ಪುತ್ತೂರು: ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪದಲ್ಲಿ ಹಿಂಜಾವೇ ಮುಖಂಡ ನರಸಿಂಹ ಶೆಟ್ಟಿ ಮಾಣಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸೆ.4ರಂದು ರಾತ್ರಿ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಮನೆ ಬಳಿಯಿರುವ ಹಟ್ಟಿಯಿಂದ ಕಿಡಿಗೇಡಿಗಳು ದನವೊಂದನ್ನು ಕಳವು ಮಾಡಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ನರಸಿಂಹ ಶೆಟ್ಟಿ ಮಾಣಿ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಇದು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಹಾಗೂ ಸಾರ್ವಜನಿಕ ವಲಯದಲ್ಲಿ ಭಯಭೀತಿ ಉಂಟಾಗುವ ಸಾಧ್ಯತೆಗಳಿರುವುದರಿಂದ ನರಸಿಂಹ ಶೆಟ್ಟಿ ಮಾಣಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ನರಸಿಂಹ ಶೆಟ್ಟಿ ಅವರು ’ಚಾಮುಂಡಿ ಬೆಟ್ಟ ಚಲೋ’ ಕಾರ್ಯಕ್ರಮಕ್ಕೆಂದು ಮೈಸೂರಿಗೆ ತೆರಳುತ್ತಿದ್ದ ವೇಳೆ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ನರಸಿಂಹ ಶೆಟ್ಟಿ ಪರ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವಾದಿಸಿದ್ದರು.