ಸೆ.22ಕ್ಕೆ ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

0


ಪುತ್ತೂರು: ಡಾ. ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ 71ನೇ ವರ್ಷದ ಕಾರ್ಯಕ್ರಮ ಸೆ.22 ರಿಂದ ಅ.2ರ ತನಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಕಳೆದ ವರ್ಷ ಕಾರಣಾಂತರಗಳಿಂದಾಗಿ ದಸರಾ ನಾಡಹಬ್ಬ ಕಾರ್ಯಕ್ರಮ ಮಾಡಲು ತೊಂದರೆ ಆಗಿತ್ತು. ಆದರೆ ಈ ಬಾರಿ ದಸರಾ ನಾಡಹಬ್ಬ ವೈಶಿಷ್ಟ್ಯ ಪೂರ್ಣವಾಗಿ ನಡೆಯಲಿದೆ. ಧರ್ಮ, ಸಾಮಾಜಿಕ ಚಿಂತನೆ ಮಾಡುವ ದೃಷ್ಟಿಯಿಂದ ಪ್ರತಿ ದಿನ ಉತ್ತಮ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.22ರಂದು ಸಂಜೆ ಗಂಟೆ 6.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಬಾಲಚಂದ್ರನ್ ಅವರಿಂದ ಹಿಂದೂಸ್ಥಾನಿ ಶೈಲಿಯ ಭಜನಾ ಭಕ್ತಿಗೀತೆ, ರಾತ್ರಿ ತನ್ವಿ ಶೆಣೈ ಅವರಿಂದ ಭಕ್ತಿಗೀತೆಗಳು ನಡೆಯಲಿದೆ. ಸೆ.23ಕ್ಕೆ ಸಂಜೆ ಕಲಾ ಸಮಯೋಜಿತ ಶಿಕ್ಷಣದ ಕುರಿತು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಭಾರ್ಯ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮಹಿಳಾ ಯಕ್ಷಗಾನ ದಕ್ಷಯಜ್ಞ ನಡೆಯಲಿದೆ. ಸೆ.24ಕ್ಕೆ ದಕ್ಷಿಣ ಕನ್ನಡದ ದೇವಸ್ಥಾನಗಳ ಕುರಿತು ಬೆಳ್ತಗಂಡಿ ಪ್ರೌಢಶಾಲೆಯ ಸಹಾಯಕ ಗುರು ಪ್ರದೀಪ್ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.25ಕ್ಕೆ ಸಂಜೆ ಸಹಿತ್ಯಾಭಿರುಚಿ ಹೆಚ್ಚಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕುರಿತು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಅಂಬಿಕಾ ಶಿಕ್ಷಣ ಸಂಸ್ಥೆಯ ವಿದ್ಯದಾರ್ಥಿಗಳಿಂದ ಯಕ್ಷ ವೈಭವ ಪ್ರದರ್ಶನಗೊಳ್ಳಲಿದೆ.

ಸೆ.26ಕ್ಕೆ ಸಂಜೆ ತುಳುನಾಡಿನ ಮಾರ್ನಮಿ ಕುರಿತು ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಎಸ್ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.27ಕ್ಕೆ ಸಂಜೆ ಮಾನವೀಯ ಮೌಲ್ಯಗಳು ಕುರಿತು ವಕೀಲೆ ಹರೀಣಾಕ್ಷಿ ಜೆ ಶೆಟ್ಟಿಯವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ನೃತ್ಯಸಂಭ್ರಮ ಭರತಾಂಜಲಿಯಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸೆ.28ಕ್ಕೆ ಸಂಜೆ ರಾಷ್ಟ್ರೀಯ ಸೇನಾದಳ ಕುರಿತು ಮೇಜರ್ ಎಂ.ಎನ್.ಚೆಟ್ಟಿಯಾರ್ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ನಾಟ್ಯನಿಲಯಂ ಮಂಜೇಶ್ವರ ಅವರಿಂದ ನೃತ್ಯೋತ್ಸವಂ ಪ್ರದರ್ಶನಗೊಳ್ಳಲಿದೆ. ಸೆ.29ಕ್ಕೆ ಸಂಜೆ ಮಕ್ಕಳ ಶಿಕ್ಷಣ ಹೇಗಿರಬೇಕೆಂಬ ಕುರಿತು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜಿ.ಕೃಷ್ಣ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಪ್ರದರ್ಶನಗೊಳ್ಳಲಿದೆ. ಸೆ.30ಕ್ಕೆ ಸಂಜೆ ಜಾಗತೀಕರಣ ಮತ್ತು ನಾವು ಕುರಿತು ಕಲ್ಲಡ್ಕ ಶ್ರೀರಾಮ ಶಾಲೆಯ ಪ್ರಾಂಶುಪಾಲ ಯತಿರಾಜ್ ಪೆರಾಜೆ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ವಿದುಷಿ ಸ್ವರ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅ.1ಕ್ಕೆ ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಗಾನಸಿರಿ ಕಲಾಕೇಂದ್ರದಿಂದ ಗಾನ ವೈಭವ ನಡೆಯಲಿದೆ, ಅ.2ಕ್ಕೆ ಬೆಳಿಗ್ಗೆ ಗಂಟೆ 9.30 ರಿಂದ ವಿಟ್ಲ ಜೋಶಿ ಮತ್ತು ನಯನ ಕುಮಾರ್ ಪ್ರತಿಷ್ಠಾನ ಮತ್ತು ಯಕ್ಷರಂಗ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್, ಕಾರ್ಯದರ್ಶಿ ಎಂ.ಟಿ.ಜಯರಾಮ ಭಟ್, ಉಪಾಧ್ಯಕ್ಷ ಈಶ್ವರಚಂದ್ರ ಡಿ.ಎನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here