3 ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಜಾಥಾ | ಸಹಕಾರಿಗಳ ಸಮಾಗಮ-ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ, ಸಹಕಾರಿಗಳೆಲ್ಲರೂ ಹೋರಾಡಬೇಕು ಎನ್ನುವ ದೃಷ್ಟಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಯೂನಿಯನ್ ವತಿಯಿಂದ ಸೆ.14ರಂದು ಸಹಕಾರ ಬಂಧುಗಳ ಧರ್ಮಸ್ಥಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಎರಡೂ ಜಿಲ್ಲೆಗಳಿಂದ ಸುಮಾರು 3 ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಸುಮಾರು 15 ಸಾವಿರಕ್ಕೂ ಅಽಕ ಸಹಕಾರಿ ಬಂಧುಗಳು ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.
‘ಸುದ್ದಿ’ ಜೊತೆಗೆ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳುಮಾಡಲು ಸ್ಥಾಪಿತ ಹಿತಾಸಕ್ತಿಗಳು ಹಲವಾರು ದಿನಗಳಿಂದ ಷಡ್ಯಂತ್ರ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಎಸ್‌ಐಟಿ ತನಿಖೆಯ ಮೂಲಕ ನಿಜಾಂಶ ಬೆಳಕಿಗೆ ಬರುತ್ತಿದೆ. ಧರ್ಮಸ್ಥಳ ಕ್ಷೇತ್ರ, ಧರ್ಮಾಽಕಾರಿಗಳ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಸುಳ್ಳು ಎನ್ನುವುದು ಸಾಬೀತಾಗುತ್ತಿದೆ. ರಾಜ್ಯದ ಜನಪ್ರತಿನಿಽಗಳು, ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳು ಕೆಲವು ದಿನಗಳಿಂದ ಧರ್ಮಜಾಗೃತಿ ಯಾತ್ರೆಯನ್ನು ಮಾಡುತ್ತಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಡಾ.ಎಂ.ಮೋಹನ ಆಳ್ವರು ದ.ಕ., ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರನ್ನು ಸೇರಿಸಿಕೊಂಡು ಸಭೆ ನಡೆಸಿ ನಾವೆಲ್ಲರೂ ಸೇರಿ ಧರ್ಮಜಾಗೃತಿ ಸಭೆಯನ್ನು ನಡೆಸಬೇಕೆಂದು ಹೇಳಿದ್ದರು. ಈ ಕೇಂದ್ರ ಸಮಿತಿಯ ನಿರ್ಣಯದಂತೆ ಪ್ರತೀ ತಾಲೂಕಿನಲ್ಲಿ ಧರ್ಮಜಾಗೃತಿ ಸಮಾವೇಶವನ್ನು ನಡೆಸುತ್ತಿದ್ದೇವೆ. ಪುತ್ತೂರಿನಲ್ಲೂ ಅಭೂತಪೂರ್ವವಾಗಿ ಧರ್ಮಜಾಗೃತಿ ಸಮಾವೇಶ ನಡೆದಿದೆ. ಇದೀಗ ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಬಂಧುಗಳು ಸೇರಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರ ರತ್ನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಪೂರ್ವಭಾವಿ, ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 1500ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳಿವೆ. ಸೆ.14ರಂದು ಉಡುಪಿ, ದ.ಕ. ಜಿಲ್ಲೆಯ ಸಹಕಾರ ಬಂಧುಗಳ ಭಾಗವಹಿಸುವಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಉಡುಪಿ, ಕುಂದಾಪುರ, ಬೈಂದೂರು ಭಾಗದಿಂದ ಹೊರಟ ವಾಹನಗಳು ಬೆಳಗ್ಗೆ 10.30ಕ್ಕೆ ಕಾರ್ಕಳವನ್ನು ತಲುಪಿ, 12 ಗಂಟೆಗೆ ಉಜಿರೆಯನ್ನು ತಲುಪಲಿವೆ. ಮಂಗಳೂರು ಕಡೆಯಿಂದ ತೆರಳುವ ವಾಹನಗಳು ಬಂಟ್ವಾಳ, ಗುರುವಾಯನಕೆರೆ ರಸ್ತೆಯ ಮೂಲಕ ತೆರಳಿ 12 ಗಂಟೆಗೆ ಉಜಿರೆಯನ್ನು ತಲುಪಲಿವೆ. ಪುತ್ತೂರು, ಸುಳ್ಯ, ಕಡಬ ತಾಲೂಕುಗಳಿಂದ ತೆರಳುವ ವಾಹನಗಳು ಉಪ್ಪಿನಂಗಡಿ ಮೂಲಕ ತೆರಳಿ ಉಜಿರೆಯನ್ನು 12 ಗಂಟೆಗೆ ಸೇರಿಕೊಳ್ಳಲಿವೆ. ಸುಮಾರು 3 ಸಾವಿರಕ್ಕೂ ಅಧಿಕ ವಾಹನಗಳು ಈ ಯಾತ್ರೆಯಲ್ಲಿ ಭಾಗವಹಿಸಲಿವೆ. ಒಂದು ವಾಹನದಲ್ಲಿ ತಲಾ ಐವರು ಸಹಕಾರಿಗಳಂತೆ ಸಹಕಾರಿ ಶಾಲುಗಳನ್ನು ಧರಿಸಿಕೊಂಡು ಸಹಕಾರಿ ಬಂಧುಗಳು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ತಾಲೂಕಿನಿಂದ 250-300 ವಾಹನಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದು, ವಾಹನಗಳು ಸಹಕಾರಿ ಧ್ವಜವನ್ನು ಹೊಂದಿರಲಿವೆ. ಈ ಮೂಲಕ ಸಹಕಾರಿ ಬಂಧುಗಳ ಸಮಾಗಮ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಮಾಹಿತಿ ನೀಡಿದರು.
ಮಧ್ಯಾಹ್ನ 12 ಗಂಟೆಗೆ ಉಜಿರೆಯಿಂದ ವಾಹನ ಜಾಥಾ ಹೊರಡಲಿದೆ. ಧರ್ಮಸ್ಥಳ ದ್ವಾರದ ಬಳಿ ಕ್ಷೇತ್ರದ ಪ್ರತಿನಿಧಿಗಳು ಸ್ವಾಗತ ಕೋರಲಿದ್ದಾರೆ. ದ್ವಾರದ ಬಳಿಯಿಂದ ಪಾದಯಾತ್ರೆಯ ಮೂಲಕ ಕ್ಷೇತ್ರದವರೆಗೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಬಳಿಕ ಅಮೃತವರ್ಷಿಣಿ ಸಭಾಂಗಣದಲ್ಲಿ ಎಲ್ಲರೂ ಸಮಾವೇಶಗೊಳ್ಳಲಿದ್ದಾರೆ. ಅಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಲಿದ್ದಾರೆ. ಸಹಕಾರ ರತ್ನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರಿಗಳಿಗೆ ಶುಭಹಾರೈಸಲಿದ್ದಾರೆ. ಇದೊಂದು ಐತಿಹಾಸಿಕ, ಅಭೂತಪೂರ್ವ ಕಾರ್ಯಕ್ರಮವಾಗಲಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ವಿವರಿಸಿದರು.
ಕಳೆದ 15 ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಗೊಳ್ಳುವ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಽಕಾರಿಗಳು ಪ್ರಸಾದ ರೂಪದಲ್ಲಿ 50 ಸಾವಿರದಿಂದ 2 ಲಕ್ಷ ರೂ.ಗಳವರೆಗೆ ದೇಣಿಗೆ ನೀಡಿ ಸಹಕರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಧರ್ಮಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಗಳೆಲ್ಲರೂ ಹೋರಾಡಬೇಕು ಎನ್ನುವ ದೃಷ್ಟಿಯಿಂದ ಸೆ.14ರಂದು ಧರ್ಮಸ್ಥಳ ಯಾತ್ರೆಯನ್ನು ಕೈಗೊಂಡಿದ್ದೇವೆ.
-ಶಶಿಕುಮಾರ್ ರೈ ಬಾಲ್ಯೊಟ್ಟು,
ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್