೇಪ, ಅಧಿಕಾರಿಗಳು ಹೇಳಿದ ರೀತಿಯಲ್ಲಿಯೇ ಕಾಮಗಾರಿಗಳು ನಡೆಯಬೇಕೆಂದು ತಾಕೀತು ಮಾಡುವುದು ಇದೆಲ್ಲವೂ ದೇವಾಲಯದ ಸಂಪತ್ತನ್ನು ಅನಪೇಕ್ಷಿತ ವೆಚ್ಚಕ್ಕೆ ಒಳಪಡಿಸಿದಂತಾಗುತ್ತಿದೆ. ಈ ಹಿಂದೆ ಸುತ್ತು ಪೌಳಿಯ ನಿರ್ಮಾಣದ ವೇಳೆಯಲ್ಲಿಯೂ ವ್ಯವಸ್ಥಾಪನಾ ಸಮಿತಿಯ ಆಕಾಂಕ್ಷೆಗಳಿಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಇಂದಿಗೂ ಕೂಡಾ ಅದು ಭಕ್ತ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಇಲಾಖೆಗಳು ನಿಗಾವಿರಿಸಬೇಕೇ ವಿನಹ ಅನಗತ್ಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ತಿಳಿಸಿದ್ದಾರೆ.